ಕರಾವಳಿ ನ್ಯೂಸ್
– ಆರಂತೋಡು: ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಪುತ್ತೂರು: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ!
– ಕಾರ್ಕಳ: ಮಾನಸಿಕ ಖಿನ್ನತೆಯಿಂದ ಅತಿಥಿ ಶಿಕ್ಷಕಿ ಆತ್ಮಹತ್ಯೆ
– ಕಾವೂರು: ಇಬ್ಬರು ದನಗಳ್ಳರು ಅರೆಸ್ಟ್
NAMMUR EXPRESS NEWS
ಅರಂತೋಡು: ಆಲೆಟ್ಟಿ ಗ್ರಾಮದ ಕಲ್ಲೆಂಬಿಯಲ್ಲಿ ಕಾನೂನು ವಿದ್ಯಾರ್ಥಿಯೋರ್ವ ನ. 7ರಂದು ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಲ್ಲೆಂಬಿ ಸಾನದ ಮನೆಯ ರಾಘವ ಬೆಳ್ಳಪ್ಪಾಡ ಅವರ ಪುತ್ರ ಮಿಥುನ್ ರಾಜ್ (26) ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ಸುಳ್ಯಕ್ಕೆ ಮದುವೆಗೆಂದು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯುವಕ ಸುಳ್ಯದ ಖಾಸಗಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.
ಪುತ್ತೂರು: ಲಕ್ಕಿ ಡ್ರಾ ನಂಬಿ ಹಣ ಕಳೆದುಕೊಂಡ ಕೂಲಿ ಕಾರ್ಮಿಕ!!
ಪುತ್ತೂರು: ಲಕ್ಕಿ ಡ್ರಾ ಎಂಬ ಮಾತು ನಂಬಿ ಪುಣಚದ ಕೂಲಿ ಕಾರ್ಮಿಕರೋರ್ವರು ಹಣ ಕಳೆದುಕೊಂಡ ಘಟನೆ ನಡೆದಿದೆ.
ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾದಲ್ಲಿ ಆಯ್ಕೆಯಾಗಿದ್ದು, ನಿಮಗೆ ಮೊಬೈಲ್ ಬಹುಮಾನ ಇದೆ. ವಿಳಾಸ ಕಳುಹಿಸಿದರೆ ಮೊಬೈಲ್ ತಲುಪಿಸುತ್ತೇವೆ ಎಂದು ಅಪರಿಚಿತ ವ್ಯಕ್ತಿಯೋರ್ವ ದೂರವಾಣಿ ಮೂಲಕ ತಿಳಿಸಿದ್ದ. ಇದಕ್ಕೆ ಕೂಲಿ ಕಾರ್ಮಿಕ ನನಗೆ ಮೊಬೈಲ್ ಬೇಡ ಎಂದು ಹೇಳಿ ಕರೆ ಕಟ್ ಮಾಡಿದ್ದರು. ಇದಾದ ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಕೂಲಿ ಕಾರ್ಮಿಕರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದ. ಮರುದಿನ ಕರೆ ಮಾಡಿದ ಆತ ನೀವು ಹೇಳಿದ ವಿಳಾಸಕ್ಕೆ ಮೊಬೈಲ್ ಕಳುಹಿಸಿದ್ದು, ಅಂಚೆಯಿಂದ ನೀವು ಪಡೆದುಕೊಳ್ಳಬೇಕಾದರೆ 1,600 ರೂ. ಪಾವತಿಸುವಂತೆ ಆತ ಹೇಳಿದ್ದ. ಅದರಂತೆ ಹಣ ಪಾವತಿಸಿ ಪಾರ್ಸೆಲ್ ಪಡೆದುಕೊಂಡಾಗ ಅದರಲ್ಲಿ ಹಾಳಾದ ಮೊಬೈಲ್ವೊಂದರ ಬಿಡಿಭಾಗ ಮಾತ್ರ ಇತ್ತು. ಅನಂತರ ಅವರಿಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ.
ಕಾರ್ಕಳ: ಮಾನಸಿಕ ಖಿನ್ನತೆಯಿಂದ ಅತಿಥಿ ಶಿಕ್ಷಕಿ ಆತ್ಮಹತ್ಯೆ
ಕಾರ್ಕಳ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅತಿಥಿ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.6ರಂದು ಈದು ಗ್ರಾಮದಲ್ಲಿ ಸಂಭವಿಸಿದೆ. ಮೃತ ಮಹಿಳೆ ಮೂಡಬಿದ್ರೆ ಮೂಲದ ಈದು ಗ್ರಾಮದ ನಿವಾಸಿ ರಾಜೇಶ್ ಅವರ ಪತ್ನಿ ಪ್ರಸನ್ನಾ(29) ಎಂದು ಗುರುತಿಸಲಾಗಿದೆ. ಇವರು ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ 10 ತಿಂಗಳ ಹೆಣ್ಣು ಮಗುವಿದ್ದು, ರಾಜೇಶ್ ಅವರು ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಕಷ್ಟಪಟ್ಟು ಓದಿದ್ದರೂ ಬೇಗನೇ ಮಗು ಆಗಿರುವ ಕಾರಣದಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಪ್ರಸನ್ನಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಮನೆಯ ಡೈನಿಂಗ್ ಹಾಲ್ನಿಂದ ಮಹಡಿಗೆ ಹೋಗುವ ಮೆಟ್ಟಿಲಿನ ಸ್ಟೀಲ್ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಾವೂರು: ಇಬ್ಬರು ದನಗಳ್ಳರು ಅರೆಸ್ಟ್
ಕಾವೂರು: ದನ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದ ಇಬ್ಬರು ಕುಖ್ಯಾತ ದನಗಳ್ಳರನ್ನು ಕಾವೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರು ನಿವಾಸಿಗಳಾದ ಪೈಜಲ್ ಪೈಜಲ್ ಕೊಂಚಾರ್, ಸುಹೈಬ್ ಅಕ್ತರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ರಿಟ್ಜ್ ಕಾರು ಹಾಗೂ ಒಂದು ಸ್ಕೂಟರ್ ನ್ನು ವಶಕ್ಕೆ ಪಡೆಯಲಾಗಿದ್ದು. .ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಪೈಜಲ್ ಪೈಜಲ್ ಕೊಂಚಾರ್ ಬಜ್ಜೆ ಠಾಣೆಯಲ್ಲಿ 01. ಶಿವಮೊಗ್ಗ ಜಿಲ್ಲೆಯ ಸಾಗರ ಟೌನ್ ಪೊಲೀಸ್ ಠಾಣೆಯಲ್ಲಿಯು 02 ಪ್ರಕರಣಗಳಲ್ಲಿ ಸಹ ದನ ಕಳ್ಳತನದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡುಬಂದಿರುತ್ತದೆ. ಈ ಹಿಂದೆ ಪೈಜಲ್ ಪೈಜಲ್ ಕೊಂಚಾರ್ ಎಂಬುವನ ಮೇಲೆ ಒಟ್ಟು 12 ದನ ಕಳ್ಳತನ ಪ್ರಕರಣ ದಾಖಲಾಗಿದ್ದು ಅದರಲ್ಲಿ ಬಜೆ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು. ಉಡುಪಿಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ 01 ಪ್ರಕರಣಗಳು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ದಾಖಲಾಗಿದೆ.