ಕರಾವಳಿ ನ್ಯೂಸ್
– ಬೈಂದೂರು: ಸ್ಕೂಟಿ, ಮಣ್ಣು ತುಂಬಿದ ಲಾರಿ ಡಿಕ್ಕಿ ಮಣ್ಣಿನಡಿ ಸಿಲುಕಿದ ಮಹಿಳೆ!
– ಪುತ್ತೂರು: ಕೋಳಿ ಅಂಕಕ್ಕೆ ಖಾಕಿ ರೇಡ್ : ಐವರು ಅಂದರ್
– ಕುಂದಾಪುರ: ದೋಣಿ ಮಗುಚಿ ಮೀನುಗಾರ ಸಾವು
ಬೈಂದೂರು: ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆಗೆ ಮಣ್ಣು ತುಂಬಿದ ಲಾರಿ ಡಿಕ್ಕಿ ಹೊಡೆದು, ಲಾರಿ ಮಗುಚಿ ಬಿದ್ದು ಮಹಿಳೆ ಮಣ್ಣಿನಡಿ ಸಿಲುಕಿ ಅದೃಷ್ಟವಶಾತ್ ಪಾರಾದ ಘಟನೆ ತಾಲೂಕಿನ ನಾಗೂರು ಉಪ್ರಳ್ಳಿಯಲ್ಲಿ ಸಂಭವಿಸಿದೆ.
ಮಣ್ಣಿನಡಿ ಸಿಲುಕಿದ ಮಹಿಳೆ ಉಪ್ರಳ್ಳಿಯ ಆರತಿ ಶೆಟ್ಟಿ ಎಂದು ತಿಳಿದು ಬಂದಿದೆ.
ಮಣ್ಣು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದು ಪಲ್ಟಿಯಾಗಿ ಮಗುಚಿ ಬಿದ್ದಿದೆ. ಲಾರಿಯಲ್ಲಿದ್ದ ಮಣ್ಣು ಸ್ಕೂಟರಲ್ಲಿದ್ದ ಮಹಿಳೆ ಮೇಲೆ ಬಿದ್ದು ಮಣ್ಣಿನ ಅಡಿಯಲ್ಲಿ ಮಹಿಳೆ ಸಿಲುಕಿ ಕೊಂಡ ಸಂದರ್ಭ ಅಲ್ಲೇ ಸ್ಥಳದಲ್ಲಿ ಇದ್ದ ಸಮಾಜ ಸೇವಕ, ಆಪತ್ಬಾಂಧವ ಕೋಡಿ ಅಶೋಕ ಪೂಜಾರಿ ಅವರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
– ಪುತ್ತೂರು: ಕೋಳಿ ಅಂಕಕ್ಕೆ ಖಾಕಿ ರೇಡ್ : ಐವರು ಅಂದರ್
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಳಮೊಗ್ರು ಗ್ರಾಮದ ಕುಟಿನೋಪಿನಡ್ಕ ಎಂಬಲ್ಲಿ ಸರಕಾರಿ ಗುಡ್ಡ ಪ್ರದೇಶದಲ್ಲಿ ಕೋಳಿ ಅಂಕ ಜೂಜು ಅಡುತ್ತಿರುವ ಮಾಹಿತಿ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿ ಎಸ್ ಐ ಜಂಬೂರಾಜ್ ಮಹಾಜನ್ ರವರ ನೇತೃತ್ವದಲ್ಲಿ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ. ಇತರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜು ಆಡುತ್ತಿರುವುದು ಪತ್ತೆಯಾಗಿದ್ದು, ಆರೋಪಿಗಳಿಂದ ಒಟ್ಟು 7710 ರೂಪಾಯಿ ನಗದು, 5 ಕೋಳಿಗಳು ಮತ್ತು ಕೋಳಿ ಕಾಲಿಗೆ ಕಟ್ಟಲು ಬಳಸಿದ 5 ಬಾಳುಕತ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಪೊಲೀಸರು ವಿಚಾರಣೆ ಕಾರ್ಯ ನಡೆಸಿದ್ದಾರೆ.
– ಕುಂದಾಪುರ: ದೋಣಿ ಮಗುಚಿ ಮೀನುಗಾರ ಸಾವು
ಕುಂದಾಪುರ: ಕೋಟೇಶ್ವರ ಸಮೀಪ ಬೀಜಾಡಿ ಎಂಬಲ್ಲಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ದೋಣಿ ಮಗುಚಿ ಮೀನುಗಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಬೀಜಾಡಿ ಗ್ರಾಮದ ಸಂಜೀವ(58) ಎಂದು ಗುರುತಿಸಲಾಗಿದೆ. ಅ. 31ರಂದು ಬೆಳಿಗ್ಗೆ ಬೀಜಾಡಿ ಗ್ರಾಮದ ಚಾತ್ರಬೆಟ್ಟು ಎಂಬಲ್ಲಿ ಸಮುದ್ರದಲ್ಲಿ ಮಿನಿ-ಕೈರಂಪಣಿ ದೊಣಿಯಲ್ಲಿ ಮೀನುಗಾರಿಕೆ ಮಾಡುತ್ತಿರುವಾಗ ಸಮುದ್ರದ ನೀರಿನ ರಭಸಕ್ಕೆ ದೊಣಿ ಮಗುಚಿ ಮೀನುಗಾರಿಕೆ ಮಾಡುತ್ತಿದ್ದ ಸಂಜೀವ ಅವರು ಸಮುದ್ರದ ನೀರಿಗೆ ಬಿದ್ದು ಮುಳುಗಿದ್ದು ಅವರನ್ನು ಜೊತೆಯಲ್ಲಿರುವವರು ಮೇಲಕ್ಕೆ ಎತ್ತಿ ಕೋಟೇಶ್ವರ ಎನ್ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿದಾಗ ಸಂಜೀವ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ