ಕರಾವಳಿ ಜನರ ಬಹು ಬೇಡಿಕೆಯ ರೈಲು ಬರಲಿದೆ!
– ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ವಂದೇ ಭಾರತ್ ರೈಲು ಜೂನ್ ನಲ್ಲಿ ಸಂಚಾರ ಸಾಧ್ಯತೆ
– ಮಂಗಳೂರಿನಿಂದ ಅಯೋಧ್ಯೆಗೆ ರೈಲು ಸೇವೆ?
NAMMUR EXPRESS NEWS
ಮಂಗಳೂರು: ಕರಾವಳಿ ಜನರ ಬಹು ಬೇಡಿಕೆ ಮಂಗಳೂರಿನಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಮುಂದಿನ ಜೂನ್ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಸಂಸದ ನಳಿನ್ , ರಾಜ್ಯ ರಾಜಧಾನಿ ಬೆಂಗಳೂರಿನಿಂದ -ಕರಾವಳಿಗೆ “ವಂದೇ ಭಾರತ್” ರೈಲು ಸೇವೆಯನ್ನು ವಿಸ್ತರಿಸಬೇಕೆಂಬುವುದು ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರಕಿ ಕಾಮಗಾರಿ ಆರಂಭವಾಗಿದೆ. ಈ ರೈಲು ಮಾರ್ಗದ ವಿದ್ಯುದೀಕರಣದ ಕೆಲಸ ನಡೆಯುತ್ತಿದ್ದು, ಶಿರಾಡಿಯಲ್ಲಿನ 22 ಕಿ.ಮೀ. ದೂರದ ಕಾಮಗಾರಿ ಮೇ ಅಂತ್ಯದೊಳಗೆ ಮುಗಿಯಲಿದೆ. ಹೀಗಾಗಿ, ಜೂನ್ನಿಂದ ಬಹು ನಿರೀಕ್ಷಿತ ರೈಲು ಸಂಚಾರ ಆರಂಭವಾಗಲಿದೆ ಎಂದು ಹೇಳಿದ್ದಾರೆ.
ಮಂಗಳೂರಿನಿಂದ ಅಯೋಧ್ಯೆಗೆ ರೈಲು ಆರಂಭಿಸುವ ಬೇಡಿಕೆ ಇದ್ದು ಈಗಾಗಲೇ ರೈಲು ಸಚಿವರಿಗೆ ಮನವಿ ಮಾಡಿದ್ದೇನೆ. ಇದಕ್ಕೂ ವೇಳಾಪಟ್ಟಿ ಸಿದ್ದವಾಗುತ್ತಿದ್ದು, ಶೀಘ್ರ ರೈಲು ಆರಂಭವಾಗಲಿದೆ. ಇದಲ್ಲದೇ ಅಯೋಧ್ಯೆಗೆ ಇಲ್ಲಿಂದ ವಿಮಾನ ಬೇಕು ಎನ್ನುವ ಬೇಡಿಕೆಯೂ ಇದೆ. ವಿಮಾನಯಾನ ಸಚಿವರಿಗೆ ಹಾಗೂ ಇಲಾಖೆ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದೆ. ವಯಾ ಬೆಂಗಳೂರು ಅಥವಾ ಮುಂಬಯಿ ಮೂಲಕ ವಿಮಾನ ಆರಂಭಿಸುವಂತೆ ಕೋರಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.