ಬೈಕ್ ಹಿಂಬದಿ ಸವಾರ ಮೃತಪಟ್ಟರೆ ಬೈಕ್ ಮಾಲೀಕನಿಂದಲೇ ಪರಿಹಾರ!
– ಹೈಕೋರ್ಟ್ ಮಹತ್ವದ ಆದೇಶ: ಬೈಕ್ ಸವಾರನಿಗೆ ಸಂಕಷ್ಟ
– ಏನಿದು ಕೇಸ್…? ಕೋರ್ಟ್ ಹೇಳಿದ್ದೇನು…?
NAMMUR EXPRESS NEWS
ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಹಿಂಬದಿ ಸವಾರ ಮೂರನೇ ವ್ಯಕ್ತಿ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಬೈಕ್ ನ ಹಿಂಬದಿ ಸವಾರನ ಸಾವಿಗೆ ಬೈಕ್ ಮಾಲಿಕನೇ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ. ತುಮಕೂರಿನ ಮೋಟಾರ್ ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣ ವಿಮಾ ಸಂಸ್ಥೆಗೆ ಪರಿಹಾರ ಪಾವತಿಸಲು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದ್ದಲ್ಲದದೇ, ನ್ಯಾಯಮಂಡಳಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನ ಮೃತನ ಕುಟುಂಬದವರಿಗೆ ನೀಡುವಂತೆ ವಾಹನದ ಮಾಲೀಕ ನಿಜಾಮುದ್ದೀನ್ ಅವರಿಗೆ ಹೈಕೋರ್ಟ್ ಆದೇಶಿಸಿದೆ.
ಏನಿದು ಪ್ರಕರಣ..?
2011ರ ಮಾರ್ಚ್ 24ರಂದು ಮೃತ ಸಿದ್ವಿಕ್ ಉಲ್ಲಾಖಾನ್ ಎಂಬುವವರು ಕುಣಿಗಲ್ ಬಳಿ ನಿಜಾಮುದ್ದಿನ್ ಅವರ ಬೈಕ್ ನಲ್ಲಿ ಹಿಂಬದಿಯಲ್ಲಿ ಕುಳಿತು ಸವಾರಿ ಮಾಡುತ್ತಿದ್ದರು. ಚಾಲಕನ ಅತಿ ವೇಗ ಮತ್ತು ನಿರ್ಲಕ್ಷದ ಚಾಲನೆಯಿಂದಾಗಿ ಬೈಕ್ ಹಳ್ಳಕ್ಕೆ ಬಿದ್ದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ಖಾನ್ ಅವರನ್ನು ಬೆಂಗಳೂರಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 26- 2011ರಂದು ಖಾನ್ ಮೃತಪಟ್ಟಿದ್ದರು. ನಂತರ ಖಾನ್ ಕುಟುಂಬ ಸದಸ್ಯರು ಪರಿಹಾರ ಕೋರಿ ಕೋರ್ಟು ಮೊರೆ ಹೋಗಿದ್ದರು. ಅಲ್ಲದೇ ಖಾನ್ ಚಿಕಿತ್ಸೆ ಮತ್ತು ಇತರ ವೆಚ್ಚಗಳಿಗೆ 1.2 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಒಟ್ಟು 15 ಲಕ್ಷ ರೂ ಪರಿಹಾರ ಕೊಡುವಂತೆ ಮನವಿ ಮಾಡಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕುಣಿಗಲ್ ಮೋಟಾರ್ ವಾಹನ ಅಪಘಾತ ಪರಿಹಾರ ನ್ಯಾಯ ಮಂಡಳಿ 2017ರ 24ರಂದು ವಾರ್ಷಿಕ ಆರು ಪರ್ಸೆಂಟ್ ಬಡ್ಡಿ ಯೊಂದಿಗೆ 7.27.314 ರೂಗಳನ್ನ ಪರಿಹಾರವಾಗಿ ನೀಡುವಂತೆ ವಿಮಾ ಸಂಸ್ಥೆಗೆ ಆದೇಶಸಿತ್ತು. ಆದರೆ ಇದಕ್ಕೆ ಹೈಕೋರ್ಟ್ ತೀರ್ಪು ನೀಡಿದ್ದು ವಾಹನ ಆಸನದ ಸಾಮರ್ಥ್ಯವು 1.1 ಆಗಿದ್ದು ಅದರ ಆಧಾರದ ಮೇಲೆ ನ್ಯಾಯ ಮಂಡಳಿಯು ವಿಮಾ ಕಂಪನಿಯ ಮೇಲೆ ಪರಿಹಾರ ನೀಡುವ ಹೊಣೆಗಾರಿಕೆಯನ್ನ ನಿಗದಿಪಡಿಸಿದೆ. ನ್ಯಾಯಾಧಿಕರಣದ ಆದೇಶ ಸೂಕ್ತವಾಗಿಲ್ಲ ಎಂದು ತಿಳಿಸಿದ್ದಲ್ಲದೆ ಪರಿಹಾರ ಪಾವತಿಸುವ ಹೊಣೆಯನ್ನು ಬೈಕ್ ಮಾಲೀಕನಿಗೆ ವರ್ಗಾಯಿಸಲು ಆದೇಶಿಸಿದೆ.