ಕರಾವಳಿ ನ್ಯೂಸ್
* ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ!!
* 61ರ ವಿಕಲ ಚೇತನ,ಯುವತಿ ಮೇಲೆ ಅತ್ಯಾಚಾರ ಪ್ರಕರಣ!
* ರಬ್ಬರ್ ಆ್ಯಸಿಡ್ ಸೇವಿಸಿ ವ್ಯಕ್ತಿ ಸಾವು!
NAMMUR EXPRESS NEWS
ಕೋಟ: 61ರ ಹರೆಯದ ವಿಕಲ ಚೇತನನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅ.12ರಂದು ಘಟನೆ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ.
ಕೋಟ ಪಡುಕೆರೆ ನಿವಾಸಿ, ವಿಕಲ ಚೇತನ ರಮಾನಂದ ಐತಾಳ್ (61) ಅತ್ಯಾಚಾರ ಎಸಗಿದ ಆರೋಪಿ. ಯುವತಿಯ ಸಂಬಂಧಿಯಾಗಿರುವ ಆರೋಪಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಅ.12ರಂದು ವಿಜಯ ದಶಮಿ ಹಿನ್ನೆಲೆಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಿಕ್ಷಾದಲ್ಲಿ ಮನೆಗೆ ಬಂದಿದ್ದ ರಮಾನಂದ ಸಂತ್ರಸ್ತೆಯಲ್ಲಿ ನೀರು ಕೇಳಿದ್ದು, ನೀರನ್ನು ನೀಡುವ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಆರೋಪಿ ವಿವಾಹಿತನಾಗಿದ್ದು ಆಗಾಗ್ಗೆ ಅಸಭ್ಯ ವರ್ತನೆ ತೋರುತ್ತಿದ್ದ. ಈ ಹಿಂದೆಯೂ ಎರಡು ಬಾರಿ ಯಾರೂ ಇಲ್ಲದ ಸಂದರ್ಭ ಇದೇ ರೀತಿ ಕೃತ್ಯ ಎಸಗಿದ್ದ ಎನ್ನಲಾಗಿದೆ. ಆದರೆ ಆತನ ಬೆದರಿಕೆಗೆ ಹೆದರಿ ಯುವತಿ ಸುಮ್ಮನಾಗಿದ್ದಳು.ನಂತರ ಧೈರ್ಯ ಮಾಡಿ ಆಕೆಯ ಫೋನಿನ ಮೂಲಕ ಪೊಲೀಸ್ ಎಂದು ಇದ್ದ 112 ದೂರವಾಣಿ ಸಂಖ್ಯೆಗೆ ಫೋನ್ ಮಾಡಿ ಅತ್ಯಾಚಾರ ನಡೆದ ಬಗ್ಗೆ ದೂರು ನೀಡಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ನವರಾತ್ರಿ ವೇಷಧಾರಿ ಸುಂದರ ನಾಯ್ಕ ನಿಗೂಢ ನಾಪತ್ತೆ!!
ವಿಟ್ಲ:ನವರಾತ್ರಿ ವೇಷಧಾರಿ ವಿಟ್ಲ ಕಸಬಾ ಗ್ರಾಮದ ಪಳಿಕೆ ಅನ್ನಮೂಲೆ ನಿವಾಸಿ ಸುಂದರ ನಾಯ್ಕ(55) ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಹಲವು ವರ್ಷಗಳಿಂದ ಪ್ರತೀ ವರ್ಷ ವೇಷ ಹಾಕುತ್ತಿದ್ದ ಸುಂದರ ನಾಯ್ಕ ಈ ಬಾರಿಯೂ ವೇಷ ಹಾಕಲು ತಯಾರಿ ನಡೆಸಿದ್ದರು. ಇದೇ ತಿಂಗಳ ಒಂದರಂದು ಪೊಲೀಸ್ ಠಾಣೆಗೆ ಹೋಗಿ ಅನುಮತಿ ಪಡೆಯುತ್ತೇನೆ ಎಂದು ಪತ್ನಿಯಲ್ಲಿ ಹೇಳಿ ಮನೆಯಿಂದ ಹೊರಟಿದ್ದ ಸುಂದರ ನಾಯ್ಕ ನವರಾತ್ರಿ ಹಬ್ಬ ಮುಗಿದರೂ ಮರಳಿ ಬಂದಿಲ್ಲ. ಆತಂಕಗೊಂಡ ಪತ್ನಿ ತನ್ನ ಸಂಬಂಧಿಕರಲ್ಲೆಲ್ಲಾ ವಿಚಾರಿಸಿದ್ದಾರೂ ಯಾವುದೇ ಮಾಹಿತಿ ಇಲ್ಲಿದ ಕಾರಣ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಬ್ಬರ್ ಆ್ಯಸಿಡ್ ಸೇವಿಸಿ ವ್ಯಕ್ತಿ ಸಾವು!
ಅರಂತೋಡು: ರಬ್ಬರ್ ಆ್ಯಸಿಡ್ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡು (70) ಅವರು ಅ. 13ರಂದು ಮೃತಪಟ್ಟ ಘಟನೆ ನಡೆದಿದೆ. ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್ ಆ್ಯಸಿಡ್ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ನಂತರ ಅವರು ಮೃತಪಟ್ಟಿದ್ದು,ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.