ಕರಾವಳಿ ನ್ಯೂಸ್
– ಮಂಗಳೂರು: ಹೂಡಿಕೆ ಆಮಿಷ; ಲಕ್ಷಾಂತರ ವರ್ಗಾಯಿಸಿಕೊಂಡು ವಂಚನೆ!
– ಸುರತ್ಕಲ್: ಇಲಿ ಜ್ವರ ವ್ಯಕ್ತಿ ಮೃತ್ಯು!
– ಮಂಗಳೂರು: ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ
NAMMUR EXPRESS NEWS
ಮಂಗಳೂರು: ಜೆ.ಪಿ. ಮಾರ್ಗನ್ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ಭಾರತದಲ್ಲಿ ಹೊಸದಾಗಿ ಕಂಪೆನಿಯನ್ನು ಪ್ರಾರಂಭಿಸುತ್ತಿದ್ದು, ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ ಲಕ್ಷಾಂತರ ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಾ ಶರ್ಮಾ ಎಂಬಾಕೆ ಜೆ.ಪಿ. ಮಾರ್ಗನ್ ಎಂಬ ಕಂಪೆನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ನಂಬರ್ಗಳಿಂದ ಕರೆ ಮಾಡಿ ಸಂಪರ್ಕಿಸಿದ್ದಾರೆ. ಕಂಪೆನಿ ಪ್ರಾರಂಭಿಸುವ ಬಗ್ಗೆ ತಿಳಿಸಿ ಲಿಂಕ್ ಕಳುಹಿಸಿ, 20 ಲಕ್ಷ ರೂ. ವರ್ಗಾವಣೆ ಮಾಡುವಂತೆ ತಿಳಿಸಿದ್ದಳು. ಅದರಂತೆ ಅ. 14ರಂದು ದೂರುದಾರರು 20 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, 1 ಷೇರಿಗೆ 240 ರೂ.ನಂತೆ 1 ಸಾವಿರ ಷೇರುಗಳನ್ನು ಖರೀದಿಸಿದ್ದಾರೆ.
ಅ. 15ರಂದು ಇನ್ನೊಂದು ಸಂಸ್ಥೆಯ ಷೇರುಗಳನ್ನು ಖರೀದಿಸುವಂತೆ ತಿಳಿಸಿದ್ದು, ಅದರಂತೆ 250.95 ರೂ.ನಂತೆ 7,900 ಷೇರುಗಳನ್ನು ಖರೀದಿಸಿದ್ದಾರೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಿದ್ಡ್ರಾ ಮಾಡುವಂತೆ ತಿಳಿಸಿದ್ದು, 1,500 ರೂ. ಹಿಂಪಡೆದಿದ್ದಾರೆ. ಆದರೆ ಆ ಹಣವು ಬೇರೊಂದು ಖಾತೆಯಿಂದ ಬಂದಿದ್ದು, ಇದರಿಂದ ಸಂಶಯ ಬಂದು ನೀತಾ ಶರ್ಮಾ ಅವರಿಗೆ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ.
ಹೂಡಿಕೆ ಮಾಡಿದ ಎಲ್ಲ ಹಣವನ್ನು ವಾಪಸ್ ನೀಡುವಂತೆ ಕೇಳಿದಾಗ ನೀತಾ ಶರ್ಮಾ 4 ಲಕ್ಷ ರೂ. ಹೆಚ್ಚುವರಿಯಾಗಿ ಕೇಳಿದ್ದಾರೆ. ಆಗ ತಾನು ಮೋಸ ಹೋಗಿರುವುದು ಅರಿವಾಗಿದೆ. ಹೂಡಿಕೆ ಮಾಡುವಂತೆ ಹೇಳಿ ಮೋಸ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ.
– ಸುರತ್ಕಲ್: ಇಲಿ ಜ್ವರ ವ್ಯಕ್ತಿ ಮೃತ್ಯು!
ಸುರತ್ಕಲ್: ಜ್ವರದ ಕಾರಣ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟ ಘಟನೆ ಅ.20 ಭಾನುವಾರ ನಡೆದಿದೆ. ಸುರತ್ಕಲ್ ಕಡಂಬೋಡಿ ನಿವಾಸಿ ಕೃಷ್ಣ (55) ಮೃತಪಟ್ಟವರು. ಇವರ ಸಾವಿಗೆ ಇಲಿ ಜ್ವರ ಕಾರಣ ಎಂದು ಶಂಕಿಸಲಾಗಿದೆ. ಕೃಷ್ಣ ಅವರು ಸುರತ್ಕಲ್ನಲ್ಲಿ ರಿಕ್ಷಾ ಚಾಲಕರಾಗಿಯೂ ಕೆಲಸ ಮಾಡಿದ್ದು,ಸದ್ಯ ಟೂರಿಸ್ಟ್ ಕಾರು ಚಲಾಯಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
– ಮಂಗಳೂರು: ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ
ಮಂಗಳೂರು : ಭಾರತದ ವಿವಿಧ ಭಾಗಗಳ ಏರ್ ಇಂಡಿಯಾ ವಿಮಾನಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಪಟ್ಟಿಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನವೂ ಸೇರಿದೆ.
ಸ್ಕಿಜೋಫ್ರೇನಿಯಾ 111 ಎಂಬ ಖಾತೆಯಿಂದ ಟ್ವಿಟರ್ನಲ್ಲಿ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಭಾರತದ ವಿವಿಧ ಭಾಗಗಳಲ್ಲಿ ಆರು ಏರ್ ಇಂಡಿಯಾ ವಿಮಾನಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಮಂಗಳೂರಿನ ಏರ್ ಇಂಡಿಯಾ ಸಿಬ್ಬಂದಿ ಈ ಸಂದೇಶವನ್ನು ಗಮನಿಸಿ ತಕ್ಷಣ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಗಳೂರಿನಿಂದ ಹೊರಟಿದ್ದ ವಿಮಾನ ಸುರಕ್ಷಿತವಾಗಿ ದುಬೈಗೆ ಬಂದಿಳಿದಿದ್ದು, ಈ ವೇಳೆ ಉಗ್ರರು ಬಾಂಬ್ ಬೆದರಿಕೆ ಹಾಕಿದ್ದರು. ಇನ್ನು ವಿಮಾನದಲ್ಲಿ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.