ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ.. ಹುಷಾರ್!
– ವಯನಾಡು, ಶಿರೂರು, ಕೊಡಗು ಇನ್ನೆಷ್ಟು ಅನಾಹುತ ಬೇಕು?
– ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಟ
– ಮನುಷ್ಯನ ಅತೀ ದುರಾಸೆ ಅಂತ್ಯಕ್ಕೆ ಕಾರಣ ಆಗುತ್ತಾ?
NAMMUR EXPRESS NEWS
ಪ್ರಕೃತಿಯ ಸೌಂದರ್ಯವು ವರವೋ ಶಾಪವೋ ಎನ್ನುವ ಮಾತು ಇದೀಗ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಗ್ರಾಸವಾಗಿದೆ. ಮನುಷ್ಯನಿಗೆ ಏನೂ ಬೇಕೋ ಎಲ್ಲವನ್ನೂ ಪ್ರಕೃತಿ ಮಾತೆ ನೀಡಿದ್ದಾಳೆ. ಆದರೆ ಮನುಷ್ಯ ತನ್ನ ಸ್ವಾರ್ಥ ಹಾಗೂ ದುರಾಸೆಗಾಗಿ ಇಡೀ ನೈಸರ್ಗಿಕ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿ ಮಾತೆಯು ತನ್ನ ಉಳಿವಿಗಾಗಿ ಹೋರಾಡುತ್ತಿರುವ ಈ ಸಂದರ್ಭವೂ ಮನುಷ್ಯನನ್ನೇ ಬಲಿ ಪಡೆಯುತ್ತಾ ಇಡೀ ಮಾನವ ಸಂಕುಲವನ್ನೇ ಅಲುಗಾಡಿಸುತ್ತಿದೆ.
ಬೆಟ್ಟ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು,ಭೂಮಿಯ ಸ್ಥಿರತೆಯನ್ನು ನಾಶ ಮಾಡುತ್ತಾ ಸಂಪೂರ್ಣ ಭೂಮಂಡಲವನ್ನೇ ಕಾಂಕ್ರೇಟ್ ಕಾಡನ್ನಾಗಿ ಪರಿವರ್ತಿಸುತ್ತಿರುವುದರಿಂದ ಪರಿಸರಮಾತೆಯೇ ತನ್ನಲ್ಲಿ ಉಳಿದ ಕೆಲವೇ ಮರಗಳನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಪಡುತ್ತಿರುವದರ ಹಿನ್ನೆಲೆಯಲ್ಲಿ ಭೂಮಿ ಕುಸಿಯುವ ಮಟ್ಟವನ್ನು ತಲುಪುತ್ತಿದೆ.
ಎಲ್ಲೆಲ್ಲೂ ರಸ್ತೆ ಫ್ಲೈಓವರ್, ಕಾಂಕ್ರೀಟ್ ಕಾಡು ,ಅಪಾರ ಕಟ್ಟಡ ನಿರ್ಮಾಣ ,ರಸ್ತೆ ಮತ್ತು ಫ್ಲೈ ಓವರ್ ಗಳ ನಿರ್ಮಾಣದಿಂದಾಗಿ ನೆಲದ ಸಮತೋಲನತೆ ನಾಶವಾಗುತ್ತಿದ್ದು, ಈ ಭಾಗಗಳಲ್ಲಿ ನೀರಿನ ಪ್ರವಾಹ ನಿಯಂತ್ರಣ ಕಷ್ಟವಾಗುವುದರೊಂದಿಗೆ ಭೂಮಿಯ ಶಕ್ತಿಯ ಶೋಷಣೆ ಹೆಚ್ಚಾಗುತ್ತಿದೆ. ಹಾಗಾಗಿ ಮನುಷ್ಯನ ಆಸೆಗೆ ಮಿತಿಯೇ ಇಲ್ಲದೆ ಈ ರೀತಿ ಹಸಿರನ್ನು ನಾಶ ಮಾಡುತ್ತಿರುವುದರಿಂದಾಗಿ ಪ್ರಕೃತಿಯು ಕೊಪಗ್ರಸ್ತಳಾಗಿ ಅಟ್ಟಹಾಸ ಮೆರೆದು ಮನುಷ್ಯನ ಸೊಕ್ಕು ಅಹಂಕಾರಕ್ಕೆ ಬರೆ ಎರೆದಿದ್ದಾಳೆ. ಕೇರಳದ ವಯನಾಡು ,ಕರ್ನಾಟಕದ ಉತ್ತರ ಕನ್ನಡದ ಜಿಲ್ಲೆಯ ಸುತ್ತಮುತ್ತದ ಪ್ರದೇಶಗಳಲ್ಲಿ ಭೂ ಕುಸಿತ ಹಾಗೂ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಪ್ರಾಂತ್ಯ, ಉತ್ತರ ಹಾಗೂ ಈಶಾನ್ಯ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾಹ ಪರಿಸ್ಥಿತಿಗಳು ಸಂಭವಿಸಿವೆ. ಹಲವೆಡೆ ಅದೆಷ್ಟೋ ಜೀವಗಳು ಬಲಿಯಾಗಿದ್ರೆ ಮತ್ತೊಂದೆಡೆ ಸಾವು ಬದುಕಿನ ಮದ್ಯೆ ವದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾನವ ಸಂಕುಲದ ತಪ್ಪುಗಳಿಂದ ಕ್ರೋಧಳಾಗಿ ವ್ಯಾಘ್ರ ನರ್ತನದಂತೆ ರುದ್ರಾವತಾರ ತಾಳಿರುವ ಪ್ರಕೃತಿಯ ಮಾತೆಯ ಕೋಪಕ್ಕೆ ಈವರೆಗೂ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದಲ್ಲಿ 380 ಜನ ದುರಂತ ಸಾವಿಗೀಡ್ ಆಗಿದ್ದು ಈವರೆಗೂ 150ಕ್ಕೂ ಹೆಚ್ಚು ಜನರ ಮೃತ ದೇಹವೇ ಸಿಕ್ಕಿಲ್ಲ. ಜೊತೆಗೆ ನೂರಾರು ಕುಟುಂಬಗಳು ಆಶ್ರಯವಿಲ್ಲದೆ ಆಕ್ರಂದಿಸುವುದರ ಜೊತೆಗೆ 1546 ಎಕರೆಯ ರೈತನ ಪಸಲು ಹಾನಿಗೊಳಗಾಗಿದೆ. ಇನ್ನೊಂದಡೆ ಕರ್ನಾಟಕದ ಶಿರೂರಿನಲ್ಲೂ ನಡೆದ ಭೂಕುಸಿತದಲ್ಲಿ 8 ಎಂಟು ಜನರ ಪ್ರಾಣ ಪಕ್ಷಿಗಳು ಹಾರಿ ಹೋಗಿವೆ. ಇದರೊಂದಿಗೆ ಶಿರೂರು ಕೊಡಗಿನಿಂದ ಇದುವರೆಗೂ ಹಲವಾರು ಮನೆಗಳು ನೆಲೆಸಮವಾಗಿ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯಲ್ಲಿ ಮೇಘ ಸ್ಫೋಟದ ಕಾರಣ ಹಲವಾರು ಕುಟುಂಬಗಳನ್ನ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ.
ಮಾನವ ಸಂಕುಲ ಇನ್ನಾದರೂ ಎಚ್ಚೆತ್ತು ಮರ ಗಿಡ ಬೆಳೆಸಿ ಪೋಷಿಸಿದರೆ ಒಳಿತಾಗಬಹುದು ಅದರ ಬದಲಾಗಿ ಸ್ವಾರ್ಥವೇ ನನ್ನ ಜೀವನ ಎಂದು ಬೀಗಿದ್ದಲ್ಲಿ ಪ್ರಕೃತಿ ನೀಡಿದ ಸೂಚನೆ ಇಲ್ಲಿಗೇ ಅಂತ್ಯವಾಗದೇ ಇನ್ನಷ್ಟು ಕೆಟ್ಟ ಪರಿಣಾಮ ಬೀರಲು ಸಾಧ್ಯವಾಗಲಿದೆ. “ಪ್ರಕೃತಿ ಒಲಿದರೆ ನಾರಿ, ಮುನಿದರೆ ಮಾರಿ” ಎಂಬುದುಕ್ಕೆ ಮಾನವನ ದುರಾಸೆಯೇ ಸಾಕ್ಷಿಯಾಗಿದೆ.