ಕರಾವಳಿಯಲ್ಲಿ ಅಬ್ಬರಿಸುತ್ತಿರುವ ಮಳೆ!
* ಮಳೆ ಕಾರಣ ರೋಸಿ ಹೋದ ಜನತೆ
* ಬೆಳ್ತಂಗಡಿಯಲ್ಲಿ ಧರೆ ಕುಸಿತ: ಹಲವೆಡೆ ಹಾನಿ
* ದ.ಕ., ಉಡುಪಿ: ಭಾರೀ ಮಳೆ ಸಾಧ್ಯತೆ?
NAMMUR EXPRESS NEWS
ಮಂಗಳೂರು/ಉಡುಪಿ: ಕರಾವಳಿಯಲ್ಲಿ ಮಳೆ ಅಬ್ಬರ ಶುರುವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು,ಮಂಗಳೂರು ನಗರ, ಬೆಳ್ತಂಗಡಿ, ಸುಳ್ಯ ತಾಲೂಕಿನ ಹಲವೆಡೆ ಮಳೆಯಾಗಿದೆ.
ಕರಾವಳಿಗೆ ಎರಡು ದಿನ ಎಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸದ್ಯದ ಪ್ರಕಾರ ಗುರುವಾರದವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಪ್ರದೇಶ ಪಶ್ಚಿಮ, ವಾಯವ್ಯ ದಿಕ್ಕಿನತ್ತ ಸಾಗುತ್ತಿದ್ದು, ಇದು ಒಮಾನ್ ತೀರದತ್ತ ಸಾಗಿ ಬಲ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಳಿಸಿದೆ.ಸಮುದ್ರ ತೀರ ಪ್ರದೇಶದಲ್ಲಿ 35-45 ಕಿ.ಮೀ. ವೇಗದಲ್ಲಿ, ಕೆಲವೊಮ್ಮೆ 55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳೂರಿನಲ್ಲಿ ದಿನದ ತಾಪಮಾನ ಗರಿಷ್ಠ 30.2 ಡಿ.ಸೆ. ಮತ್ತು ಕನಿಷ್ಠ 26.6 ಡಿ.ಸೆ. ದಾಖಲಾಗಿದೆ.
ಸುಳ್ಯ, ಸುಬ್ರಹ್ಮಣ್ಯದಲ್ಲಿ ಸುಳ್ಯ ತಾಲೂಕು ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಅ. 14ರಂದು ಅಪರಾಹ್ನ ಬಳಿಕ ಉತ್ತಮ ಮಳೆಯಾಗಿದೆ.
ಬೆಳ್ತಂಗಡಿಯಲ್ಲಿ ಮಳೆ, ಧರೆ ಕುಸಿತ!!
ಬೆಳ್ತಂಗಡಿ ತಾಲೂಕಿನಲ್ಲಿ ಸಂಜೆ ಬಳಿಕ ನಿರಂತರ ಮಳೆಯಾಗುತ್ತಿದ್ದು, ಅ. 14ರಂದು ರಾತ್ರಿ 7.30ರಿಂದ ಒಂದು ತಾಸು ಮಳೆಯಾಗಿದೆ.ರಾತ್ರಿ ಸುರಿದ ಭಾರಿ ಮಳೆಗೆ ಮುಂಡಾಜೆ- ಧರ್ಮಸ್ಥಳ ರಸ್ತೆಯ ಗುಂಡಿ ದೇವಸ್ಥಾನ, ಮಾಣಿಂಜ, ಪಿಲತ್ತಡ್ಕ, ಕಲ್ಮಂಜ ಸೇರಿದಂತೆ ಅಲ್ಲಲ್ಲಿ ಗುಡ್ಡ ಕುಸಿತವಾಗಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಮುಂಡಾಜೆಯ ಶ್ರೀಧರ ಪೂಜಾರಿ ಅವರ ಮನೆ ಮೇಲ್ಭಾಗದಲ್ಲಿ ಬರೆ ಜರಿದು ರಸ್ತೆಗೆ ಬಿದ್ದಿದೆ.
ದ.ಕ., ಉಡುಪಿ: ಭಾರೀ ಮಳೆ ಸಾಧ್ಯತೆ!
ಕರಾವಳಿ:ಆಗ್ನೇಯ ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಜತೆಗೆ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಬೀಳ ಬ ಹು ದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆಯಿದೆ. ಜತೆಗೆ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.