- ಮಹಾ ಮಳೆ ತಂದ ನಷ್ಟ: ಸರ್ಕಾರಕ್ಕೆ ಕಷ್ಟ ಕಷ್ಟ
- ಯಾದಗಿರಿ ಒಂದು ಜಿಲ್ಲೆಯಲ್ಲೇ 200 ಕೋಟಿ ನಷ್ಟ
ಯಾದಗಿರಿ: ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ 15 ಸಾವಿರ ಕೋಟಿ ಹಾನಿಯಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಒಂದೇ ವರ್ಷದಲ್ಲಿ 3 ಬಾರಿ ಪ್ರವಾಹ ಬಂದು ಈ ಭಾಗದ ರೈತರನ್ನು ಹೈರಾಣಾಗಿಸಿದೆ. 5 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮನೆಗಳು ಬಿದ್ದಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಬೆಳೆ ನಷ್ಟ ಮತ್ತು ಮನೆ ಬಿದ್ದಿರುವ ಕುರಿತು ಸಮೀಕ್ಷೆ ನಡೆದಿದೆ. ಪ್ರವಾಹ ನಿಂತ ನಂತರ ಹಾನಿ ಕುರಿತು ಸ್ಪಷ್ಟ ವರದಿ ಕೈಸೇರಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಂದಾಜು ಮಾಹಿತಿ ನೀಡಿದ್ದಾರೆ. ಈ ವರದಿ ಅಂತಿಮವಲ್ಲ. ಸರ್ವೆ ನಂತರ ಹೆಚ್ಚಾಗಬಹುದು ಎಂದು ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ 2 ಸಾವಿರ ಹೆಕ್ಟೇರ್ ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಣಸಿನಕಾಯಿ ಸೇರಿದಂತೆ ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. 700ಕ್ಕೂ ಹೆಚ್ಚು ಮನೆಗಳು ಕುಸಿದಿದ್ದು, ಸುಮಾರು 200 ಕೋಟಿಯಷ್ಟು ನಷ್ಟವಾಗಿದೆ. ಪ್ರವಾಹದಿಂದ ಸಂಕಷ್ಟ ಎದುರಿಸುತ್ತಿರುವ ಈ ಭಾಗದ 177 ಗ್ರಾಮಗಳನ್ನು ಸ್ಥಳಾಂತರಿಸಲು ಸಂಸದರು, ಸಚಿವರು, ಶಾಸಕರು ಶಿಫಾರಸ್ಸು ಮಾಡಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳಲಿದ್ದಾರೆ. ಮನೆ ಕಳೆದುಕೊಂಡವರಿಗೆ 5 ಲಕ್ಷ, ಭಾಗಶಃ ಮನೆಗೆ 2 ಲಕ್ಷ ಪರಿಹಾರ ನೀಡಲಾಗುವುದು. ಈಗಾಗಲೇ ಮನೆ ಕಳೆದುಕೊಂಡ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತ್ವರಿತ ಪರಿಹಾರ 10 ಸಾವಿರ ಹಾಕುವ ಕಾರ್ಯ ನಡೆದಿದೆ ಎಂದು ಅವರು ತಿಳಿಸಿದ್ದಾರೆ.