- ರಾಯಚೂರು ಜಿಲ್ಲೆಯೊಬ್ಬಳು ಗಟ್ಟಿಗಿತ್ತಿ ಕೃಷಿ ಸಾಧಕಿ
- ಕುಂಟೆ ಹೊಡೀತಾಳೆ…ಬಿತ್ತನೆ ಮಾಡ್ತಾಳೆ ಈಕೆ..
ಲಿಂಗಸುಗೂರು(ರಾಯಚೂರು): ಹೆಣ್ಣೊಂದು ಕಲಿತರೆ ಊರೇ ಕಲಿತಂತೆ ಎಂಬ ಗಾದೆಯೊಂದಿತ್ತು. ಆದರೆ ಈಗ ಓದು ಕಲಿತವರೇ ಹೆಚ್ಚು. ಆದರೆ ಜೀವನ ಕೌಶಲ್ಯ, ಧೈರ್ಯ, ಛಲ ಮಾತ್ರ ಕಡಿಮೆ. ಇನ್ನು ಇತ್ತ ಮನೆಯಲ್ಲಿ ಹೊಲಗಳಿದ್ದರೂ ಮಾಡುವವರೇ ಇಲ್ಲ. ಕೃಷಿ ಕಾರ್ಯಕ್ಕೆ ಯಾರೂ ಸಿಗುವುದೇ ಇಲ್ಲ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಂಡಸಾಗರ ಗ್ರಾಮದ ಮಹಿಳೆಯೊಬ್ಬಳು ಗಂಡಸರನ್ನೂ ಮೀರಿಸುವಂತೆ ಕೃಷಿ ಕೆಲಸದಲ್ಲಿ ತೊಡಗಿದ್ದಾಳೆ. ಈ ಮೂಲಕ ಹೆಣ್ಣು ಎಲ್ಲದಕ್ಕೂ ಸೈ ಎಂದು ತೋರಿಸಿದ್ದಾಳೆ.
ಗುಂಡಸಾಗರ ಗ್ರಾಮದ ಲಕ್ಷ್ಮವ್ವ ಪುರುಷರು ಹುಬ್ಬೇರಿಸುವಂತೆ ಕೃಷಿ ಕಾರ್ಯದಲ್ಲಿ ಸಾಧನೆ ಮಾಡಿದ್ದಾಳೆ. ಗಂಡನ ಮನೆಯವರು ಇವಳನ್ನು ಮನೆಯಿಂದ ಹೊರ ಹಾಕಿದ್ದರು. ಅಣ್ಣಂದಿರು ಕೂಡಾ ಆಸರೆ ನೀಡದಿದ್ದಾಗ ತಾಯಿ ಆಸರೆಯಲ್ಲಿ ಬದುಕು ಸಾಗಿಸುತ್ತಿರುವ ಈಕೆ ತನ್ನ ತಾಯಿ ಹೆಸರಿನಲ್ಲಿರುವ 2 ಎಕರೆ ಭೂಮಿಯಲ್ಲಿ ಯಾರ ಸಹಕಾರ ಇಲ್ಲದೇ ಸ್ವತಃ ಕೃಷಿಗೆ ನಿಂತಿದ್ದಾಳೆ. ಕೃಷಿ ಕಾರ್ಯಗಳಾದ ಮಡಿಕೆ, ಕುಂಟೆ, ಎಡೆ, ಬಿತ್ತನೆ, ರಾಶಿ ಮಾಡಿ ತೋರಿಸಿಕೊಟ್ಟಿದ್ದಾಳೆ.
ತಾಯಿ ಸಂತಸ: “ನನ್ನ ಮಗಳ ಸಂಸಾರ ಹಾಳಾಗಿತ್ತು. ಮಗಳ ಕಷ್ಟ ನೋಡಲಾಗದೇ ನಾನೇ ಮಗಳನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ಈಗ ಗಂಡಸರನ್ನು ಮೀರಿಸುವಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಳೆ. ಸರ್ಕಾರ ಇಲ್ಲವೇ ಬೇರೆಯವರಿಂದ ಯಾವುದೇ ನೆರವಿಲ್ಲದೇ ಬದುಕು ಕಟ್ಟಿಕೊಂಡಿದ್ದಾಳೆ. ಇದು ನನಗೆ ಸಂತಸ ತಂದಿದೆ ಎಂದು ಹೇಳುತ್ತಾರೆ ಲಕ್ಷ್ಮವ್ವಳ ತಾಯಿ ಅಮರಮ್ಮ.
ತಾಯಿ, ಕೃಷಿಯೇ ಆಸರೆ!: ನಾನು ಚಿಕ್ಕಂದಿನಿಂದ ಕೃಷಿ ಚಟುವಟಿಕೆ ಮಾಡುತ್ತಾ ಬಂದಿದ್ದೇನೆ. ನನ್ನ ಗಂಡ ಮತ್ತು ನನ್ನ ಅಣ್ಣಂದಿರು ನನ್ನನ್ನು ಮನೆಯಿಂದ ಹೊರ ಹಾಕಿದರೂ ತಾಯಿ ಆಸರೆ ಸಿಕ್ತು. ಅವಳ ಆಶ್ರಯದಲ್ಲೇ ಕೃಷಿಯಲ್ಲಿ ನೆಮ್ಮದಿ ಬದುಕು ಸಾಗಿಸುತ್ತಿದ್ದೇನೆ. ಸ್ವಾವಲಂಬಿ ಜೀವನ ನಡೆಸುತ್ತಿದ್ದೇನೆ ಎಂದು ಲಕ್ಷ್ಮವ್ವ ಮನನೊಂದು ಹೇಳಿದ್ದಾರೆ. ಇಲ್ಲಿ ವಯುಕ್ತಿಕ ಕಾರಣ ಏನೇ ಇರಬಹುದು. ಆದರೆ ಸ್ತ್ರೀ ಒಬ್ಬಳ ಸ್ವಾವಲಂಬಿ ಹೋರಾಟ ಎಲ್ಲರಿಗೂ ಮಾದರಿಯಾಗಿದೆ.