ಕರಾವಳಿಯ ಪ್ರೈಮ್ ನ್ಯೂಸ್…!
ಉಳಾಯಿಬೆಟ್ಟು ದರೋಡೆ: ಪೊಲೀಸರ ತನಿಖೆ ಚುರುಕು!
– ದುಡ್ಡು ತುಂಬಲು ಗೋಣಿಚೀಲ ತಂದಿದ್ದ ಆರೋಪಿಗಳು!
– ಕುಂದಾಪುರದಲ್ಲಿ ಹೊಳೆಗೆ ಬಿದ್ದು ವ್ಯಕ್ತಿ ಸಾವು!
– ಮಣಿಪಾಲ: ಪಿಎಚ್ಡಿ ವಿದ್ಯಾರ್ಥಿನಿ ನೇಣಿಗೆ ಶರಣು
NAMMUR EXPRESS NEWS
ಮಣಿಪಾಲ: ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಣಿಪಾಲದ ಎಂಐಟಿಯ ಪಿಎಚ್ಡಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮೃತ ಯುವತಿಯನ್ನು ಮಂಗಳೂರಿನ ಕೋಡಿಕಲ್ ಜೆಬಿ ಲೋಬೊ ರಸ್ತೆಯಲ್ಲಿರುವ ಬಸವ ಕುಮಾರ್ ಅವರ ಪುತ್ರಿ ವೈದೇಹಿ(26) ಎಂದು ಗುರುತಿಸಲಾಗಿದೆ. ಮಣಿಪಾಲದ ಎಂಐಟಿಯಲ್ಲಿ ಬಯೋ ಮೆಡಿಕಲ್ ವಿಭಾಗದಲ್ಲಿ ಪಿಎಚ್ಡಿ 3ನೇ ವರ್ಷದ ಪದವಿ ಓದುತ್ತಿದ್ದರು. ಅವರು ಎಂಐಟಿಯ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದರು. ವಿದ್ಯಾಭ್ಯಾಸದ ಒತ್ತಡದಿಂದ ಎರಡು ತಿಂಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ಜೂ.22ರಂದು ತಾನು ವಾಸವಿದ್ದ ಎಂಐಟಿ ಕ್ವಾರ್ಟಸ್ನ ಬೆಡ್ರೂಮ್ನಲ್ಲಿ ಫ್ಯಾನ್ಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದಲ್ಲಿ ಹೊಳೆಗೆ ಬಿದ್ದು ವ್ಯಕ್ತಿ ಸಾವು
ಬೆಂಗಳೂರಿನಿಂದ ಊರಿಗೆ ಹೊರಟ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕುಂದಾಪುರದ ಆನಗಳ್ಳಿ ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಡಾಕೇರಿ ಗ್ರಾಮದ ಸಾತುಬೆಟ್ಟು ನಿವಾಸಿ ರಾಜು ಬಿ.(48) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಜೂ.20ರಂದು ಊರಿಗೆ ಹೊರಟಿದ್ದರು. ಬಳಿಕ ಇವರು ನಾಪತ್ತೆಯಾಗಿದ್ದರು. ಆದರೆ, ಹುಡುಕಾಟ ನಡೆಸಬೇಕಾದರೆ ಜೂ.21ರಂದು ಮಧ್ಯಾಹ್ನದ ವೇಳೆ ಆನಗಳ್ಳಿ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ, ರಾಜು ಅವರು ಊರಿಗೆ ಬರಬೇಕಾದರೆ ಆನಗಳ್ಳಿ ಬಳಿ ಹೊಳೆಗೆ ಹೋಗಿದ್ದು, ಈ ವೇಳೆ ಕಾಲು ಜಾರಿ ನೀರಿನಲ್ಲಿಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಉಳಾಯಿಬೆಟ್ಟು ದರೋಡೆ: ಪೊಲೀಸರ ತನಿಖೆ ಚುರುಕು!
ಮಂಗಳೂರು: ಮಂಗಳೂರು ಹೊರ ವಲಯದ ಉಳಾಯಿಬೆಟ್ಟುವಿನಲ್ಲಿ ಪಿಡಬ್ಲ್ಯುಡಿ ಗುತ್ತಿಗೆದಾರರ ಪದ್ಮನಾಭ ಕೋಟ್ಯಾನ್ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ.
ಕಳೆದ ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ನುಗ್ಗಿದ್ದ ಸುಮಾರು 9 ಮಂದಿಯ ದರೋಡೆಕೋರರ ತಂಡವು ಪದ್ಮನಾಭ ಅವರಿಗೆ ಚಾಕುವಿನಿಂದ ಇರಿದು ಬೆದರಿಸಿತ್ತು. ಬಳಿಕ ಮನೆ ಮಂದಿಯನ್ನೆಲ್ಲ ಕಟ್ಟಿಯಾಗಿ ಸುಮಾರು 7 ಲಕ್ಷ ರೂ.ವಿಗೂ ಅಧಿಕ ಮೊತ್ತದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿತ್ತು. ಸದ್ಯ ದರೋಡೆಕೋರರ ಚಾಕು ಇರಿತದಿಂದ ಗಾಯಗೊಂಡಿರುವ ಪದ್ಮನಾಭ ಕೋಟ್ಯಾನ್ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿರುವ ಈ ದರೋಡೆ ಪ್ರಕರಣವನ್ನು ಭೇದಿಸುವುದಕ್ಕೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಮನೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಗಳನ್ನು ಪಡೆದುಕೊಂಡಿರುವ ಪೊಲೀಸರು ತನಿಖೆಯಲ್ಲಿ ಒಂದು ಹಂತದ ಪ್ರಗತಿ ಸಾಧಿಸಿರುವುದಾಗಿ ಮೂಲಗಳು ತಿಳಿಸಿವೆ. ಅಲ್ಲದೆ, ಆರೋಪಿಗಳು ಪ್ರತ್ಯೇಕ ವಾಹನದಲ್ಲಿ ಬಂದಿದ್ದು, ಅದರ ದೃಶ್ಯ ಕೂಡ ಲಭ್ಯವಾಗಿದ್ದು, ಪದ್ಮನಾಭ ಅವರ ಜತೆಗೆ ಕೆಲಸ ಮಾಡುತ್ತಿದ್ದವರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ.
ಪದ್ಮನಾಭ ಅವರ ಬಗ್ಗೆ ಹಾಗೂ ವ್ಯವಹಾರದ ಬಗ್ಗೆ ಗೊತ್ತಿರುವ ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ಮೂಡಿಸಿದೆ.
ಇನ್ನೊಂದೆಡೆ, ಪದ್ಮನಾಭ ಅವರ ಮನೆಯಲ್ಲಿ ದರೋಡೆ ಮಾಡುವ ಮೂಲಕ ಕೋಟ್ಯಂತರ ಹಣ ದೋಚುವ ಐಡಿಯಾ ಹಾಗೂ ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡೇ ದರೋಡೆಕೋರರು ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅದಕ್ಕಾಗಿ ಪ್ರತ್ಯೇಕ ಗೋಣಿ ಚೀಲವನ್ನು ಕೂಡ ಹಿಡಿದುಕೊಂಡು ಬಂದಿದ್ದು, ಹಣವನ್ನು ತುಂಬಿಸಿಕೊಂಡು ಹೋಗುವ ಲೆಕ್ಕಾಚಾರ ಹಾಕಿಕೊಂಡು ಬಂದಿದ್ದರು ಎನ್ನಲಾಗಿದೆ.
ಇನ್ನು ತನಿಖೆ ಪ್ರತ್ಯೇಕ ಮೂರು ತಂಡಗಳನ್ನು ರಚಿಸಲಾಗಿದ್ದು, ಒಂದು ತಂಡ ಸಿಸಿಟಿವಿ ದೃಶ್ಯಗಳನ್ನು ಅಲ್ಲಲ್ಲಿ ಕಲೆಹಾಕುತ್ತಿದ್ದಾರೆ, ಇನ್ನೊಂದು ತಂಡ ಮನೆಯಲ್ಲಿ ಅಳವಡಿಸಲಾಗಿದ್ದ ಡಿವಿಆರ್ನ್ನು ಪರಿಶೀಲನೆ ನಡೆಸುತ್ತಿದೆ. ಮತ್ತೊಂದು ತಂಡ ಆರೋಪಿಗಳು ಮೊಬೈಲ್ ಬಳಸಿದ್ದರೆ ಅದರ ಲೊಕೇಷನ್ ಟ್ರೇಸ್ ಮಾಡುವ ದಿಕ್ಕಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಹೀಗಿರುವಾಗ, ಆರೋಪಿಗಳು ಶೀಘ್ರದಲ್ಲೇ ಬಂಧಿಸುವ ವಿಶ್ವಾಸದಲ್ಲಿ ಪೊಲೀಸರು ಇದ್ದಾರೆ.