ಮಹಿಳಾ ಉದ್ಯಮಿಗಳಾಗಲು ಸುವರ್ಣಾವಕಾಶ
– 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ!
– ಉದ್ಯೋಗಿನಿ ಯೋಜನೆಯನ್ನು ಎಲ್ಲಿ ಪಡೆಯಬಹುದು?
– ಯಾವೆಲ್ಲ ಉದ್ದಿಮೆಗಳಿಗೆ ಸಾಲ? ಇಲ್ಲಿದೆ ವಿವರ
NAMMUR EXPRESS NEWS
ಬೆಂಗಳೂರು: ಮಹಿಳೆಯರು ಸ್ವಾವಲಂಬಿಯಾಗಿ ಜೀವನ ನಡೆಸಲು, ಆರ್ಥಿಕವಾಗಿ ಸದೃಢರಾಗಲು, ಒಬ್ಬ ಯಶಸ್ವಿ ಉದ್ಯಮಿಯಾಗಿ ರೂಪುಗೊಳ್ಳಲು ಕೇಂದ್ರ ಸರ್ಕಾರವು “ಉದ್ಯೋಗಿನಿ ಯೋಜನೆ”ಯನ್ನು ಜಾರಿಗೆ ತಂದಿದೆ. ಇದರ ಅಡಿ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಸಿಗಲಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ರೂಪದಲ್ಲಿ ಕನಿಷ್ಠ 1 ಲಕ್ಷ ರೂಪಾಯಿಯಿಂದ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ ಸಿಗುತ್ತದೆ. ಇದಕ್ಕೆ ಶೇ.50ರಂತೆ ಗರಿಷ್ಠ 1.50 ಲಕ್ಷ ರೂ. ವರೆಗೆ ಸಹಾಯಧನ ಇರಲಿದೆ. ಇನ್ನು ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ಮಿತಿ 2 ಲಕ್ಷ ರೂಪಾಯಿ ಆಗಿರಬೇಕು ಎಂಬ ಷರತ್ತುಗಳಿವೆ.
ಸಾಮಾನ್ಯ ವರ್ಗ ಮತ್ತು ವಿಶೇಷ ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚವು ಗರಿಷ್ಠ 3 ಲಕ್ಷ ರೂಪಾಯಿ ಇದ್ದರೆ, ಶೇ. 30ರವರೆಗೆ ಅಂದರೆ ಗರಿಷ್ಠ 90,000 ರೂಪಾಯಿವರೆಗೆ ಸಹಾಯಧನದ ಮೊತ್ತ ಸಿಗಲಿದೆ. ಆದರೆ, ಕುಟುಂಬದ ವಾರ್ಷಿಕ ಆದಾಯದ ಗರಿಷ್ಠ ಮಿತಿ 1.50 ಲಕ್ಷ ರೂಪಾಯಿ ಇರಬೇಕು. ಎಲ್ಲ ವರ್ಗದ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯ ಪ್ರಯೋಜನ ಪಡೆಯಲು ಅವಕಾಶವಿದ್ದು, 18 ರಿಂದ 55 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಇನ್ನು ವಿಧವೆ ಅಥವಾ ವಿಶೇಷ ಚೇತನ ಮಹಿಳೆಯರಿಗೆ ಮೇಲಾಧಾರ ಅಗತ್ಯವಿಲ್ಲ.
ಉದ್ಯೋಗಿನಿ ಯೋಜನೆಯನ್ನು ಎಲ್ಲಿ ಪಡೆಯಬಹುದು?
ಉದ್ಯೋಗಿನಿ ಯೋಜನೆಯು ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸಾರಸ್ವತ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸೇರಿದಂತೆ ಹಲವಾರು ವಾಣಿಜ್ಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳೆಯರಿಗೆ ವೃತ್ತಿಪರ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಸಹ ಸಂಘಟಿಸುತ್ತದೆ.
ಉದ್ಯೋಗಿನಿ ಯೋಜನೆಯ ಉದ್ದೇಶ
ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯದ ಪ್ರಮುಖ ಗುರಿಯೆಂದರೆ ಮಹಿಳೆಯರು ತಮ್ಮದೇ ಆದ ಕಂಪನಿಗಳು ಮತ್ತು ಕಿರು ಉದ್ಯಮಗಳನ್ನು ಪ್ರಾರಂಭಿಸುವ ಮೂಲಕ ಸ್ವಾವಲಂಬಿಯಾಗಲು ಸಹಾಯ ಮಾಡುವುದು. ಜತೆಗೆ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವುದನ್ನು ತಪ್ಪಿಸುವುದಾಗಿದೆ. ಆರ್ಥಿಕ ಸಹಾಯದ ಜತೆಗೆ ಕೌಶಲ್ಯ ಅಭಿವೃದ್ಧಿ ಕೋರ್ಸ್ಗಳನ್ನು ಈ ಮೂಲಕ ನೀಡಲಾಗುತ್ತದೆ.
ಉದ್ಯೋಗಿನಿ ಯೋಜನೆಗೆ ಅರ್ಹತೆ ಏನು?
* ಅಭ್ಯರ್ಥಿಯು ಮಹಿಳೆಯಾಗಿರಬೇಕು
* ಅರ್ಹ ಮಹಿಳೆಯ ವಯೋಮಿತಿ 18 ರಿಂದ 55 ರವರೆಗೆ ಇರಬೇಕು
ಆದಾಯದ ಮಿತಿ 1.5 ಲಕ್ಷ ರೂ.
* ಮಹಿಳಾ ವ್ಯಾಪಾರ ಮಾಲೀಕರು ಮಾತ್ರ ವ್ಯಾಪಾರ ಸಾಲಗಳಿಗೆ ಅರ್ಹರು
* ಹಣಕಾಸು ಸಂಸ್ಥೆಗಳಿಂದ ಹಿಂದಿನ ಯಾವುದೇ ಸಾಲಗಳನ್ನು ಡಿಫಾಲ್ಟ್ ಮಾಡಿಕೊಳ್ಳದೇ ಇರುವುದು
ಅಗತ್ಯ ದಾಖಲೆಗಳು ಏನು?
* ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
* ಅರ್ಜಿದಾರರ ಆಧಾರ್ ಕಾರ್ಡ್
* ಜನನ ಪ್ರಮಾಣಪತ್ರ
* ಸರಿಯಾಗಿ ಭರ್ತಿ ಮಾಡಿದ ಅರ್ಜಿ ನಮೂನೆ
* ವಿಳಾಸ ಮತ್ತು ಆದಾಯದ ಪುರಾವೆ
* ಬಡತನ ರೇಖೆಗಿಂತ ಕೆಳಗಿರುವ ಅರ್ಜಿದಾರರ (BPL) ಕಾರ್ಡ್ ಮತ್ತು ಪಡಿತರ ಚೀಟಿ
* ಜಾತಿ ಪ್ರಮಾಣಪತ್ರ
* ಬ್ಯಾಂಕ್ ಪಾಸ್ಬುಕ್ನ ಪ್ರತಿ (ಖಾತೆ, ಬ್ಯಾಂಕ್ ಮತ್ತು ಶಾಖೆಯ ಹೆಸರುಗಳು, ಹೊಂದಿರುವವರ ಹೆಸರು, IFSC, ಮತ್ತು MICR)
* ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ
ಯಾವೆಲ್ಲ ಉದ್ದಿಮೆಗಳಿಗೆ ಸಾಲ ಪಡೆಯಬಹುದು?
ಅಗರ್ಬತ್ತಿ ತಯಾರಿಕೆ ಡಯೋಗ್ನೋಸ್ಟಿಕ್ ಲ್ಯಾಬರ್, ಲೀಫ್ ಕಪ್ಗಳ ತಯಾರಿಕೆ, ರಿಬ್ಬನ್ ತಯಾರಿಕೆ. ಬೇಕರಿ, ಮೀನು ಮಾರಾಟ, ದಿನಸಿ ಅಂಗಡಿ, ಉಪ್ಪಿನಕಾಯಿ, ಕಾಫಿ – ಟೀ ಅಂಗಡಿ, ಟೈಲರಿಂಗ್, ಬಳೆ ಅಂಗಡಿ, ಎಸ್ಟಿಡಿ ಬೂತ್, ಬ್ಯೂಟಿ ಪಾರ್ಲರ್, ಕ್ಲಿನಿಕ್, ಜಿಮ್, ಹಿಟ್ಟಿನ ಗಿರಣಿ, ಪೋಟೋ ಸ್ಟೂಡಿಯೋ, ಕಾಂಡಿಮೆಂಟ್ಸ್, ಚಪ್ಪಲಿ ಮಾರಾಟ ಮಳಿಗೆ, ಮ್ಯಾಚ್ ಬಾಕ್ಸ್ ತಯಾರಿಕೆ, ಸೋಪ್ ಆಯಿಲ್, ಸೋಪ್ ಪೌಡರ್, ಡಿಟರ್ಜೆಂಟ್ ತಯಾರಿಕೆ, ನ್ಯಾಯಬೆಲೆ ಅಂಗಡಿ ಸೇರಿದಂತೆ 88ಕ್ಕೂ ಹೆಚ್ಚು ಪ್ರಮಾಣದ ಸಣ್ಣ ಉದ್ಯಮಗಳ ಆರಂಭಿಸಲು ಉದ್ಯೋಗಿನಿ ಯೋಜನೆ ಅಡಿ ಸಾಲ ಸಿಗಲಿದೆ.