ಪೊಲೀಸರ ಬಲೆಗೆ ಬಿದ್ದ ಚಡ್ಡಿ ಗ್ಯಾಂಗ್ ದರೋಡೆಕೋರರರು!
– ಮಂಗಳೂರಲ್ಲಿ ದರೋಡೆ ಮಾಡಿ ಬೆಂಗಳೂರು ಹೋಗುವಾಗ ಅರೆಸ್ಟ್
– ಮಧ್ಯ ಪ್ರದೇಶದಿಂದ ಬಂದು ಕಳ್ಳತನ: ಜನರು ನಿರಾಳ
– ಬಸ್ ಕಂಡಕ್ಟರ್ ನೀಡಿದ ಸುಳಿವು: ಏನಿದು ಕೇಸ್..?
NAMMUR EXPRESS NEWS
ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯಲ್ಲಿ ಮೂರು ಕಡೆ ರಾತ್ರೋ ರಾತ್ರಿ ದರೋಡೆ ನಡೆಸಿ ನಗರ ವಾಸಿಗಳಲ್ಲಿ ಭಯ ಮೂಡಿಸಿದ್ದ ಕುಖ್ಯಾತ ದರೋಡೆ ತಂಡವಾದ ಚಡ್ಡಿ ಗ್ಯಾಂಗ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಸೋಮವಾರ ಮಧ್ಯರಾತ್ರಿ ನಗರದ ಉರ್ವ ಬಳಿಯ ಕೋಟೆಕಣಿ ಪ್ರದೇಶದಲ್ಲಿ ವೃದ್ಧ ದಂಪತಿ ವಾಸವಿದ್ದ ಮನೆಗೆ ನುಗ್ಗಿ ಅವರ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ ನಾಲ್ವರ ಗ್ಯಾಂಗ್ ಪರಾರಿಯಾಗಿತ್ತು. ಈ ಮನೆಗೆ ಸಿನಿಮೀಯ ಶೈಲಿಯಲ್ಲಿ ಎಂಟ್ರಿ ಕೊಟ್ಟು ದರೋಡೆ ಮಾಡಿದ್ದ ಈ ಗ್ಯಾಂಗ್ ಮನೆಯಲ್ಲಿದ್ದ ವೃದ್ಧ ದಂಪತಿ ಮೇಲೆ ರಾಡ್ನಿಂದ ಹಲ್ಲೆ ಮಾಡಿತ್ತು. ಬಳಿಕ ಮನೆಯನ್ನು ದೋಚಿದ್ದು ಮಾತ್ರವಲ್ಲದೆ ಮನೆ ಮಾಲೀಕರಿಂದಲೇ ಕೀಯನ್ನು ಪಡೆದುಕೊಂಡು ಅವರ ಕಾರಿನಲ್ಲೇ ಹೆಜಮಾಡಿವರೆಗೆ ಪ್ರಯಾಣ ಮಾಡಿತ್ತು. ನಂತರ ಕಾರನ್ನು ಅಲ್ಲೇ ಬಿಟ್ಟು ಪರಾರಿಯಾಗಿತ್ತು.
ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಪೊಲೀಸರು ಗ್ಯಾಂಗ್ನ ಚಲನ-ವಲನಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮೂಲಗಳ ಪ್ರಕಾರ, ಹೆಜಮಾಡಿಯಿಂದ ಈ ಗ್ಯಾಂಗ್ ಬಸ್ ಮೂಲಕ ಮಂಗಳೂರಿಗೆ ವಾಪಾಸ್ ಬಂದಿದೆ. ಅಲ್ಲಿಂದ ಮತ್ತೆ ಬೆಂಗಳೂರಿನತ್ತ ಪ್ರಯಾಣಿಸುತ್ತಿರಬೇಕಾದರೆ, ಸಕಲೇಶಪುರದ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸದ್ಯ ಈ ನಟೋರಿಯಸ್ ಗ್ಯಾಂಗ್ನ ದರೋಡೆಕೋರರನ್ನು ಪೊಲೀಸರು ವಶಕ್ಕೆ ಪಡೆದು ಮಂಗಳೂರಿನತ್ತ ಕರೆದುಕೊಂಡು ಬರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಧ್ಯ ಪ್ರದೇಶದಿಂದ ಬಂದು ಕಳ್ಳತನ!
ಮಂಗಳೂರು ಜನರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್ನ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಪ್ರದೇಶ ಮೂಲದ ನಾಲ್ಕು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜು ಸಿಂಗ್ವಾನಿಯ (24ವರ್ಷ), ಮಯೂರ್ (30 ವರ್ಷ), ಬಾಲಿ (22ವರ್ಷ) & ವಿಕ್ಕಿ (21 ವರ್ಷ) ಬಂಧಿತರು. ಉರ್ವದಲ್ಲಿ ವೃದ್ಧ ದಂಪತಿ ಮನೆಯಲ್ಲಿ ದರೋಡೆ ನಡೆದ ಬಳಿಕ ಮಿಂಚಿನ ಕಾರ್ಯಾಚರಣೆಯನ್ನು ನಡೆಸಿರುವ ಪೊಲೀಸರು ಮಂಗಳೂರಿನಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿರುವಾಗ ಸಕಲೇಶಪುರದ ಬಳಿ ಬಂಧಿಸಲಾಗಿದೆ.
ಚಡ್ಡಿ ಗ್ಯಾಂಗ್ ಸಿಕ್ಕಿಬಿದ್ದಿದ್ದು ಹೇಗೆ?
ಮಧ್ಯಪ್ರದೇಶ ಮೂಲದ ಚಡ್ಡಿ ಗ್ಯಾಂಗ್ನ ನಾಲ್ವರನ್ನು ಬಂಧಿಸುವಲ್ಲಿ ಮುಲ್ಕಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕೆಎಸ್ಆರ್ಸಿಟಿ ಬಸ್ನ ಕಂಡಕ್ಟರ್ ನೀಡಿದ ಪ್ರಮುಖ ಸುಳಿವು ನೆರವಾಗಿದೆ. ಈ ನಾಲ್ವರು ಮಂಗಳೂರಿನಿಂದ ದರೋಡೆ ಮಾಡಿದ್ದ ಚಿನ್ನಾಭರಣದೊಂದಿಗೆ ಕಾರಿನಲ್ಲಿ ಮುಲ್ಕಿಗೆ ಪರಾರಿಯಾಗಿತ್ತು. ಅಲ್ಲಿಂದ ವಾಪಾಸ್ ಮಂಗಳೂರು ಕೆಎಸ್ಆರ್ಸಿ ಬಸ್ ಹತ್ತಿದ್ದರು. ಅಲ್ಲದೆ ಬೆಂಗಳೂರಿಗೆ ಹೋಗುವ ಬಸ್ ಮಾಹಿತಿ ಕೇಳಿದ್ದರು. ಅದರಂತೆ ಬೆಂಗಳೂರಿಗೆ ಹೊರಟಿದ್ದ ಬಸ್ನ ನಿರ್ವಾಕರನ್ನು ಸಂಪರ್ಕಿಸಿದ ಪೊಲೀಸರು ಅವರು ಪ್ರಯಾಣಿಸುತ್ತಿರುವುದನ್ನು ಖಚಿತಪಡಿಸಿಕೊಂಡು ಹಾಸನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿನ ಪೊಲೀಸರು ಸಕಲೇಶಪುರದಲ್ಲಿ ಬಸ್ ತಡೆದು ನಿಲ್ಲಿಸಿ ಬಂಧಿಸಿದ್ದಾರೆ.
ಎಲ್ಲಾ ವಿಶೇಷ ವರದಿಗೆ nammurexpress.in ವೀಕ್ಷಿಸಿ…!