ಉಡುಪಿಯಲ್ಲಿ ಬೆಂಕಿ ದುರಂತಕ್ಕೆ ಓರ್ವ ಬಲಿ!
– ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಬಾರ್ ಮಾಲಕ ದುರ್ಮರಣ
– ಪತ್ನಿಗೆ ಗಾಯ, ಆಸ್ಪತ್ರೆ ದಾಖಲು: ಮನೆಯಲ್ಲಿ ಬೆಂಕಿ ದುರಂತ
– ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ಅಗ್ನಿ ಅನಾಹುತ
– ಕಡಬ: ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು!
NAMMUR EXPRESS NEWS
ಉಡುಪಿ: ಉಡುಪಿಯ ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್ನ ಬಾರ್ ಮಾಲಿಕರೊಬ್ಬರ ಮನೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಬಾರ್ ಮಾಲಕ ಸಾವನ್ನಪ್ಪಿ ಅವರ ಪತ್ನಿ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಬಾರ್ ಮಾಲಿಕ ರಮಾನಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬೆಂಕಿ ಅವಘಡದಲ್ಲಿ ಅವರ ಪತ್ನಿ ಅಶ್ವಿನಿ ಅವರಿಗೂ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಈ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.
ಮಂಗಳೂರು: ಮೀನು ಸಂಸ್ಕರಣಾ ಘಟಕದಲ್ಲಿ ಅಗ್ನಿ ಅನಾಹುತ!
ಮಂಗಳೂರು: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೀನು ಸಂಸ್ಕರಣಾ ಘಟಕವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಮಂಗಳೂರು ಹೊರ ವಲಯದ ಸುರತ್ಕಲ್ನಲ್ಲಿ ಅಗ್ನಿ ಅವಘಡ ನಡೆದಿದ್ದು, ಅಥೆಂಟಿಕ್ ಓಷಿಯನ್ ಟ್ರೆಷರ್ ಮೀನು ಸಂಸ್ಕರಣಾ ಘಟಕದಲ್ಲಿ ಹಾನಿ ಸಂಭವಿಸಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.
ಬೆಂಕಿ ಅನಾಹುತದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಕಡಬ: ಗಾಳಿ ಮಳೆಗೆ ಹಾರಿ ಹೋದ ಶಾಲೆಯ ಹೆಂಚುಗಳು!
ಕಡಬ: ಭಾರೀ ಗಾಳಿ ಮಳೆಗೆ ಶಾಲೆಯ ಹೆಂಚುಗಳು ಹಾರಿ ಹೋದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾ.ಪಂ ವ್ಯಾಪ್ತಿಯ ಬಲ್ಯ ಹಿ.ಪ್ರಾ.ಶಾಲೆಯಲ್ಲಿ ನಡೆದಿದೆ. ಭಾರಿ ಗಾಳಿ ಪರಿಣಾಮ ಶಾಲಾ ಕಟ್ಟಡದ ಹೆಂಚುಗಳು ಗಾಳಿಗೆ ಹಾರಿ ಹೋಗಿದ್ದು, ತರಗತಿಯೊಳಗೆ ನೀರು ನಿಂತಿದೆ.
ಛಾವಣಿಯನ್ನು ದುರಸ್ತಿ ಮಾಡದಿದ್ದರೆ ತರಗತಿ ನಡೆಸಲು ಸಾಧ್ಯವಿಲ್ಲ. ಭಾನುವಾರ ರಜಾ ದಿನವಾದ್ದರಿಂದ ಭಾರೀ ಅನಾಹುತ ತಪ್ಪಿದೆ. ಘಟನೆಯ ಮಾಹಿತಿ ತಿಳಿದು ಶಾಲಾ ಮುಖ್ಯ ಶಿಕ್ಷಕಿ ಪುಷ್ಪಾ ಕೆ, ಪಂಚಾಯತ್ ಸದಸ್ಯೆ ಮೀನಾಕ್ಷಿ ನೆಲ್ಲ, ಎಸ್ ಡಿ ಎಂ ಸಿ ಸದಸ್ಯ ಗಣೇಶ್ ಭಟ್ ದೇವರಡ್ಕ, ಮಾಜಿ ಅಧ್ಯಕ್ಷ ಪಿ.ಟಿ.ಜೋಸೆಫ್, ಉಮಾಮಹೇಶ್ವರಿ ದೇವಸ್ಥಾನದ ಕಾರ್ಯದರ್ಶಿ ನಾರಾಯಣ ಎನ್ ಕೊಲ್ಲಿಮಾರು ಬಲ್ಯ ಮತ್ತಿತರರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.