ಕರಾವಳಿ ನ್ಯೂಸ್
ಭೀಕರ ಗುಡ್ಡ ಕುಸಿತ: ಮತ್ತೋರ್ವ ಮಹಿಳೆ ಬಲಿ!
– ಅಕ್ಕಿ ರುಬ್ಬುವಾಗ ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು!
– ಸ್ಪ್ರಿಂಗ್ ತಯಾರಿಕಾ ಕಂಪೆನಿಯಲ್ಲಿ ಅವಘಡ: ಮಂಗಳೂರು ವ್ಯಕ್ತಿ ಸಾವು
– ಮಾದಕ ವಸ್ತು ಸೇವನೆ: ಮಂಗಳೂರಿನಲ್ಲಿ 11 ಮಂದಿ ಬಂಧನ
NAMMUR EXPRESS NEWS
ಕಾರವಾರ : ಅಂಕೋಲ ಸಮೀಪ ಶಿರೂರಿನಲ್ಲಿ ಒಂದು ವಾರದ ಹಿಂದೆ ಸಂಭವಿಸಿದ ಭೀಕರ ಗುಡ್ಡ ಕುಸಿತ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಓರ್ವ ಮಹಿಳೆಯ ಶವ ಸಮೀಪದ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದ್ದು, ಇದರೊಂದಿಗೆ ಇಷ್ಟರ ತನಕ 8 ಶವ ಸಿಕ್ಕಿದಂತಾಗಿದೆ. ಮಂಗಳವಾರ ಮುಂಜಾನೆ ವೇಳೆ ನದಿ ಸಂಗಮದ ಮಂಜುಗುಣಿ ಎಂಬಲ್ಲಿ ಮಹಿಳೆಯ ಶವ ಸಿಕ್ಕಿದೆ. ಗುಡ್ಡ ಕುಸಿದಾಗ ನದಿಯ ಇನ್ನೊಂದು ದಡದಲ್ಲಿರುವ ಉಳುವರೆ ಗ್ರಾಮದಲ್ಲೂ ಸಾಕಷ್ಟು ಅನಾಹುತ ಸಂಭವಿಸಿತ್ತು. ಈ ಸಂದರ್ಭ ಸಣ್ಣು ಎಂಬ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಅವರ ಮನೆಯವರು ದೂರು ನೀಡಿದ್ದರು. ಆದರೆ ಇಂದು ಪತ್ತೆಯಾದ ಶವ ಸಣ್ಣು ಅವರದ್ದೇ ಎನ್ನುವುದು ದೃಢವಾಗಿಲ್ಲ. ಹೆಣ ಕೊಳೆತು ಹೋಗಿದ್ದು, ಕೈಯಲ್ಲಿರುವ ಬಳೆ ಹಾಗೂ ಧರಿಸಿರುವ ಬಟ್ಟೆಯ ಸಹಾಯದಿಂದ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ.ಈ ಮಹಾದುರಂತದಲ್ಲಿ ಹಲವು ಮಂದಿ ನಾಪತ್ತೆಯಾಗಿರುವ ಶಂಕೆ ಇದೆ. ಕೇರಳದ ಲಾರಿ ಚಾಲಕ ಅರ್ಜುನನ್ ಎಂಬವರು ಲಾರಿ ಸಮೇತ ನಾಪತ್ತೆಯಾಗಿದ್ದು, ಅವರ ಕುರುಹು ಇನ್ನೂ ಕೂಡ ಪತ್ತೆಯಾಗದಿರುವುದು ಕಳವಳ ಮೂಡಿಸಿದೆ.
ಅಕ್ಕಿ ರುಬ್ಬುವಾಗ ಗ್ರೈಂಡರ್ ಗೆ ಶಾಲು ಸಿಲುಕಿ ಮಹಿಳೆ ಮೃತ್ಯು!
ಕಾಸರಗೋಡು : ಕೆಲಸ ಮಾಡುತ್ತಿದ್ದಾಗ ಗ್ರೈಂಡರ್ ಗೆ ತಾನು ಹೊದ್ದಿದ್ದ ಶಾಲು ಸಿಲುಕಿ ಗೃಹಿಣಿಯೊಬ್ಬರು ಮೃತಪಟ್ಟ ದಾರುಣ ಘಟನೆ ಕುಂಬಳೆ ಸಮೀಪದ ಪೆರುವಾಡ್ ನಲ್ಲಿ ಸೋಮವಾರ ಸಂಜೆ ನಡೆದಿದೆ.ಮೃತರನ್ನು ಪೆರುವಾಡ್ ಕೆ .ಕೆ ನಗರದ ಇಸ್ಮಾಯಿಲ್ ರವರ ಪತ್ನಿ ನಫೀಸಾ ( ೫೨) ಮೃತಪಟ್ಟವರು. ಸೋಮವಾರ ಮಧ್ಯಾಹ್ನ ೨ ಗಂಟೆ ವೇಳೆಗೆ ಗ್ರೈಂಡರ್ ನಲ್ಲಿ ಅಕ್ಕಿ ಅರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಶಬ್ದ ಕೇಳಿ ಧಾವಿಸಿ ಬಂದ ಪತಿ ಇಸ್ಮಾಯಿಲ್ ಹಾಗೂ ಸ್ಥಳೀಯರು ಶಾಲನ್ನು ತುಂಡರಿಸಿದ್ದಾರೆ. ಬಳಿಕ ಕೂಡಲೇ ಕುಂಬಳೆ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ ಹಾಗೂ ಒಡಹುಟ್ಟಿದವರನ್ನು ಅಗಲಿದ್ದಾರೆ.
ಸ್ಪ್ರಿಂಗ್ ತಯಾರಿಕಾ ಕಂಪೆನಿಯಲ್ಲಿ ಅವಘಡ: ಮಂಗಳೂರು ವ್ಯಕ್ತಿ ಸಾವು
ಮಂಗಳೂರು ನಗರದ ಮರೋಳಿಯಲ್ಲಿರುವ ಸ್ಪ್ರಿಂಗ್ ಮತ್ತು ಇತರೆ ವಸ್ತುಗಳನ್ನು ತಯಾರಿಸುವ ಖಾಸಗಿ ಕಂಪೆನಿಯಲ್ಲಿ ನಡೆದ ಅವಘದಲ್ಲಿ ಗಾಯಗೊಂಡಿದ್ದ ಕಂಖನಾಡಿ ಗರೋಡಿ ಬಳಿಯ ನಿವಾಸಿ ಪ್ರದೀಪ್ ಗರೋಡಿ(52) ಮೃತಪಟ್ಟಿದ್ದಾರೆ. ಜು. 18ರಂದು ಪ್ರದೀಪ್ ಅವರು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಮಾದಕ ವಸ್ತು ಸೇವನೆ: ಮಂಗಳೂರಿನಲ್ಲಿ 11 ಮಂದಿ ಬಂಧನ
ಮಂಗಳೂರು ನಗರದ ವಿವಿಧೆಡೆ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದ ಆರೋಪದಡಿ 11 ಮಂದಿಯನ್ನು ಪೊಲೀಸರು ಬಂಧಿಸಿದಾರೆ. ಮುಲ್ಲಕಾಡಿನ ಮುಲ್ಲರ್ ಫಾರ್ಮ್ನ ಎದುರು ಕೇರಳದ ಹರ್ಷಿನ್(24), ಸಿನಾನ್ ಎಂಬಿ(21), ಪ್ರಯಾಗ್ ಎಂ(19), ಅನುರಾಗ್(19), ಅರುಣ್ ಜೆ(19), ಹರಿಕೃಷ್ಣನ್ ಎಂ(20) ಎಂಬವರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಕಣ್ಣೂರು ಜಂಕ್ಷನ್ ಬಳಿಯ ಮೈದಾನದ ಬಳಿ ಇಬ್ರಾಹಿಂ ಸುಫೈದ್ನನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಜಪ್ಪು ಕುಡ್ಪಾಡಿ ರೈಲ್ವೆ ಓವರ್ ಬ್ರಿಡ್ಜ್ನ ಕೆಳಗಡೆ ಜೆಪ್ಪು ಬಪ್ಪಾಲ್ನ ಸೌರಾಜ್(22) ಮತ್ತು ರಾಘವೇಂದ್ರ(21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.