- ಉತ್ತರ ಕರ್ನಾಟಕದಲ್ಲಿ ಸಾಂಕ್ರಾಮಿಕ ರೋಗ ಆತಂಕ
- ಕಾಳಜಿ ಕೇಂದ್ರ ಕ್ಲೀನ್ ಕ್ಲೀನ್: ಪ್ರತಿಯೊಬ್ಬರಿಗೂ ಟೆಸ್ಟ್
ಉತ್ತರ ಕರ್ನಾಟಕ: ಮಳೆಯಿಂದ ಉಂಟಾಗಿರುವ ಪ್ರವಾಹದ ಬಳಿಕ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳನ್ನು ತಡೆ ಹಾಗೂ ಕರೊನಾ ಬಗ್ಗೆ ಮುನ್ನೆಚ್ಚರಿಕಾ ಕ್ರಮ ಇದೀಗ ಸರ್ಕಾರಕ್ಕೆ ತಲೆನೋವಾಗಿದೆ. ಉತ್ತರ ಕರ್ನಾಟಕದಲ್ಲಿ ಇನ್ನೂ ಮಳೆ ನಿಲ್ಲುತ್ತಿಲ್ಲ. ಸಾವಿರಾರು ಜನ ಮನೆ, ಜಮೀನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ, ಇತ್ತ ಕರೋನಾ ಕಾಟ ಈಗ ಸರ್ಕಾರಕ್ಕೆ ಸಂಕಷ್ಟ ತಂದಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇತ್ತೀಚೆಗೆ ವಿಧಾನಸೌಧದಲ್ಲಿ ಪ್ರವಾಹಪೀಡಿತ ಬಾಗಲಕೋಟೆ, ವಿಜಯಪುರ, ಕಲುಬುರಗಿ, ಯಾದಗಿರಿ, ಕೊಪ್ಪಳ, ಬೆಳಗಾವಿ ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಪರೆನ್ಸ್ ನಡೆಸಿ ಮಾತನಾಡಿ, ಪ್ರವಾಹದಲ್ಲಿ ಸಿಲುಕಿದ್ದ, ಹಾನಿಗೊಳಗಾದ 55 ಗ್ರಾಮಗಳ 23,250 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 155, ವಿಜಯಪುರ ಜಿಲ್ಲೆಯಲ್ಲಿ 27 ಗ್ರಾಮ ಜಲಾವೃತವಾಗಿವೆ. ವಿಜಯಪುರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಕಾಳಜಿ ಕೇಂದ್ರದಲ್ಲಿ ಶುದ್ಧವಾದ ಕುಡಿಯುವ ನೀರು, ನೀರಿನ ಘಟಕ ಇಲ್ಲದ ಕಡೆ ಬಿಸಿನೀರು ಕೊಡಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾಳಜಿ ಕೇಂದ್ರ ಕ್ಲೀನ್ ಕ್ಲೀನ್: ಬ್ಲೀಚಿಂಗ್ ಪೌಡರ್ ಸೇರಿ ಔಷಧಗಳ ಸಿಂಪಡಣೆ ಹಾಗೂ ಸ್ಯಾನಿಟೈಜೇಷನ್ ಮಾಡಲು ಸೂಚಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಇರುವವರಿಗೆ ನೀಡಬೇಕಿರುವ ಆಹಾರದ ಬಗ್ಗೆ ರಾಜ್ಯ ಸರ್ಕಾರದಿಂದ ಮೆನು ನೀಡಲಾಗಿದೆ. ಕೇಂದ್ರಗಳ ಒಳಗೆ ಮತ್ತು ಹೊರಭಾಗದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು, ಪ್ರತಿದಿನ ರೋಗ ನಿರೋಧಕ ದ್ರಾವಣ ಸಿಂಪಡಿಸಬೇಕು, ಕೇಂದ್ರದಲ್ಲಿರುವ ಎಲ್ಲರ ಆರೋಗ್ಯ ತಪಾಸಣೆ ಮಾಡಬೇಕು ಮತ್ತು ಅವರಿಗೆ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ತಜ್ಞರು ಅರಿವು ಮೂಡಿಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಎಲ್ಲರಿಗೂ ಕರೋನಾ ಟೆಸ್ಟ್!: ಹಿರಿಯ ನಾಗರಿಕರು, ಬಾಣಂತಿಯರು, ಗರ್ಭಿಣಿಯರು ಮತ್ತು ಮಕ್ಕಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಘಟಕ ಅಥವಾ ತಾಲೂಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಿ ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು. ಜ್ವರ ಹಾಗೂ ಇತರ ರೋಗ ಲಕ್ಷಣ ಇದ್ದವರಿಗೆ ತಕ್ಷಣ ಕೋವಿಡ್ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ಅಲ್ಲಿ ಎಲ್ಲರಿಗೂ ಮಾಸ್ಕ್ ವಿತರಿಸಬೇಕು, ಸ್ಯಾನಿಟೈಸರ್ ನೀಡುವ ಜತೆಗೆ ಶುಚಿತ್ವಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಲಾಗಿದೆ ಎಂದರು.
ಹಬ್ಬದ ಆಚರಣೆ ರದ್ದು!: ಕಳೆದ ವರ್ಷಗಳಿಗೆ ಹೋಲಿಸಿದರೆ ಡೆಂಘಿ, ಚಿಕೂನ್ ಗುನ್ಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿದೆ. ಕೋವಿಡ್ ಆತಂಕ ಇರುವ ಹಿನ್ನೆಲೆಯಲ್ಲಿ ವಿಶೇಷ ಗಮನಹರಿಸಿ ಪರಿಸ್ಥಿತಿ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ಮುಂದಿನ 2-3 ತಿಂಗಳು ಚಳಿಗಾಲದ ಜತೆಗೆ ಹಬ್ಬಗಳ ಹಿನ್ನೆಲೆ ಇರುವುದರಿಂದ ಕೋವಿಡ್ ಮತ್ತು ಸಾಂಕ್ರಾಮಿಕ ರೋಗಗಳ ಹರಡುವಿಕೆ ಪ್ರಮಾಣ ಹೆಚ್ಚಾಗುವ ಆತಂಕವಿದೆ. ಈ ಹಿಂದೆ ಕರೊನಾ ಅನ್ನು ಸಮರ್ಥವಾಗಿ ನಿಭಾಯಿಸಿದ್ದ ನೆರೆಯ ಕೇರಳ ರಾಜ್ಯದಲ್ಲಿ ಓಣಂ ಸಂದರ್ಭ ಕೈಗೊಂಡ ತಪ್ಪು ನಿರ್ಧಾರದಿಂದ ಸೋಂಕು ಹೆಚ್ಚಾಗಿದೆ. ಇದು ನಮಗೆ ಪಾಠವಾಗಿದ್ದು, ಕೆಲ ಕ್ರಮ ಜರುಗಿಸಲಾಗುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.