ಟಾಪ್ ನ್ಯೂಸ್ ಕರಾವಳಿ
ಪಬ್ಬಿನಲ್ಲಿ ಮಹಿಳೆ ಮಾನಭಂಗಕ್ಕೆ ಯತ್ನ: ನಾಲ್ವರು ಅಂದರ್!
– ಮಂಗಳೂರಿನ ಪಬ್ ಒಂದರಲ್ಲಿ ಘಟನೆ: ಪುತ್ತೂರು ಯುವಕರ ಬಂಧನ
-ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು
– ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ!
– ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ!
NAMMUR EXPRESS NEWS
ಮಂಗಳೂರು: ಪಬ್ವೊಂದಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿ, ನಿಂದನೆ ಮಾಡಿರುವ ಆರೋಪದಲ್ಲಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ನಿವಾಸಿಗಳಾದ ಮಹೇಶ್ (28), ವಿನಯ್ (30), ನಿತೇಶ್ (32) ಪ್ರೀತೀಶ್ (33) ಬಂಧನ ಪಾಂಡೇಶ್ವರದ ಮಾಲ್ವೊಂದರಲ್ಲಿರುವ ಪಬ್ಗೆ ಜುಲೈ ೩ರಂದು ಮಹಿಳೆಯೊಬ್ಬರು ತನ್ನ ಗೆಳತಿಯೊಂದಿಗೆ ತೆರಳಿದ್ದರು. ಈ ವೇಳೆ ಪಬ್ನಲ್ಲಿ ಪಾರ್ಟಿ ಮಾಡುತ್ತಿದ್ದ ಯುವಕರ ತಂಡ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಜೊತೆಗೆ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಅವರನ್ನು ಚುಡಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಹಿಳೆಯು ದೂರು ನೀಡಿದ್ದು, ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀದರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಓರ್ವ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಉಳಿದ ಮೂವರು ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದಾರೆ ಎಂದು ವರದಿಯಾಗಿದೆ.
ಮೂಡುಬಿದಿರೆ: ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ: ವಾಹನ ಸವಾರ ಮೃತ್ಯು
ಮೂಡುಬಿದಿರೆ: ತಾಲೂಕಿನ ಕೋಟೆಬಾಗಿಲು ಬಳಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮರಿಯಾಡಿ ನಿವಾಸಿ ಅಹ್ಮದ್ ಬಾವ (50) ಅವರು ಮೃತಪಟ್ಟಿದ್ದಾರೆ.
ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಕಾರೊಂದು ಮೂಡುಬಿದಿರೆಯಿಂದ ಮರಿಯಾಡಿ ಕಡೆಗೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಅಹ್ಮದ್ ಬಾವ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಂಜೆ ವೇಳೆ ಮೃತಪಟ್ಟಿದ್ದಾರೆ.
ಉಡುಪಿ: ನಿಂತಿದ್ದ ಬಸ್ಸಿಗೆ ಸ್ಕೂಟರ್ ಡಿಕ್ಕಿ; ಇಬ್ಬರಿಗೆ ಗಾಯ
ಉಡುಪಿ: ನಿಂತಿದ್ದ ಬಸ್ಸಿಗೆ ದಿಚಕ್ರ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಕಿನ್ನಿಮುಲ್ಕಿಯ ಮಂಜುನಾಥ್ ಪೆಟ್ರೋಲ್ ಬಂಕ್ ಬಳಿ ಸೋಮವಾರ ರಾತ್ರಿ ನಡೆದಿದೆ. ಅತೀ ವೇಗದಲ್ಲಿ ಸುಜುಕಿ ಆಕ್ಸಿಸ್ ನಲ್ಲಿ ಬಂದ ಯುವಕರಿಬ್ಬರು ರಸ್ತೆ ಬದಿ ನಿಂತಿದ್ದ ಬಸ್ ಗೆ ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆ ಬಿದ್ದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಆ ಪೈಕಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯರು ಗಾಯಗೊಂಡ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ನಜ್ಜುಗುಜ್ಜಾಗಿದೆ. ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಣಿಪಾಲ: ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳ್ಳತನ!
ಉಡುಪಿ: ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಿನಿಂದ ಬಂದ ವ್ಯಕ್ತಿಯೋರ್ವ ಸುಲಿಗೆ ಮಾಡಿಕೊಂಡು ಪರಾರಿಯಾದ ಘಟನೆ ಮಣಿಪಾಲದ ಲಕ್ಷ್ಮೀಂದ್ರನಗರದಲ್ಲಿ ನಡೆದಿದೆ. ಶಾಂತಾ ಕಾಮತ್ (84) ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಬೆಳಿಗ್ಗೆ 7 ಗಂಟೆಗೆ ಕೆಲಸಕ್ಕೆಂದು ಹೋಗುತ್ತಿದ್ದರು. ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಂಡೇಲು ಎಂಬಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕುತ್ತಿಗೆಗೆ ಕೈಹಾಕಿ ಚಿನ್ನದ ಚೈನ್ ಅನ್ನು ಕಸಿದುಕೊಂಡಿದ್ದಾನೆ. ಈ ವೇಳೆ ಅವರು ಆತನನ್ನು ಹಿಡಿಯಲು ಯತ್ನಿಸಿದರೂ ಆತ ಚೈನ್ ಸಹಿತ ಪರಾರಿಯಾಗಿದ್ದಾನೆ. ಈ ವೇಳೆ ಶಾಂತಾ ಕಾಮತ್ ಅವರ ಕೈಗೆ ಗಾಯವಾಗಿದೆ. ಸುಮಾರು 20ಗ್ರಾಂ ತೂಕದ ಚಿನ್ನದ ಸರವನ್ನು ಕಳ್ಳ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆತ್ತಿಕಲ್ ಗುಡ್ಡ ಕುಸಿಯುವ ಭೀತಿ: ಆತಂಕದಲ್ಲಿ 200ಕ್ಕೂ ಮನೆ
ಮಂಗಳೂರು : ಮಂಗಳೂರು – ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶ ಕುಸಿಯುವ ಭೀತಿ ಎದುರಾಗಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.ವಾಮಂಜೂರು ಆಸುಪಾಸಿನ ಕೆತ್ತಿಕಲ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣು
ಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ
ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು
ತಜ್ಞರು ತಿಳಿಸಿದ್ದಾರೆ. ಗುಡ್ಡದ ಸಮೀಪದಲ್ಲೇ ಇರುವ ಮನೆಗಳಿಗೆ ನೋಟಿಸ್ ನೀಡಲಾಗಿದೆ. ಅಪಾಯಕಾರಿ ಸ್ಥಳದಲ್ಲಿನ 12 ಮನೆಗಳಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಿದ್ದಾರೆ. ಹೀಗಾಗಿ ಜನ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಅಧಿಕಾರಿಗಳ ವಿರುದ್ದ ಕೆತ್ತಿಕಲ್ ಗುಡ್ಡದ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆ ಖಾಲಿ ಮಾಡಿ ಹೋಗಿ ಎಂದರೆ ನಾವೆಲ್ಲಿಗೆ ಹೊಗುವುದು? ಗುಡ್ಡ ಅಗೆಯುವ ಸಂದರ್ಭದಲ್ಲಿ ಕ್ರಮ ಕೈಗೊಳ್ಳುತ್ತಿದ್ದರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಿತ್ತೇ ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.