ಕರಾವಳಿ: ಮಳೆ ನಿಂತು ಹೋದ ಮೇಲೆ ಬದುಕು ಅಸ್ತವ್ಯಸ್ಥ!
– ಪುತ್ತೂರು, ಬೆಳ್ತಂಗಡಿ ಸೇರಿ ಜಿಲ್ಲೆಯ ಹಲವೆಡೆ ಭಾರೀ ಹಾನಿ
– ಜಿಲ್ಲೆಗೆ ಬಂದ್ರು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
– ಕಾಪುವಿನಲ್ಲಿ ಬೋಟ್ ಅಲ್ಲಿ ತಹಸೀಲ್ದಾರ್ ಮೇಡಂ ಸುತ್ತಾಟ
– ವಾಮಂಜೂರು ಅಮೃತೇಶ್ವರ ದೇವಾಲಯ ಮುಳುಗಡೆ
– ಬಜ್ಪೆಯಲ್ಲಿ ಶಾಲಾ ಕಟ್ಟಡ ಕುಸಿಯುವ ಆತಂಕ
ಮಂಗಳೂರು: ರಾಜ್ಯದಲ್ಲಿ ಮಳೆ ಕಾರಣದಿಂದ ಅತೀ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಒಂದು. ಇಲ್ಲಿ ಇಂದಿಗೂ ಅನಾಹುತ ಮುಂದುವರಿದಿದೆ. ಗೋಡೆ, ಮನೆ, ಗುಡ್ಡ, ರಸ್ತೆ ಕುಸಿಯುತ್ತಲೇ ಇವೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ
ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರತಿ ವರ್ಷ ಅದ್ಯಪಾಡಿಯಲ್ಲಿ ಫಲ್ಗುಣಿ ನದಿಯ ನೆರೆ ಪ್ರವಾಹದಿಂದ ಸಂತ್ರಸ್ತರಾಗುತ್ತಿರುವ ಬಗ್ಗೆ ಸ್ಥಳೀಯರು ಸಚಿವರ ಗಮನ ಸೆಳೆದರು. ಅಕ್ಕ ಪಕ್ಕಗ್ರಾಮಗಳು ಜಲಾವೃತವಾಗಿರುವ ಬಗ್ಗೆಯೂ ಮಾ ನೀಡಿದರು.
ಕಾಮಗಾರಿ ಹೆಸರಲ್ಲಿ ಮಣ್ಣು ಮಾಫಿಯಾ?
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕೆತ್ತಿಕಲ್ ಗುಡ್ಡ ಪ್ರದೇಶಕ್ಕೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ಅಲ್ಲಿನ ಸ್ಥಿತಿ ನೋಡಿ ಶಾಕ್ ಆದರು. ಈ ವೇಳೆ ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇಲ್ಲಿನ ಸ್ಥಿತ ನೋಡಿದರೆ ಭಯದ ವಾತಾವರಣ ನಿರ್ಮಾಣವಾಗಿದೆ. ಹೆದ್ದಾರಿ ಕಾಮಗಾರಿ ಹೆಸರಿನಲ್ಲಿ ಮಣ್ಣುಗಣಿಗಾರಿಕೆ ಮಾಡಲಾಗಿದೆ. ದೊಡ್ಡ ಪ್ರಮಾಣದ ಲೋಪದೋಷವಾಗಿರುವುದು ಕಂಡು ಬಂದಿದೆ ಎಂದು ಸಚಿವರು ಹೇಳಿದರು. ಇಲ್ಲಿ ಗುಡ್ಡ ಅಪಾಯಕಾರಿಯಾಗಿರುವ ಬಗ್ಗೆ ಫೆಬ್ರವರಿ ತಿಂಗಳಲ್ಲೇ ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ ಮುನ್ಸೂಚನೆ ನೀಡಿತ್ತು. ಪಾಲಿಕೆ ಯಾವ ಕ್ರಮ ಕೈಗೊಂಡಿದೆ ಎಂದು ಪರಿಶೀಲನೆ ನಡೆಸಲಾಗುವುದು. ಗಣಿ ಭೂ ವಿಜ್ಞಾನ ಇಲಾಖೆ ಮಣ್ಣು ಅಗೆಯಲು ಅವಕಾಶ ಏಕೆ ನೀಡಿದೆ ಎಂದು ವರದಿ ಕೇಳುತ್ತೇನೆ ಎಂದರು.
ಬಜ್ಪೆಯ ಕರಂಬಾರ್ ಬಳಿ ಮನೆ ಕುಸಿತ: ಮಕ್ಕಳಿಗೆ ಕಾದಿದೆ ಅಪಾಯ
ಕರಂಬಾರ್ ಸರ್ಕಾರಿ ಶಾಲೆಯ ಹಿಂದೆ ನೀರಿನ ರಭಸಕ್ಕೆ ಸುಮಾರು ನಾಲ್ಕೈದು ಮನೆಗಳ ಹಿಂಬದಿಯ ಮಣ್ಣು ಕುಸಿದಿದ್ದು, ಮತ್ತು ಸುಮಾರು 300 ವಿಧ್ಯಾರ್ಥಿ ಗಳು ವ್ಯಾಸಂಗ ಮಾಡುತ್ತಿರುವ ಶಾಲಾ ಕಟ್ಟಡ ಆಪತ್ತಿನಲ್ಲಿದೆ. ಇದನ್ನು ಸರಿ ಪಡಿಸಲು ಬಜ್ಪೆ ಪಟ್ಟಣ ಪಂಚಾಯತ್ ಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದ್ದಾರೆ .ಪರಿಸ್ಥಿತಿ ತುರ್ತು ಇದ್ದರೂ ಅದನ್ನು ಸರಿಪಡಿಸಲು ಪಟ್ಟಣ ಪಂಚಾಯತ್ ಮೀನಮೇಷ ಎಣಿಸುತ್ತಿರುವುದರ ಬಗ್ಗೆ ಬೇಟಿ ನೀಡಿದ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಕೂಡಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಇದಕ್ಕೆ ಅಧಿಕಾರಿಗಳು,ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.
ಕಾಪು ತಾಲ್ಲೂಕಿನಲ್ಲಿ ನೆರೆ: ತಹಶಿಲ್ದಾರ್ ಪ್ರತಿಭಾ ಭೇಟಿ
ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ನೆರೆ ಉಂಟಾಗಿ ಕಾಪು ತಾಲ್ಲೂಕಿನಲ್ಲಿ ಹಲವೆಡೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಸುರಿಯುವ ಮಳೆಯನ್ನೂ ಲೆಕ್ಕಿಸದೆ ತಾವೇ ಸ್ವತಃ ಫೀಲ್ಡಿಗಳಿದು ನೆರೆ ಪ್ರದೇಶಕ್ಕೆ ಧಾವಿಸಿ ಬೋಟ್ ಮೂಲಕ ನೆರೆಗೆ ಸಿಲುಕಿದವರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಿಗಿದ ತಹಶಿಲ್ದಾರ್ ಪ್ರತಿಭಾ ಸಂತ್ರಸ್ತರ ಮನ ಒಲಿಸಿ, ಕರೆತಂದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿಯೂ ಯಶಸ್ವಿಯಾದರು.ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಅವರ ಮನೆಯ 9 ಮಂದಿ ಸದಸ್ಯರನ್ನು ತಹಶೀಲ್ದಾರ್ ಡಾ. ಪ್ರತಿಭಾ ಆರ್. ನೇತೃತ್ವದಲ್ಲಿ ರಕ್ಷಣೆ ಮಾಡಲಾಯಿತು. ಈ ಸಂದರ್ಭ ಕಂದಾಯ ಪರಿವೀಕ್ಷಕ ಇಜ್ಜಾರ್ ಸಾಬಿರ್, ಗ್ರಾ.ಆ. ಅಧಿಕಾರಿ ಪ್ರದೀಪ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಶಶಿಧರ ವಾಗೈ, ಗ್ರಾಪಂ ಸದಸ್ಯರು ಸಹಕರಿಸಿದರು.
ಪುತ್ತೂರು: ಬೆಳ್ಳಿಪ್ಪಾಡಿಯ ಕುಂಡಾಪು ಬಳಿ ರಸ್ತೆಗೆ ದರೆ ಕುಸಿತದ ಭೀತಿ!
ಪುತ್ತೂರು ಬೆಳ್ಳಿಪ್ಪಾಡಿ ಒಳ ರಸ್ತೆಯ ಕುಂಡಾಪು ಬಳಿ ರಸ್ತೆಯ ದರೆಯು ಕುಸಿತದ ಭೀತಿಯಲ್ಲಿದೆ. ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ರಸ್ತೆಯ ಅಂಚಿನಲ್ಲಿ ಸ್ವಲ್ಪ ಮಟ್ಟದ ಮಣ್ಣು ಕುಸಿದು ನಿಂತಿದೆ.ಒಂದು ವೇಳೆ ಸಂಪೂರ್ಣ ಕುಸಿತವಾದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಇದರ ಮೇಲ್ಗಡೆ 2 ಮನೆಗಳು ಇದೆ.
ಬೆಳ್ತಂಗಡಿ: ವಿವಿಧೆಡೆ ಭೂ ಕುಸಿತ; ಕೊಚ್ಚಿ ಹೋದ ಸೇತುವೆ!
ಬೆಳ್ತಂಗಡಿ: ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ
ವಿವಿಧೆಡೆ ಹಲವು ಅನಾಹುತಗಳು ಸಂಭವಿಸಿದೆ. ಬುಧವಾರ- ಗುರುವಾರ ಸುರಿದ ಭಾರೀ ಮಳೆಗೆ ಬೆಳ್ತಂಗಡಿಯಾದ್ಯಂತ ಸಾಕಷ್ಟು ಅನಾಹುತಗಳು ಸಂಭವಿಸಿವೆ.
ಭಾರೀ ಮಳೆಯಿಂದಾಗಿ ವೇಣೂರು-ನಾರಾವಿ ಪರಿಸರದ ವಿವಿಧೆಡೆ ಸೇತುವೆ ಮೇಲೆ ನೀರು ಹರಿದಿದ್ದು ರಸ್ತೆಯಲ್ಲೇ ನೀರು ಹರಿದು ಈ ಭಾಗದಲ್ಲಿ ಜನರು ಪರದಾಡಿದರು. ವೇಣೂರು ಆರಂಬೋಡಿ ಬಳಿಯ ಅಂಗರ ಕರಿಯ ಸೇತುವೆ, ಮರೋಡಿಯ ಪಲಾಗೋಳಿ ಸೇತುವೆ ಮುಳುಗಡೆಯಾಗಿ ಹಾನಿಯಾಗಿದೆ.
ಮಾಲಾಡಿ ಸೊಣಂದೂರು ಗ್ರಾಮದ ಸಬರಬೈಲು-ಪಡಂಗಡಿ ಸಂಪರ್ಕ ಕಲ್ಪಿಸುವ ರಸ್ತೆಯ ಮೊದಲೆ ಎಂಬಲ್ಲಿ ಕಿರು ಸೇತುವೆ ಕುಸಿದು ಸಂಪರ್ಕ ಕಡಿತವಾಗಿದೆ. ಮರೋಡಿ ಗ್ರಾಮದ ದೇರಾಜೆ ಬೆಟ್ಟಕ್ಕೆ ಸಂಪರ್ಕಿಸುವ ರಸ್ತೆ ಕುಸಿದಿದೆ. ಕುದೊಟ್ಟು ಬಳಿ ಗುಡ್ಡ ಕುಸಿದು ಅಳದಂಗಡಿ ರಸ್ತೆ ಬ೦ದ್ ಆಗಿದೆ. ಗುರುವಾಯನಕೆರೆ ಬ೦ಟರ ಭವನದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲೇ ನೀರು ನಿಂತು ಪ್ರಯಾಣಕ್ಕೆ ಅಡಚಣೆಯಾಗಿತ್ತು. ಪಕ್ಕದ ಅಡಿಕೆ ತೋಟ ಜಲಾವೃತಗೊಂಡಿತ್ತು. ಹೀಗೆ ತಾಲೂಕಿನ ವಿವಿಧೆಡೆ ಸಾಕಷ್ಟು ಮಳೆ ಹಾನಿಯಾಗಿದೆ.