ಮೂಡಿಬಿದರೆ ಆಳ್ವಾಸ್ ವಿರಾಸತ್ ಶುರು!
– ಇಂದಿನಿಂದ ಡಿ.17ರವರೆಗೆ ಅದ್ದೂರಿಯಾಗಿ ನಡೆಯುತ್ತೆ ವಿರಾಸತ್
– ಸಾಂಸ್ಕೃತಿಕ ರಸದೌತಣ ಉಣ ಬಡಿಸುವ ಸಿದ್ದ
NAMMUR EXPRESS NEWS
ಮೂಡುಬಿದಿರೆ: ರಾಷ್ಟ್ರದ ಪರಂಪರೆಯ ಶ್ರೀಮಂತಿಕೆಯ ಅನನ್ಯತೆಯೊಂದಿಗೆ ಸಾಂಸ್ಕೃತಿಕ ಮನಸ್ಸುಗಳನ್ನು ತನ್ನತ್ತ ಸೆಳೆಯುವ ಮೂಡುಬಿದಿರೆಯ ವಿದ್ಯಾಗಿರಿ ಮತ್ತೆ “ಆಳ್ವಾಸ್ ವಿರಾಸತ್-2023’ಕ್ಕೆ ತಳಿರು ತೋರಣದೊಂದಿಗೆ ಸಜ್ಜಾಗಿ ಜನರನ್ನು ಸ್ವಾಗತಿಸುತ್ತಿದೆ. ಈಗಾಗಲೇ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. 29ನೇ ವಿರಾಸತ್ ಡಿ.14ರಂದು ಚಾಲನೆ ಪಡೆದು ಡಿ. 17ರ ವರೆಗೆ ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿವೆ. ಪ್ರತೀ ಸಂಜೆ ವೇಳೆಗೆ ಸಾಂಸ್ಕೃತಿಕ ರಸದೌತಣ ನೀಡಲು ವಿರಾಸತ್ ವೇದಿಕೆ ಸಜ್ಜಾಗಿದ್ದರೆ, ಸಪ್ತ ಮೇಳಗಳು ದಿನವಿಡೀ ನಡೆದು ಯಾವುದೇ ಆಸಕ್ತಿ ಇರುವವರಿಗೂ ಮನಮುದಗೊಳಿಸಲಿವೆ. ದೀಪಾಲಂಕಾರ, ಕಲಾಕೃತಿಗಳು, ಪುಷ್ಪ-ಫಲಗಳು ಕಣ್ಮನ ಸೆಳೆಯುತ್ತಿವೆ.
ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ನಿಮ್ಮನ್ನು ಕೈಬೀಸಿ ಕರೆಯುತ್ತಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರ್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಪ್ರಾಂಗಣದುದ್ದಕ್ಕೂ ಹೆಜ್ಜೆ ಹಾಕಿದಂತೆ ಆನೆ, ಜಿರಾಫೆ, ಎತ್ತು ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ ಡೊಳ್ಳು ಕುಣಿತ, ಅಂಬೇಡ್ಕರ್, ವೀರಗಾಸೆ ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.
ನಾಡಿನ ಮೂಲೆ ಮೂಲೆಯಿಂದ ಜನ
ಕರಾವಳಿ, ಮಲೆನಾಡು ಮಾತ್ರವಲ್ಲದೆ ಈ ಹಬ್ಬಕ್ಕೆ ನಾಡಿನ ಮೂಲೆ ಮೂಲೆಯಿಂದ ಜನ ಆಗಮಿಸುತ್ತಿದ್ದಾರೆ. ಇಲ್ಲಿನ ಸಾಂಸ್ಕೃತಿಕ ಹಬ್ಬ ಯುವ ಜನರನ್ನು ಸೆಳೆಯುತ್ತಿದೆ. ಡಾ. ಮೋಹನ್ ಆಳ್ವಾ ಸರ್ವರನ್ನು ಸ್ವಾಗತಿಸಿದ್ದಾರೆ.