ಕರಾವಳಿಯಲ್ಲಿ ರಾಮನಿಗೆ ಉಘೇ ಉಘೇ!
– ಅಯೋಧ್ಯೆ ಪ್ರಾಣಪ್ರತಿಷ್ಠೆ: ಕರಾವಳಿಯಲ್ಲಿ ಸಡಗರ
– ಮನೆಗಳಲ್ಲಿ ರಾಮ ಹನುಮನ ಬಾವುಟ ಸಿಂಗಾರ
– ದೇವಾಲಯಗಳಲ್ಲಿ ವಿಶೇಷ ಪೂಜೆ: ಸಂಭ್ರಮ
NAMMUR EXPRESS NEWS
ಮಂಗಳೂರು/ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಲ್ಲಿ ಬಾಲರಾಮ ಮೂರ್ತಿಯ ಪ್ರತಿಷ್ಠೆಯ ಪ್ರಯಕ್ತ ಸೋಮವಾರ ಕರಾವಳಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಭಕ್ತರು ರಾಮತಾರಕ ಮಂತ್ರಗಳನ್ನು ಜಪಿಸಿದರು. ಪ್ರತಿ ತಾಲೂಕಿನ ಹಳ್ಳಿ ಹಳ್ಳಿಯಲ್ಲೂ ಪೂಜೆ, ಅನ್ನದಾನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆಯನ್ನು ಇಲ್ಲಿನ ರಾಮಭಕ್ತರು ಸಂಭ್ರಮ ಸಡಗರದಿಂದ ಆಚರಿಸಿದರು. ಆಕರ್ಷಕ ರಂಗೋಲಿಗಳನ್ನು ಬಿಡಿಸಿ, ದೇವಾಲಯಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು.
ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ- ಹಣ್ಣುಹಂಪಲು ವಿತರಣೆ ಮಾಡಲಾಯಿತು. ಉಡುಪಿ ಯಶೋಧ ಆಟೋ ಚಾಲಕರ ಮತ್ತು ಮಾಲಕರ ಸಂಘ ಮತ್ತು ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ವತಿಯಿಂದ ರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠೆ ಇರುವ ಪ್ರಯುಕ್ತ ಯಶೋಧ ಆಟೋ ಸಂಘ ಮತ್ತು ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಸರ್ಕಾರಿ ಆಸ್ಪತ್ರೆ ಅಜ್ಜರಕಾಡು ಮತ್ತು ಡಾ.ಟಿ.ಎಂ.ಎ ಪೈ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಎಲ್ಲೆಲ್ಲೂ ಕೇಸರಿ ಸಡಗರ!
ಕರಾವಳಿಯ ವಿವಿಧ ಭಾಗಗಳಲ್ಲಿ ಕೇಸರಿ ಧ್ವಜ ತೋರಣ ಕಂಗೊಳಿಸುತ್ತಿದೆ. ಪ್ರಮುಖ ರಸ್ತೆಗಳ ಅಲ್ಲಲ್ಲಿ ಶ್ರೀರಾಮನ ಕಟೌಟ್,ಶುಭ ಕೋರುವ ಬ್ಯಾನರ್ಗಳು, ಪ್ರವೇಶ ದ್ವಾರಗಳು, ಪತಾಕೆ ಗಳು ರಾರಾಜಿಸುತ್ತಿವೆ. ಕೆಲವು ಬಸ್, ಆಟೋ, ಟ್ಯಾಕ್ಸಿ ನಿಲ್ದಾಣಗಳೂ ಕೇಸರಿಮಯವಾಗಿದೆ. ವಾಹನಗಳಲ್ಲೂ ಶ್ರೀರಾಮ, ರಾಮ ಮಂದಿರದ ಸ್ಟಿಕ್ಕರ್ಗಳಿವೆ. ವಿಶೇಷವಾಗಿ ಕೆಲವು ಮನೆಗಳಲ್ಲಿ ಕೇಸರಿ ಬಾವುಟ, ಜೈ ಶ್ರೀರಾಮ್ ಸ್ಟಿಕ್ಕರ್ಗಳನ್ನು ಅಂಟಿಸಲಾಗಿದೆ.
ಕರಾವಳಿಯ ರಾಮ ದೇಗುಲ ಸೇರಿ ಎಲ್ಲಾ ಕಡೆ ಪೂಜೆ
ಕರಾವಳಿಯ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು ದೇವಾಲಯಗಳನ್ನು ವಿಶೇಷವಾಗಿ ಸಿಂಗರಿಸಲಾಗಿತ್ತು. ಪ್ರಾಣ ಪ್ರತಿಷ್ಠೆಯ ವಿಧಿಗಳು ನೆರವೇರುತ್ತಿದ್ದಂತೆಯೇ ದೇವಸ್ಥಾನಗಳಲ್ಲಿ ಭಕ್ತರು ಸಿಹಿ ಹಂಚಿ ಸಂಭ್ರಮಿಸಿದರು. ಕೆಲವು ದೇವಸ್ಥಾನಗಳಲ್ಲಿ ತಂಪು ಪಾನೀಯ, ಮಜ್ಜಿಗೆ, ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ನಡೆಯುವ ಪ್ರಾಣಪ್ರತಿಷ್ಠೆ ಸಮಾರಂಭ ವೀಕ್ಷಿಸಲು ನಗರದ ಕದ್ರಿ ದೇವಸ್ಥಾನ, ಪಾಲಿಕೆ ಕಚೇರಿ, ಶ್ರೀವಿಠೋಭ ರುಕುಮಾಯಿ ದೇವಸ್ಥಾನದ ಆವರಣವೂ ಸೇರಿದಂತೆ ಹಲವೆಡೆ ಡಿಜಿಟಲ್ ಪರದೆಯ ವ್ಯವಸ್ಥೆ ಕಲ್ಪಿಸಲಾಗಿತ್ತು.
ಬೆಳಗ್ಗಿನಿಂದಲೇ ರಾಮ ತಾರಕ ಜಪ ಯಜ್ಞ, ಹೋಮ, ಹವನ ಇತ್ಯಾದಿಗಳ ಜತೆಗೆ ವಿವಿಧ ಭಜನ ಮಂಡಳಿಗಳಿಂದ ಭಜನೆ ನೆರವೇರಿತು. ಶ್ರೀ ರಾಮೋತ್ಸವದ ಹೆಸರಿನಲ್ಲಿ ದಿನವಿಡಿ ವಿವಿಧ ಕಾರ್ಯಕ್ರಮ ಮಾಡಲಾಯಿತು. ದೇವರಿಗೆ ವಿಶೇಷ ಪೂಜೆ, ರಂಗಪೂಜೆ, ಶ್ರೀರಾಮ ಪಟ್ಟಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆಯ ಜತೆಗೆ ಮಧ್ಯಾಹ್ನದ ಅನ್ನದಾನದ ವ್ಯವಸ್ಥೆಯನ್ನು ದೇವಸ್ಥಾನಗಳಲ್ಲಿ ಮಾಡಲಾಗಿತ್ತು. ಸಂಜೆ ದೇವಸ್ಥಾನ ಹಾಗೂ ಪ್ರತೀ ಮನೆಯಲ್ಲಿ ದೀಪೋತ್ಸವ ಇರಲಿದೆ. ಕೆಲವು ದೇವಸ್ಥಾನಗಳಲ್ಲಿ ಉತ್ಸವ, ರಥೋತ್ಸವ ನಡೆಯಲಿದೆ.