ಕರಾವಳಿ ನ್ಯೂಸ್
– ಭ್ರಷ್ಟಾಚಾರ ಆರೋಪ, ಎಡಿಎಂ ಆತ್ಮಹತ್ಯೆ
– ಖಾಸಗಿ ಬಸ್ ನಿರ್ವಾಹಕ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ!!
– ಉಡುಪಿ:ವಿದ್ಯುತ್ ಮೀಟರ್ಗೆ ಸಿಡಿಲು ಬಡಿದು ಮೂವರು ಗಾಯ!
– ಸುಳ್ಯ: ದ್ವಿಚಕ್ರ ವಾಹನಗಳ ಭೀಕರ ಅಪಘಾತ; ಸಹಕಾರಿ ಸಂಘದ ಉದ್ಯೋಗಿ ಮೃತ್ಯು!
NAMMUR EXPRESS NEWS
ಕಾಸರಗೋಡು: ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೀಳ್ಕೊಡುಗೆ ಸಮಾರಂಭದಲ್ಲಿ ಭ್ರಷ್ಟಾಚಾರ ಆರೋಪ ಹೊರಿಸಿದ ಬೆನ್ನಲ್ಲೇ ಕಣ್ಣೂರು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಡಿಎಂ) ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ಹಿಂದೆ ಎಡಿಎಂ ಆಗಿ ಸೇವೆ ಸಲ್ಲಿಸಿದ್ದು, ಈಗ ಕಣ್ಣೂರು ಜಿಲ್ಲೆಯ ಎಡಿಎಂ ಆಗಿ ಸೇವೆ ಸಲ್ಲಿಸುತ್ತಿದ್ದ ನವೀನ್ ಬಾಬು ಅವರ ಮೃತದೇಹ ಕಣ್ಣೂರು ಪಳ್ಳಿಕುನ್ನಿನಲ್ಲಿರುವ ಕ್ವಾಟ್ರಸ್ನಲ್ಲಿ ಅ. 15ರಂದು ಬೆಳಗ್ಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನವೀನ್ ಬಾಬು ಅವರಿಗೆ ಕಣ್ಣೂರಿನಿಂದ ತಮ್ಮ ಹುಟ್ಟೂರಾದ ಪತ್ತನಂತಿಟ್ಟಕ್ಕೆ ವರ್ಗಾವಣೆಯಾಗಿತ್ತು. ಈ ಮಧ್ಯೆ ಕಣ್ಣೂರು ಕಲೆಕ್ಟರೇಟ್ನಲ್ಲಿ ಅ. 14ರಂದು ಸಂಜೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಕಣ್ಣೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಪಿ. ದಿವ್ಯಾ ಅವರಿಗೆ ಆಹ್ವಾನ ನೀಡಿರಲಿಲ್ಲ. ಆದರೂ ಅವರು ಸಮಾರಂಭದಲ್ಲಿ ಭಾಗವಹಿಸಿ ಎಡಿಎಂ ನವೀನ್ ಬಾಬು ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಮಾತನಾಡಿದ್ದರು.ಇದರಿಂದ ಮನನೊಂದು ನವೀನ್ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
* ಖಾಸಗಿ ಬಸ್ ನಿರ್ವಾಹಕ ಕೊಲೆಗೈದ ಸ್ಥಿತಿಯಲ್ಲಿ ಪತ್ತೆ!!
ಮಂಗಳೂರು: ಸ್ಟೇಟ್ಬ್ಯಾಂಕ್’ನ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್ ನಿರ್ವಾಹಕರೊಬ್ಬರ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಮೃತರು ಖಾಸಗಿ ಬಸ್ ನಿರ್ವಾಹಕರಾಗಿದ್ದ ರಾಜೇಶ್ (30). ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಅಥವಾ ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿಡಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ವಿದ್ಯುತ್ ಮೀಟರ್ಗೆ ಸಿಡಿಲು ಬಡಿದು ಮೂವರು ಗಾಯ!
ಉಡುಪಿ: ಮನೆಯ ವಿದ್ಯುತ್ ಮೀಟರ್ಗೆ ಸಿಡಿಲು ಬಡಿದು ಮೂವರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ನೆಲ್ಲಿಗುಡ್ಡೆ ಮೊರಾರ್ಜಿ ವಸತಿ ಶಾಲೆಯ ಬಳಿ ನಡೆದಿದೆ.
ಗಾಯಗೊಂಡವರನ್ನು ಸುಬ್ರಹ್ಮಣ್ಯ (18), ಸುರೇಶ್ (28) ಹಾಗೂ ಆನಂದ (25) ಎಂದು ಗುರುತಿಸಲಾಗಿದೆ.
ಇವರು ಮೂವರು ಮನೆಯಂಗಳದಲ್ಲಿ ಕುಳಿತಿದ್ದು,ಈ ವೇಳೆ ಮನೆಯ ವಿದ್ಯುತ್ ಮೀಟರ್ಗೆ ಸಿಡಿಲು ಬಡಿದಿದೆ.ಇದರಿಂದ ಮೂವರು ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಮನೆಯ ಉಳಿದ ಸದಸ್ಯರು ಮನೆಯೊಳಗಿದ್ದ ಕಾರಣ ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ.
* ಸುಳ್ಯ: ದ್ವಿಚಕ್ರ ವಾಹನಗಳ ಭೀಕರ ಅಪಘಾತ; ಸಹಕಾರಿ ಸಂಘದ ಉದ್ಯೋಗಿ ಮೃತ್ಯು!
ಸುಳ್ಯ: ಸುಳ್ಯದ ಪೈಚಾರು-ಸೋಣಾಂಗೇರಿ ರಸ್ತೆಯ ಆರ್ತಾಜೆ ಎಂಬಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವಿನ ಅಪಘಾತದಲ್ಲಿ ಐವರ್ನಾಡು ಸಹಕಾರಿ ಸಂಘದ ಉದ್ಯೋಗಿ ಮೃತಪಟ್ಟ ಘಟನೆ ಸಂಭವಿಸಿದೆ. ಐವರ್ನಾಡು ಗ್ರಾಮದ ಪಾಲೆಪ್ಪಾಡಿ, ನಿವಾಸಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಲೆಕ್ಕಿಗ ಬೋಜಪ್ಪ (56) ಮೃತರು.ಸುಳ್ಯದಿಂದ ಎಲಿಮಲೆ ಕಡೆಗೆ ಹೋಗುತ್ತಿದ್ದ ಬುಲೆಟ್ ಹಾಗೂ ಐವರ್ನಾಡು ಸುಳ್ಯಕ್ಕೆ ಬರುತ್ತಿದ್ದ ಬೋಜಪ್ಪರ ಬೈಕ್ ಆರ್ತಾಜೆ ಎಂಬಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಬೋಜಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತರಾಗಿದ್ದಾರೆ. ಬುಲೆಟ್ ಬೈಕ್ ಸವಾರ ನೆಲ್ಲೂರು ಕೆಮ್ರಾಜೆ ಗ್ರಾಮದ ಮಂದ್ರಪ್ಪಾಡಿಯ ವಸಂತ ಮತ್ತು ಅರುಣ್ ಅವರಿಗೂ ಕೂಡ ಗಾಯಗಳಾಗಿದ್ದು, ಅವರು ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.