ಮೋದಿ ಗ್ಯಾರಂಟಿ ವದಂತಿ
– ಅಂಚೆ ಕಚೇರಿಗೆ ಮುಗಿಬಿದ್ದ ಮಹಿಳೆಯರು
– ಉಳಿತಾಯ ಖಾತೆ ತೆರೆದರೆ ₹3000 ಜಮೆ
NAMMUR EXPRESS NEWS
ಹುಬ್ಬಳ್ಳಿ: ಕಡಿಮೆ ಬೆಲೆಗೆ ಸಿಲಿಂಡರ್ ಪಡೆಯಲು ಕೆವೈಸಿ ಅಪ್ಡೇಟ್ ವದಂತಿ ಆಯ್ತು, ಈಗ ಅಂಚೆ ಇಲಾಖೆಯ ಸರದಿ. ಅಂಚೆ ಇಲಾಖೆ ಯಲ್ಲಿ ಉಳಿತಾಯ ಖಾತೆ ತೆರೆದರೆ ಕೇಂದ್ರ ಸರ್ಕಾರದಿಂದ 3 ಸಾವಿರ ಜಮಾ ಮಾಡಲಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ನಗರದ ಅಂಚೆ ಇಲಾಖೆ ಕಚೇರಿಗಳು ಕಳೆದ 3-4 ದಿನ ಗಳಿಂದ ಜನರಿಂದ ತುಂಬಿ ತುಳುಕುತ್ತಿವೆ.
ಕೇಂದ್ರ ಸರ್ಕಾರದ ಮೋದಿ ಗ್ಯಾರಂಟಿ ಯೋಜನೆ ಅಡಿ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆದ ಬಿಪಿಎಲ್ ಕಾರ್ಡ್ ಹೊಂದಿದ ಮಹಿಳೆಯರ ಖಾತೆಗೆ ₹ 3 ಸಾವಿರ ಜಮಾ ಮಾಡಲಾಗುತ್ತದೆ ಎಂದು ನಗರದಾದ್ಯಂತ ವದಂತಿ ಹರಡಿದೆ. ಇದರಿಂ ದಾಗಿ ನಗರದ ಅಂಚೆ ಕಚೇರಿಗಳಿಗೆ ಮಹಿಳೆ ಯರು ಖಾತೆ ತೆರೆಯಲು ಮುಗಿಬೀಳುತ್ತಿ ದ್ದಾರೆ. ಬೆಳಗ್ಗೆ 7 ಗಂಟೆಗೆ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಖಾತೆ ತೆರೆಯಲು ಸಾಲುಗಟ್ಟಿ ನಿಂತಿರುವುದು ಸಾಮಾನ್ಯವಾಗಿದೆ. ಇಲ್ಲಿನ ಉಪ ಅಂಚೆ ಕಚೇರಿಗಳ ಎದುರು ನೂರಾರು ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಕಂಡು ಬಂತು. ಕಳೆದ ಡಿಸೆಂಬರ್ ತಿಂಗಳಲ್ಲಿ ಇ-ಕೆವೈಸಿ ಮಾಡಿಸದೇ ಇದ್ದರೆ ಗ್ಯಾಸ್ ಕಡಿತಗೊಳ್ಳುತ್ತದೆಂಬ ವದಂತಿ ಹಬ್ಬಿತ್ತು.