ಕಡಬದಲ್ಲಿ ನಡೆದಿದೆ ಆ್ಯಸಿಡ್ ದಾಳಿ: ಮೂವರು ಗಂಭೀರ!
– ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಘಟನೆ
– ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು..!
– ಬೆಳಗಾವಿಯ ಬೈಲಹೊಂಗಲ ತಾಲೂಕಿನಲ್ಲಿ ನಡೆದ ದುರಂತ
– ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್.!
– ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಘಟನೆ
– ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್: ವೃದ್ಧ ಸಾವು!
NAMMUR EXPRESS NEWS
ಕಡಬ: ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಯೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ದಾಳಿಗೊಳಗಾದ ವಿದ್ಯಾರ್ಥಿನಿಯರನ್ನು ಅಲಿನ ಸಿಬಿ, ಅರ್ಚನಾ, ಅಮೃತ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಅಭಿನ್ ಎಂಬಾತನನ್ನು ಬಂಧಿಸಲಾಗಿದೆ.
ಕಡಲೆ ರಾಶಿ ಮಾಡುವ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆ ಸಾವು..!
ಬೆಳಗಾವಿ : ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್ಗೆ ಸಿಲುಕಿ ಮಹಿಳೆ ಮೃತಪಟ್ಟಿದ್ದಾಳೆ. ದೇವಲಾಪುರ ಗ್ರಾಮದ ಮಹಾದೇವಿ ಮಲ್ಲಪ್ಪ ಗಣಾಚಾರಿ (45) ಮೃತ ರೈತ ಮಹಿಳೆ. ಜಮೀನಿನಲ್ಲಿ ಕಡಲೆ ರಾಶಿ ಮಾಡುವಾಗ ಮಷಿನ್ ಒಳಗಡೆ ಸೀರೆ ಸಿಲುಕಿ ಈ ದುರ್ಘಟನೆ ನಡೆದಿದೆ. ಮಷಿನ್ ಒಳಗೆ ಮಹಿಳೆ ಸಿಲುಕುವುದು ಕಂಡ ಕುಟುಂಬಸ್ಥರು ಮಷಿನ್ ಬಂದ್ ಮಾಡಿ ಮಹಿಳೆಯನ್ನು ಹೊರ ತೆಗೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಕೊನೆಯ ಉಸಿರೆಳೆದಿದ್ದಾರೆ. ಮಹಿಳೆ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಮಹಿಳೆಗೆ ಪತಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಪ್ರಕರಣ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಹಿಳೆಯ ಕಾಲಿನ ಮೇಲೆ ಹತ್ತಿದ ಸಾರಿಗೆ ಬಸ್..!
ಶಿವಮೊಗ್ಗ: ಸಾರಿಗೆ ಬಸ್ ಮಹಿಳೆಯ ಕಾಲಿನ ಮೇಲೆ ಹತ್ತಿದ ಘಟನೆ ಭದ್ರಾವತಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ನೋಡ ನೋಡುತ್ತಿದ್ದಂತೆ ಮಹಿಳೆಯ ಕಾಲಿನ ಮೇಲೆ ಸಾರಿಗೆ ಬಸ್ ಹತ್ತಿದ್ದು, ಅಪಘಾತದಲ್ಲಿ ಭದ್ರಾವತಿ ಪಟ್ಟಣದ ನಿವಾಸಿಯಾಗಿರುವ ಚಂದ್ರಬಾಯಿ ಎನ್ನುವವರಿಗೆ ಗಂಭೀರ ಗಾಯವಾಗಿದೆ. ಕೂದಲೆಳಿಯ ಅಂತರದಲ್ಲಿ ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾರೆ. ಈ ಘಟನೆ ಇದೀಗ ಎಲ್ಲೆಡೆ ವೈರಲ್ ಆಗಿದೆ.
ನಕಲಿ ವೈದ್ಯ ಕೊಟ್ಟ ಇಂಜೆಕ್ಷನ್: ವೃದ್ಧ ಸಾವು!
ತುಮಕೂರು: ಒಂದೇ ದಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಪಾವಗಡದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ನಕಲಿ ವೈದ್ಯನೊಬ್ಬ ಕೊಟ್ಟ ಇಂಜೆಕ್ಷನ್ನಿಂದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಪಾವಗಡ ತಾಲೂಕಿನ ಕೊತ್ತೂರು ಮೂಲದ ಕೋಟೆ ಚಿತ್ತಯ್ಯ (58) ಮೃತ ದುರ್ದೈವಿ. ಅಮಾಯಕ ವೃದ್ಧನನ್ನು ನಕಲಿ ವೈದ್ಯ ಮಾರುತಿ ಎಂಬಾತ ಬಲಿ ತೆಗೆದುಕೊಂಡಿದ್ದಾನೆ. ತುಮಕೂರಿನ ಪಾವಗಡ ತಾಲೂಕು ಕಿಲಾರ್ಲಹಳ್ಳಿ ಗ್ರಾಮದಲ್ಲಿ ಮಾರುತಿ ಎಂಬಾತ ಕ್ಲಿನಿಕ್ ನಡೆಸುತ್ತಿದ್ದ. ಡಾಕ್ಟರ್ ಕೊಟ್ಟ ಇಂಜೆಕ್ಷನ್ಗೆ ಕ್ಷಣ ಮಾತ್ರದಲ್ಲೇ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮೃತ ಕುಟುಂಬಸ್ಥರು ವೈದ್ಯನ ವಿರುದ್ಧ ದೂರು ನೀಡಿದ್ದಾರೆ.