ನಾಗರಪಂಚಮಿ ವಿಶೇಷ ಏನು?
– ನಾಗರ ಪಂಚಮಿ ಆಚರಣೆ ಹೇಗೆ?
– ನಾಗನ ಪೂಜೆಯಿಂದ ಏನೇನು ಲಾಭ?
NAMMUR EXPRESS NEWS
ನಾಗರ ಪಂಚಮಿ ಹಬ್ಬವನ್ನು ಕರ್ನಾಟಕದಾದ್ಯಂತ ಸಂಭ್ರಮದಿಂದ ಆಚರಿಸಲಾಗತ್ತೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು (ಪಂಚಮಿ) ಈ ಬಾರಿ ಆಗಸ್ಟ್ 9, 2024 ರಂದು ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ವರಮಹಾಲಕ್ಷ್ಮಿ ಹಬ್ಬ, ಕೃಷ್ಣಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ.
ಕರ್ನಾಟಕ ನಾಗಬನಗಳ ಪ್ರದೇಶವಾಗಿದ್ದು, ಕರ್ನಾಟಕದಲ್ಲಿ ನಾಗಬನಗಳ ಹತ್ತಿರ ನಾಗದೇವತೆಯ ಮೂರ್ತಿಯನ್ನು ಸ್ಥಾಪಿಸಿ ಅದರ ಪೂಜೆಯನ್ನು ಮಾಡುವ ಪರಂಪರೆಯಿದೆ. ಮನೆಗಳ ಹತ್ತಿರದಲ್ಲಿಯೇ ನಾಗಬನಗಳಿದ್ದರೂ, ಅವುಗಳಿಂದ ಯಾರಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬುದೇ ವಿಶೇಷನೀಯ . ನಾಗರಪಂಚಮಿಯು ನಾಗದೇವತೆಯ ಮಹತ್ವಪೂರ್ಣ ಹಬ್ಬವಾಗಿದ್ದು ಈ ದಿನ ದೇಶದೆಲ್ಲೆಡೆ ನಾಗಗಳ ಪೂಜೆಯನ್ನು ಮಾಡುತ್ತಾರೆ.
ನಾಗರಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲು ಎರೆದು ಆಚರಿಸುವ ಹಬ್ಬವಾಗಿದೆ. ಈ ಹಬ್ಬಕ್ಕೆ ಗರುಡ ಪಂಚಮಿ ಎಂಬ ಹೆಸರು ಕೂಡ ಇದೆ. ನಾಗರ ಪಂಚಮಿಯಂದು ಶ್ರದ್ಧಾ ಭಕ್ತಿಯಿಂದ ನಾಗರಕಲ್ಲಿಗೆ ಅಥವಾ ಹುತ್ತಗಳಿಗೆ ಹಾಲೆರೆದು ಪೂಜೆ ಸಲ್ಲಿಸಲಾಗುತ್ತದೆ. ನಾಗಪ್ಪನಿಗೆ ಹಲವು ವಿಧದ ಉಂಡೆಗಳು, ಕರಿ ಎಳ್ಳಿನಿಂದ ಮಾಡಿದ ಉಂಡೆ, ಚಿಗಳಿ ತಂಬಿಟ್ಟು, ಹಸಿ ಅಕ್ಕಿ ಮತ್ತು ಬೆಲ್ಲ ಬೆರೆಸಿ ಮಾಡಿದ ತಂಬಿಟ್ಟಿನ ನೈವೇದ್ಯವನ್ನು ಮಾಡಲಾಗುತ್ತದೆ.
ಪುರಾಣ ಕತೆಯೊಂದರ ಪ್ರಕಾರ ಹಾವು ಕಚ್ಚಿ ಮಡಿದ ತನ್ನ ಸಹೋದರನನ್ನು ಸಹೋದರಿಯೊಬ್ಬಳು ಬದುಕಿಸಿಕೊಂಡ ದಿನ ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯಾಗಿತ್ತು. ಹಾವನ್ನು ಭಕ್ತಿಭಾವದಿಂದ ಪೂಜಿಸಿ ತನ್ನ ಅಣ್ಣನನ್ನು ತಂಗಿ ಬದುಕಿಸಿಕೊಂಡ ದಿನವಾಗಿದ್ದರಿಂದ ಈ ದಿನವನ್ನು ಭ್ರಾತೃತ್ವದ ಸಂಕೇತವಾಗಿಯೂ ಕೆಲವೆಡೆ ಆಚರಿಸಲಾಗುತ್ತದೆ.
ಜನಮೇಜಯ ಎಂಬ ರಾಜ ತನ್ನ ತಂದೆ ಪರೀಕ್ಷಿತನ ಸಾವಿಗೆ ಹಾವು ಕಾರಣ ಎಂದು ತಿಳಿದು ಭೂಲೋಕದಲ್ಲಿರುವ ಸರ್ಪಸಂಕುಲವನ್ನೆಲ್ಲ ನಾಶ ಮಾಡುವ ಶಪಥ ಮಾಡಿ, ಸರ್ಪಯಜ್ಞ ಮಾಡಲು ಹೊರಡುತ್ತಾನೆ. ಆದರೆ ಪ್ರಾಣಿ ಹಿಂಸೆ ಮಹಾಪಾಪ ಎಂಬುದನ್ನು ಸಂತರೊಬ್ಬರ ಹಿತವಚನದಿಂದ ಅರಿತ ಜನಮೇಜಯ ಸರ್ಪಯಜ್ಞವನ್ನು ಹಿಂದೆಗೆದುಕೊಳ್ಳುತ್ತಾನೆ. ಹೀಗೆ ಜನಮೇಜಯ ಸರ್ಪಯಜ್ಞವನ್ನು ನಿಲ್ಲಿಸಲು ನಿರ್ಧರಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಆದ್ದರಿಂದ ಈ ದಿನವನ್ನು ನಾಗರ ಪಂಚಮಿ ಎಂದು ಆಚರಿಸಲಾಗುತ್ತದೆ ಎಂಬ ಪ್ರತೀತಿಯೂ ಇದೆ.
ಶ್ರೀಕೃಷ್ಣನ ನೆನಪು ನಾಗರ ಪಂಚಮಿಗೂ ಭಗವಾನ್ ಶ್ರೀಕೃಷ್ಣನಿಗೂ ಸಂಬಂಧವಿದೆ ಎಂದು ಹೇಳಲಾಗುತ್ತೆ. ಪುರಾಣ ಕತೆಯೊಂದರ ಪ್ರಕಾರ ಬಾಲ ಕೃಷ್ಣ ಯಮುನಾ ನದಿ ತೀರದಲ್ಲಿ ಆಟವಾಡುತ್ತಿದ್ದಾಗ ನದಿಯಲ್ಲಿ ಜಾರಿ ಬೀಳುತ್ತಾನೆ. ಕೃಷ್ಣ ನದಿಗೆ ಬಿದ್ದ ಸಂದರ್ಭದಲ್ಲಿ ಕಾಳಿಯಾ ಎಂಬ ಹಾವೊಂದು ಆತನ ಮೇಲೆ ದಾಳಿ ನಡೆಸುತ್ತದೆ. ಆದರೆ ದೈವತ್ವದ ಸ್ವರೂಪವಾಗಿದ್ದ ಶ್ರೀಕೃಷ್ಣ ಕಾಳಿಯಾನನ್ನು ಮಣಿಸುತ್ತಾನೆ. ಈತ ಸಾಮಾನ್ಯ ಮಗುವಲ್ಲ ಎಂಬುದನ್ನು ಅರಿತ ಕಾಳಿಯ ಹಾವು ತನ್ನನ್ನು ಬಿಟ್ಟುಬಿಡುವಂತೆ ಕೃಷ್ಣನಲ್ಲಿ ಬೇಡುತ್ತದೆ. ಆಗ ಜನರಿಗೆ ಯಾವುದೇ ರೀತಿಯ ತೊಂದರೆ ನೀಡಬಾರದೆಂದು ವಚನ ಪಡೆದು, ಶ್ರೀಕೃಷ್ಣ ಆ ಹಾವನ್ನು ಬಿಟ್ಟು ಬಿಡುತ್ತಾನೆ. ಹೀಗೆ ಕೃಷ್ಣನು ಕಾಳಿಯಾ ಹಾವನ್ನು ಸೋಲಿಸಿದ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಕಾಳಜಿಯನ್ನು ಕೃಷ್ಣ ಮಣಿಸಿದ ನೆನಪಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.
ನಾಗರ ಪಂಚಮಿಯಂದು ಉಪವಾಸ ?
ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಹಿಂದಿನ ದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದಳು. ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.
ಪೂಜೆ ಮಾಡುವುದು ಹೇಗೆ?
ಈ ದಿನ ಚಂದನ ಅಥವಾ ಅರಿಶಿಣದಿಂದ ಮಣೆ ಮೇಲೆ ನವನಾಗಗಳ ಆಕೃತಿ ಬರೆದು ಪೂಜೆ ಮಾಡುವ ಪದ್ಧತಿ ಇದೆ. ಇಲ್ಲವೆಂದರೆ ನಾಗರ ಕಲ್ಲು, ಅಥವಾ ನಾಗದೇವನ ಚಿತ್ರಕ್ಕೆ ಪೂಜೆ ಮಾಡಬಹುದು. ಈ ದಿನ, ನಾಗದೇವನಿಗೆ ಅರಳು ಮತ್ತು ಹಾಲನ್ನು ನೈವೇದ್ಯವೆಂದು ಅರ್ಪಿಸಬೇಕು. ನಾಗದೇವನಿಗೆ ಈ ದಿನ ಧೂರ್ವೆಯನ್ನು ಸಹ ಅರ್ಪಿಸಲಾಗುತ್ತದೆ.
ಯಾವುದಕ್ಕೆ ನಿಷೇಧ?
ನಾಗರ ಪಂಚಮಿಯ ದಿನ ಹಲವು ಕೆಲಸಗಳಿಗೆ ನಿಷೇಧವಿದೆ. ಈ ದಿನ ಏನನ್ನೂ ಹಚ್ಚಬಾರದು, ಕತ್ತರಿಸಬಾರದು. ಎಣ್ಣೆಯಲ್ಲಿ ಯಾವ ಪದಾರ್ಥವನ್ನೂ ಕರಿಯುವಂತಿಲ್ಲ, ಕರಿದ ಖಾದ್ಯ ನಿಷಿದ್ಧ, ಹಾಗೆಯೇ ಭೂಮಿಯನ್ನು ಅಗಿಯಬಾರದು ಎಂಬ ನಿಯಮವೂ ಕೆಲವೆಡೆ ಆಚರಣೆಯಲ್ಲಿದೆ.
ಮಲೆನಾಡ ಬಳಿ ಆಚರಣೆ ಹೇಗಿದೆ?
ಸಿಹಿ ತಿನಿಸು ನಾಗರ ಪಂಚಮಿ ದಿನ ಪಾಯಸದಂಥ ಸಿಹಿಖಾದ್ಯ ಮಾಡಿ ಸೇವಿಸುತ್ತಾರೆ. ಖರಿದ ಖ್ಯಾದ್ಯ ವರ್ಜ್ಯವಾಗಿರುವುದರಿಂದ ಮಲೆನಾಡ ಭಾಗಗಳಲ್ಲಿ ಹಲಸಿನ ಬೀಜದಿಂದ ಸಿಹಿ ತಯಾರಿಸಿ ಸೇವಿಸುವ ಪರಿಪಾಠವೂ ಇದೆ.
ಮಾನವರಿಗೆ ನಾಗಗಳಿಂದಾಗುವ ಉಪಕಾರ ?
ಸಮುದ್ರಮಂಥನದ ನಂತರ ನಾಗಗಳ ಏಳು ವಂಶಗಳು ನಿರ್ಮಾಣವಾದವು. ಅವುಗಳಲ್ಲಿನ ಆರು ವಂಶಗಳು ‘ನಾಗಲೋಕಕ್ಕೆ’ ಹೋದವು; ಕೇವಲ ‘ಮಣಿಪ್ರಸಾದ’ವೆಂಬ ಹೆಸರಿನ ನಾಗನ ವಂಶವು ಪೃಥ್ವಿಯ ಮೇಲೆ ಉಳಿಯಿತು. ಅವು ವಾತಾವರಣದಲ್ಲಿನ ರಜ-ತಮ ಮತ್ತು ಕಪ್ಪು ಶಕ್ತಿಯನ್ನು ಸೆಳೆದುಕೊಂಡು ತಮ್ಮಲ್ಲಿ ವಿಷರೂಪದಲ್ಲಿ ಇಟ್ಟುಕೊಳ್ಳುತ್ತವೆ. ಇದರಿಂದ ಪೃಥ್ವಿಯ ಮೇಲಿನ ವಾತಾವರಣವು ಶುದ್ಧವಾಗುವುದರಿಂದ ಮಾನವನಿಗೆ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತದೆ.
ನಾಗನ ಪೂಜೆಯನ್ನು ಹೇಗೆ ಮಾಡಬೇಕು?
ನಾಗರಪಂಚಮಿಯ ದಿನ ಪ್ರತ್ಯಕ್ಷ ನಾಗನ ಪೂಜೆಯನ್ನು ಮಾಡುವುದು ಹೆಚ್ಚು ಲಾಭದಾಯಕವಾಗಿದೆ. ಆದರೆ ನಾಗನು ಉಪಲಬ್ಧನಿಲ್ಲದಿದ್ದರೆ ಅರಿಶಿನ ಅಥವಾ ರಕ್ತಚಂದನದಿಂದ ಮರದ ಮಣೆಯ ಮೇಲೆ ನವನಾಗಗಳ (ಒಂಬತ್ತು ನಾಗಗಳ) ಆಕೃತಿಗಳನ್ನು ಬಿಡಿಸಬೇಕು. ಈ ನವನಾಗಗಳ ಪೂಜೆಯನ್ನು ಮಾಡಿ ಅವರಿಗೆ ಹಾಲು-ಅರಳಿನ ನೈವೇದ್ಯವನ್ನು ಅರ್ಪಿಸಬೇಕು.
ನಾಗರಪಂಚಮಿ ಹಬ್ಬದ ಫಲ
ನಾಗರಪಂಚಮಿಯ ದಿನ ಭಾವಪೂರ್ಣವಾಗಿ ನಾಗಪೂಜೆಯನ್ನು ಮಾಡುವ ಸ್ತ್ರೀಯರಿಗೆ ಶಕ್ತಿತತ್ತ್ವ ಪ್ರಾಪ್ತವಾಗುತ್ತದೆ. ಹಾಗೆಯೇ ಯಾವ ಸ್ತ್ರೀಯರು ನಾಗನನ್ನು ಸಹೋದರನೆಂಬ ಭಾವದಿಂದ ಪೂಜಿಸುತ್ತಾರೆಯೋ, ಅವರ ಸಹೋದರರ ಆಯುಷ್ಯವು ವೃದ್ಧಿಯಾಗುತ್ತದೆ.ಒಟ್ಟಾರೆಯಾಗಿ ನಾಗ ಪಂಚಮಿ ಹಬ್ಬವನ್ನೂ ತನ್ನದೇ ಆದ ವೈಶಿಷ್ಟ್ಯತೆಗಳೊಂದಿಗೆ ವಿಭಿನ್ನ ಸಂಪ್ರದಾಯದ ಆಚರಣೆಯು ಮೂಲಕ ಭಕ್ತಿ ಭಾವದಿಂದ ಪೂಜಿಸಲಾಗತ್ತೆ.
ಸರ್ವರಿಗೂ ನಾಗರ ಪಂಚಮಿ ಶುಭಾಶಯಗಳು