ಕರಾವಳಿ ಟಾಪ್ ನ್ಯೂಸ್
– ಉಡುಪಿ: ಅಪರಿಚಿತ ಕೊಳೆತ ಶವ ಪತ್ತೆ!
– ಮಣಿಪಾಲ: ಸರಣಿ ಅಂಗಡಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್!
– ಪುತ್ತೂರು: ಚಡ್ಡಿ ಗ್ಯಾಂಗ್ ಹೆಸರಿನಲ್ಲಿ ದರೋಡೆಯ ಕಥೆ ಕಟ್ಟಿದ ಮಹಿಳೆ
NAMMUR EXPRESS NEWS
ಉಡುಪಿ : ಬೈಲಕೆರೆ ವಿದ್ಯೋದಯ ಶಾಲೆಯ ಪಕ್ಕ ಇಂದ್ರಾಣಿ ತೋಡಿನಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವ ನ. 7ರಂದು ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಸುನೀಲ್ ಬೈಲಕೆರೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು. ತಕ್ಷಣವೇ ಘಟನಾ ಸ್ಥಳಕ್ಕೆ ಆಗಮಿಸಿದ ಒಳಕಾಡು ಅವರು ತೋಡಿನಲ್ಲಿ ಬಿದ್ದಿದ್ದ ಕೊಳೆತ ಶವವನ್ನು ಮೇಲಕ್ಕೆತ್ತಿದ್ದರು.
ನಗರ ಠಾಣೆಯ ಎ ಎಸ್ ಐ ನವೀನ್ ದೇವಾಡಿಗ, ಹೆಡ್ ಕಾನ್ಸಟೇಬಲ್ ತಾರಾನಾಥ್ ಕಾನೂನು ಪ್ರಕ್ರಿಯೆ ನಡೆಸಿದರು. ಉಮೇಶ ಬೈಲಕೆರೆ ಸಹಕರಿಸಿದರು ಕೊಳೆತ ಶವವನ್ನು ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ನೆರವಾದರು. ಸಂಭಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.
* ಮಣಿಪಾಲ: ಸರಣಿ ಅಂಗಡಿ ಕಳ್ಳತನ – ಮೂವರು ಆರೋಪಿಗಳು ಅರೆಸ್ಟ್!
ಮಣಿಪಾಲ : ಅಂಗಡಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಕೊಪ್ಪಳ ಜಿಲ್ಲೆಯ ಗಜೇಂದ್ರಗಡ ನಿವಾಸಿ ಮಂಜುನಾಥ ಚಿದಾನಂದಪ್ಪ ನರತೇಲಿ (24) , ಉಡುಪಿ ಜಿಲ್ಲೆ ಹಟ್ಟಿಯಂಗಡಿ ಮೂಲದ ಪ್ರಸಾದ್ (22), ಮತ್ತು ಉಡುಪಿ ಜಿಲ್ಲೆ ಹಟ್ಟಿಯಂಗಡಿಯ ಕಿಶನ್ (20) ಎಂದು ಗುರುತಿಸಲಾಗಿದೆ. ಅಕ್ಟೋಬರ್ 31, 2024 ರ ರಾತ್ರಿ, ಮಣಿಪಾಲ ಪೊಲೀಸ್ ವ್ಯಾಪ್ತಿಗೆ ಒಳಪಡುವ ಶಿವಳ್ಳಿ ಗ್ರಾಮದ ಬೆಕ್ ಲೇನ್ ಬೇಕರಿ ಮತ್ತು ಈಶ್ವರ ನಗರದ ಆದಿಶಕ್ತಿ ಜನರಲ್ ಸ್ಟೋರ್ಸ್ಗೆ ಅಪರಿಚಿತ ಕಳ್ಳರು ನುಗ್ಗಿದ್ದರು. ದುಷ್ಕರ್ಮಿಗಳು ಪ್ರವೇಶ ಪಡೆಯಲು ಶಟರ್ನ ಒಂದು ಬದಿಯನ್ನು ಎತ್ತಿ, ಒಟ್ಟು ರೂ. 60,000 ನಗದು ಕಳ್ಳತನ ಮಾಡಲಾಗಿದೆ. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
* ಪುತ್ತೂರು: ಚಡ್ಡಿ ಗ್ಯಾಂಗ್ ಹೆಸರಿನಲ್ಲಿ ದರೋಡೆಯ ಕಥೆ ಕಟ್ಟಿದ ಮಹಿಳೆ
ಪುತ್ತೂರು: ಚಡ್ಡಿ ಗ್ಯಾಂಗ್ ದರೋಡೆಕೋರರು
ನ. 5ರಂದು ರಾತ್ರಿ ನನ್ನ ಮನೆಗೆ ಬಂದು ತಲವಾರು ತೋರಿಸಿ ನಗದು ನೀಡುವಂತೆ ಬೆದರಿಕೆ ಒಡ್ಡಿದ್ದು, ಈ ವೇಳೆ ನಾನು ತಪ್ಪಿಸಿಕೊಂಡು ಕಿಟಕಿಯ ಮೂಲಕ ತೆಗೆದಿದ್ದೇನೆ ಎನ್ನಲಾದ ಫೋಟೋವೊಂದನ್ನು ಮಹಿಳೆ ವೈರಲ್ ಮಾಡಿದ್ದು, ಪರಿಣಾಮ ಕೆಯ್ಯೂರು ಗ್ರಾಮದೆಲ್ಲೆಡೆ ಆತಂಕ ಮನೆ ಮಾಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಸಂದರ್ಭ ಮಹಿಳೆಯ ಕಟ್ಟು ಕಥೆ ಬೆಳಕಿಗೆ ಬಂದಿದೆ. ಚಡ್ಡಿ ಗ್ಯಾಂಗ್ನ ಕಥೆ ಕಟ್ಟಿದ್ದು ಕೇರಳ ಮೂಲದಿಂದ ಬಂದು ನೆಲೆಸಿರುವ ಮಾರ್ಗರೇಟ್. ಈ ರೀತಿ ಸುಳ್ಳು ಕಥೆ ಹೆಣೆದದ್ದು ಏಕೆ ಎನ್ನುವ ವಿಚಾರ ಇನ್ನೂ ಬಹಿರಂಗವಾಗಿಲ್ಲ. ಪುತ್ತೂರು ಗ್ರಾಮಾಂತರ ಪೊಲೀಸರು ಈ ಬಗ್ಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.