ಕರಾವಳಿಯಲ್ಲಿ ವಿಶೇಷ ದಸರಾ ಆಚರಣೆ ರಂಗು!
* ಕುದ್ರೋಳಿ ಕ್ಷೇತ್ರದ ದಸರಾ ಮಹೋತ್ಸವ ಸಂಭ್ರಮ
* ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ
* ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಜನವೋ ಜನ
NAMMUR EXPRESS NEWS
ಮಂಗಳೂರು: ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ.1991ರಿಂದ ಆರಂಭಗೊಂಡ ‘ಮಂಗಳೂರು ದಸರಾ ವೈಭವ’ ಕುದ್ರೋಳಿ ಗೋಕರ್ಣನಾಥನ ಕೃಪೆಯೊಂದಿಗೆ ಯಶಸ್ವಿಯಾಗಿ ನಡೆಯುತ್ತಿದೆ.
ದಸರಾಕ್ಕೆ ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು,ಹುಲಿ ಕುಣಿತ, ಶಾರ್ದುಲ ಕುಣಿತ ಕರಡಿ, ಹೀಗೆ ಹತ್ತು ಹಲವು ವೇಷಭೂಷಣದ ವೈಭವವು ಭರ್ಜರಿಯಾಗಿದೆ.
ಉಚ್ಚಿಲ ದಸರಾ 2024, ಸಾಂಸ್ಕೃತಿಕ ವೈವಿಧ್ಯ!
ಕಾಪು: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಭಕ್ತರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಮೂರನೇ ವರ್ಷದ ಉಡುಪಿ ಉಚ್ಚಿಲ ದಸರಾ 2024ರ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತಿವೆ.
ಸ್ಥಳೀಯರಿಂದ ಹಿಡಿದು ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುತ್ತಿದ್ದಾರೆ. ಪ್ರಸಿದ್ಧ ಕಲಾವಿದರ ಯಕ್ಷಗಾನ, ನೃತ್ಯ ರೂಪಕ, ನೃತ್ಯ ವೈವಿಧ್ಯ, ಹರಿಕಥೆ ಸಹಿತ ಕಲೆ ಮತ್ತು ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆತಿದೆ.
ತುಳುನಾಡಿನ ಧಾರ್ಮಿಕ ಸಂಸ್ಕೃತಿಯನ್ನು ಉಳಿಸುವಲ್ಲಿ ನಡೆಸಿರುವ ಸಾಮೂಹಿಕ ಕುಣಿತ ಭಜನೆ, ನಿತ್ಯ ಭಜನಾ ಕಾರ್ಯಕ್ರಮ, ಶರನ್ನ ವರಾತ್ರಿಯ ಪರಂಪರೆಯನ್ನು ಮೆರೆಯುವ ದಾಂಡಿಯಾ ಮತ್ತು ಗರ್ಬಾ ನೃತ್ಯಗಳಲ್ಲೂ ಜನರು ಪಾಲ್ಗೊಂಡಿದ್ದಾರೆ.
ಉಪ್ಪಳದಿಂದ ಶೀರೂರುವರೆಗಿನ ಮೊಗವೀರ ಸಮಾಜದ ವಿವಿಧ ಸಂಘ-ಸಂಸ್ಥೆಗಳು, ಯುವ ಸಂಘಟನೆ, ಮಹಾಸಭಾ ಮತ್ತು ಮಹಿಳಾ ಸಭಾದ ಸದಸ್ಯರೂ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿರುವುದು ವಿಶೇಷ.
102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ
ಮಂಗಳೂರು: ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ರಥಬೀದಿಯ ಶ್ರೀ ವೆಂಕಟರಮಣ ದೇವಾಲಯದ ಆಚಾರ್ಯ ಮಠ ವಠಾರದಲ್ಲಿರುವ ವಸಂತ ಮಂಟಪದಲ್ಲಿ 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಅ.8ರಿಂದ ಆರಂಭಗೊಂದಿದ್ದು,14 ರವರೆಗೆ ವೈಭವದಿಂದ ನಡೆಯಲಿದೆ.
ಅ.9 ರ ಬೆಳಗ್ಗೆ 7 ಗಂಟೆಗೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಮಾತೆಯ ವಿಗ್ರಹ ಪ್ರತಿಷ್ಠಾಪಿಸಲಾಯಿತು.
ಅ .13ರವರೆಗೆ ದೀಪಾಂಲಕಾರ ಸಹಿತ ರಂಗಪೂಜೆ ನಡೆಯಲಿದೆ. ಪ್ರತೀ ದಿನವೂ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಶ್ರೀ ಶಾರದಾ ಮಾತೆಯ ದರ್ಶನವನ್ನು ಪಡೆಯಬಹುದು. ಅ.13ರಂದು ಶ್ರೀ ಕಾಳಿಕಾ ದೇವಿಯ ವಿಶೇಷ ಅಲಂಕಾರ ಮಾಡಲಾಗುವುದು. ಬೆಳಗ್ಗೆ 10 ಕ್ಕೆ ವಿದ್ಯಾರಂಭ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ದೀಪಾಲಂಕಾರ ಸೇವೆ ಜರಗಲಿದೆ.