ಬಸ್ಸು ಚಾಲನೆಯಲ್ಲಿ ಚಾಲಕನಿಗೆ ಎದೆ ನೋವು; ಹೃದಯಾಘಾತಕ್ಕೆ ಯುವಕ ಬಲಿ!
– ಕುಂದಾಪುರ: ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆ ಬೆಂಕಿ ತಗುಲಿ ಸಾವು!
– ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ತೋಟಕ್ಕೆ: ಸಾವು
– ಮೂರ್ಛೆ ರೋಗ: ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ!
NAMMUR EXPRESS NEWS
ಸುಳ್ಯ: ಸುಳ್ಯದ ಅರಂತೋಡು ತೋಡಿಕಾನ ಬಳಿ ಖಾಸಗಿ ಬಸ್ಸಿನ ಚಾಲಕರೊಬ್ಬರಿಗೆ ಬಸ್ಸು ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದಾರೆ. ಸೋಮವಾರ ಮುಂಜಾನೆ ಕರ್ತವ್ಯ ನಿರತರಾಗಿದ್ದ ವೇಳೆ ಗುರುಪ್ರಸಾದ್ ಕುಂಚಡ್ಕ (30) ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವಾಗ ಅರಂಬೂರು ಬಳಿ ಆಟೊ ರಿಕ್ಷಾದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆ ಬೆಂಕಿ ತಗುಲಿ ಸಾವು!
ಗಂಗೊಳ್ಳಿ: ಚಹಾ ಮಾಡುತ್ತಿದ್ದ ವೇಳೆ ಗ್ಯಾಸ್ ಒಲೆಯ ಬೆಂಕಿ ಧರಿಸಿದ್ದ ಬಟ್ಟೆಗೆ ತಗಲಿ ಗಂಭೀರ ಗಾಯಗೊಂಡು ಗುಜ್ಜಾಡಿ ಸಮೀಪದ ಕೊಡಪಾಡಿಯ ಫಾತಿಮಾ ಕಾರ್ಡಿನ್ (65) ಸಾವನ್ನಪ್ಪಿದ್ದಾರೆ.
ಫಾತಿಮಾ ಅ.2ರಂದು ಪುತ್ರನ ಮನೆಲ್ಲಿದ್ದಾಗ ದುರ್ಘಟನೆ ಸಂಭವಿಸಿತ್ತು. ಗಂಭೀರ ಸುಟ್ಟ ಗಾಯಗಳೊಂದಿಗೆ ಅವರನ್ನು ಮರವಂತೆಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಳಿಕ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಗೆ, ಅನಂತರ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.ಅ. 5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅ. 13ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಬರುತ್ತಿರುವಾಗ ಕುಂದಾಪುರದ ಬಳಿ ಮತ್ತೆ ಅಸ್ವಸ್ಥಗೊಂಡರು. ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ಹೋದರೂ ಸ್ವಲ್ಪ ಸಮಯದಲ್ಲಿ ಸಾವನ್ನಪ್ಪಿದರು.
ಮೂರ್ಛೆ ರೋಗ: ಶಾಲಾ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ!
ಬಂಟ್ವಾಳ: ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುತ್ತಿದ್ದ ಬಸ್ ಚಾಲಕನಿಗೆ ಮೂರ್ಚೆ ರೋಗ (ಪಿಡ್ಸ್) ಉಂಟಾಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಪೊಳಲಿ ಸಮೀಪದ ಬಡಕಬೈಲು ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ಬಡಕಬೈಲಿನ ಆಂಗ್ಲ ಮಾಧ್ಯಮ ಶಾಲೆಯೊಂದರ ಬಸ್ ಚಾಲಕ ಅಡ್ಡೂರು ನಿವಾಸಿ ಸುರೇಶ್ ಎಂಬವರಿಗೆ ಮೂರ್ಚೆ ರೋಗ ಉಂಟಾಗಿದೆ. ಪರಿಣಾಮ ಬಸ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ತೆರಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ಚಾಲಕ ಸಹಿತ ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರು ತೋಟಕ್ಕೆ: ಸಾವು
ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬಿಸಿರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ.
ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಮೃತಪಟ್ಟ ಮಹಿಳೆಯಾಗಿದ್ದು. ಚಾಲಕ ರೂಪೇಶ್ (40) ಅವರಿಗ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರನ್ನು ಚಲಾಯಿಸುತ್ತಿದ್ದ ರೂಪೇಶ್ ಅವರ ಪತ್ನಿ ಸುಚಿತ್ರ (33) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮೂಲತಃ ಮಂಗಳೂರು ಕೊಡಿಯಾಲ್ ಬೈಲು ನಿವಾಸಿಯಾದ ಪಿಡಬ್ಲೂಡಿ ಇಂಜಿನಿಯರ್ ಗೋಪಾಲ ಸಹೋದರಿ ಭಾಗೀರಥಿ ಅವರು ಅವರು ಮೃತಪಟ್ಟಿದ್ದಾರೆ. ಭಾಗೀರಥಿ ಅವರ ಮಗಳು ಸುಚಿತ್ರ ಅವರ ಪತಿ ರೂಪೇಶ್ ಅವರು ತುಮಕೂರು ಜಿಲ್ಲೆಯವರಾಗಿದ್ದು, ದಸರಾ ರಜೆಯಲ್ಲಿ ಅಳಿಯ ಮಗಳ ಜೊತೆ ತುಮಕೂರಿಗೆ ಹೋಗಿ ವಾಪಾಸ್ಸು ಮಂಗಳೂರಿಗೆ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.