ಜಯ ಹೇ ಭಾರತ ಮಾತೆ..!
– 78ನೇ ಸ್ವಾತಂತ್ರ್ಯ ಹಬ್ಬಕ್ಕೆ ದೇಶ ಸಜ್ಜು
– ದೇಶ ಪ್ರೇಮದ ದಿನವನ್ನು ಆಚರಿಸೋಣ
NAMMUR EXPRESS NEWS
ಭಾರತವು ಆಗಸ್ಟ್ 15ರ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಸಜ್ಜಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯ ರಂಗು ಎಲ್ಲೆಡೆಯೂ ಬೀರಿ, ಸಡಗರ ಸಂಭ್ರಮದಿಂದ ಆಚರಣೆಯ ತಯಾರಿ ಜರುಗುತ್ತಿದೆ.
78ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಸ್ವಾತಂತ್ರ್ಯ ಸಂಗ್ರಾಮದ ಅಂದಿನ ಚಿತ್ರಣ ನಮ್ಮ ಮುಂದೆ ಬರುತ್ತದೆ .ದೇಶವನ್ನು ಪ್ರೀತಿಸುತ್ತಿದ್ದ ಜನರು ,ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ಜನರ ಹೆಸರು ,ತ್ಯಾಗ ,ದೇಶಭಕ್ತಿ ,ದೇಶಪ್ರೇಮ ನಮ್ಮ ಕಣ್ಣ ಮುಂದೆ ಹಾದು ಹೋಗುತ್ತದೆ.
ನಮ್ಮ ದೇಶದ ಸಾರ್ವಭೌಮತೆಯನ್ನು ಎತ್ತಿ ಹಿಡಿಯುವುದೇ ಸ್ವಾತಂತ್ರ್ಯವಾಗಿದ್ದು ,ಈ ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಬ್ರಿಟಿಷರ ಆಳ್ವಿಕೆಯಿಂದ ಹೊರ ಬಂದು ಪೂರ್ಣ ಸ್ವರಾಜ್ಯ ದೇಶವನ್ನು ನಿರ್ಮಿಸಿದ ಲಕ್ಷಾಂತರ ಹೋರಾಟಗಾರರ ಶ್ರಮ, ಬಲಿದಾನದ ಮಹತ್ವವನ್ನು ಪ್ರತಿಕ್ಣ, ಪ್ರತಿದಿನವೂ ಭಾರತದ ಪ್ರಜೆಗಳಾದ ನಾವು ಸ್ಮರಿಸುವಂತಾಗಬೇಕು.
ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂದು ಅರಿತು ದೇಶಕ್ಕಾಗಿ ಏನನ್ನಾದರೂ ಮಾಡುವಂತಹ ಮನೋಭಾವ ನಮ್ಮಲ್ಲಿ ಮೂಡಬೇಕು, ಅಂದಾಗಲೇ ಭಾರತೀಯ ಪ್ರಜೆಯಾಗಿ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ.
ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆಯುತ್ತಿದ್ದು ‘ವಿಕಸಿತ ಭಾರತ’ ಎಂಬ ವಿಷಯವನ್ನ ಹೊಂದಿದೆ. ನವದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಕರ್ನಾಟಕದಿಂದ 56 ಗಣ್ಯರನ್ನು ಆಹ್ವಾನಿಸಲಾಗಿದೆ. ಸ್ವಾತಂತ್ರ್ಯ ದಿನದ ಆಚರಣೆಯ ಬಳಿಕ ರಾಷ್ಟ್ರಪತಿಗಳು ಆಯೋಜಿಸಿರುವ ಚಹಾ ಕೂಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಸರ್ಕಾರವು ಹರ್ ಘರ್ ತಿರಂಗಾ ಅಭಿಯಾನದ ಮೂಲಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದೆ. ನಾಗರಿಕರು ತಮ್ಮ ಮನೆ ಮತ್ತು ವ್ಯವಹಾರ ಸ್ಥಳಗಳಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲು ಕರೆ ನೀಡಿದೆ.
ಶಾಲಾ ಕಾಲೇಜು ಗಳಲ್ಲಿ ,ಕಚೇರಿಗಳಲ್ಲಿ, ಮಾಲ್ಗಳಲ್ಲಿ ಜನರು ಸ್ವಾತಂತ್ರೋತ್ಸವ ಆಚರಿಸಲು ಸಿದ್ದರಾಗಿದ್ದು,ಗಣ್ಯರಿಂದ ಧ್ವಜಾರೋಹಣವನ್ನು ಮಾಡಿ ಗೌರವ ಸಲ್ಲಿಸಲಾಗತ್ತೆ. ಮಕ್ಕಳಿಂದ ಭಾಷಣ , ನಾಟಕ, ನೃತ್ಯ ಹೀಗೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಜೈ ಭಾರತ್ ಘೋಷಣೆ ಮೊಳಗಲಿದೆ.
ಸ್ವಾತಂತ್ರ್ಯ ದಿನಾಚರಣೆಯ ಸಂ್ರಮಕ್ಕೆ ಸಾಕ್ಷಿಯಾಗಲು ಇಂದೇ ಧ್ವಜಸ್ತಂಭ ಹಾಗೂ ಹಲವೆಡೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗುತ್ತಿದ್ದು, ಸಂಭ್ರಮ ಎಲ್ಲೆಡೆಯೂ ಮನೆಮಾಡಿದೆ.