ಕರಾವಳಿ ಟಾಪ್ ನ್ಯೂಸ್
– ಆಗುಂಬೆ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಗುಂಡಿಗೆ ಪಲ್ಟಿ –ತಪ್ಪಿದ ದುರಂತ!
– ಗಂಗೊಳ್ಳಿ : ಕಡಲಿಗೆ ಬಿದ್ದ ಮೀನುಗಾರ, 6 ದಿನವಾದರೂ ಪತ್ತೆಯಿಲ್ಲ!
– ಉಡುಪಿ: ಪಳ್ಳಿ – ಮೂಡುಬೆಳ್ಳೆ ವಾಹನ ಸವಾರರ ಪರದಾಟ : ರಸ್ತೆ ದುರಸ್ತಿಗೆ ಆಗ್ರಹ
– ಸುಳ್ಯ : ತಾಯಿಯೇ ಮಗುವಿಗೆ ಸುಟ್ಟು ಗಾಯ ಮಾಡಿದ ಪ್ರಕರಣ : ಶಿಕ್ಷೆ ಪ್ರಕಟ
NAMMUR EXPRESS NEWS
ಆಗುಂಬೆ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಪಲ್ಟಿಯಾದ ಘಟನೆ ಸೋಮೇಶ್ವರ ಆಗುಂಬೆ ಘಾಟಿ ಪ್ರವೇಶ ರಸ್ತೆಯಲ್ಲಿ ಜ. 9 ಬುಧವಾರದಂದು ನಡೆದಿದೆ.
ರಸ್ತೆಯ ಮುಂಭಾಗ ಕಾರು ಪ್ರವೇಶವಾದ ಕಾರಣ ಈ ಘಟನೆ ನಡೆದಿದೆ. ಚಾಲಕನ ಗಮನದ ಜೊತೆಗೆ ನಿಯಂತ್ರಣ ಕಳೆದುಕೊಂಡ ಕಾರಣ ಲಾರಿ ಗುಂಡಿಗೆ ಪಲ್ಟಿಯಾದ ದುರ್ಘಟನೆ ನಡೆದಿದೆ. ಸಧ್ಯ ಚಾಲಕ ಭಾರಿ ಅಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
– ಗಂಗೊಳ್ಳಿ : ಕಡಲಿಗೆ ಬಿದ್ದ ಮೀನುಗಾರ, 6 ದಿನವಾದರೂ ಪತ್ತೆಯಿಲ್ಲ!
ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪದ ಸಮುದ್ರದಲ್ಲಿ ಸರ್ವಮಂಗಳ ಬೋಟಿನಲ್ಲಿ ಜ. 2ರಂದು ಸಂಜೆ ಮೀನುಗಾರಿಕೆಯಲ್ಲಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕಡಲಿಗೆ ಬಿದ್ದು ನಾಪತ್ತೆಯಾದ ನಾರಾಯಣ ಮೊಗವೀರ (58) ಅವರ ಬಗ್ಗೆ 6 ದಿನ ಕಳೆದರೂ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಮಾಹಿತಿ ತಿಳಿಯಲಾಗಿದೆ.
ಆ ದಿನ ಇತರ ಮೀನುಗಾರರು ಬೋಟ್ಗಳಲ್ಲಿ ಹುಡುಕಾಡಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಕಳೆದ 5-6 ದಿನಗಳಿಂದಲೂ ಅವರ ಪತ್ತೆಗಾಗಿ ಗಂಗೊಳ್ಳಿಯ ಪರ್ಶಿನ್ ಬೋಟ್ಗಳು, ಮನೆಯವರು, ಕರಾವಳಿ ಕಾವಲು ಪಡೆ ಪೊಲೀಸರು, ಗಂಗೊಳ್ಳಿ ಠಾಣಾ ಪೊಲೀಸರು, ಮುಳುಗು ತಜ್ಞ ದಿನೇಶ್ ಖಾರ್ವಿ ಮತ್ತು ಇತರರು ನಿರಂತರ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇವರ ಬಗ್ಗೆ ಏನಾದರೂ ಸುಳಿವು ಸಿಕ್ಕಿದರೆ ತಕ್ಷಣ ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಬೇಕಾಗಿ ಮನೆಯವರು ಮನವಿ ಮಾಡಿಕೊಂಡಿದ್ದಾರೆ.
– ಉಡುಪಿ: ಪಳ್ಳಿ – ಮೂಡುಬೆಳ್ಳೆ ವಾಹನ ಸವಾರರ ಪರದಾಟ : ರಸ್ತೆ ದುರಸ್ತಿಗೆ ಆಗ್ರಹ
ಉಡುಪಿ : ಪಳ್ಳಿ-ಮೂಡುಬೆಳ್ಳೆ ರಸ್ತೆಯಲ್ಲಿ ಗುಂಡಿಗಳು ಬಾಯ್ದೆರೆದುಕೊಂಡು ವಾಹನಗಳ ಸಂಚಾರಕ್ಕೆ ದುಸ್ಥಿತಿ ಉಂಟಾಗಿದೆ. ದಿನನಿತ್ಯ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುತ್ತಿದ್ದಾರೆ. ಇಲ್ಲಿನ ರಸ್ತೆ ಗುಂಡಿಗಳು ಮರಣ ಗುಂಡಿಗಳಾಗಿ ಮಾರ್ಪಾಡಾಗಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ”ಇತ್ತೀಚಿಗಷ್ಟೇ ಈ ರಸ್ತೆಗೆ ತೇಪೆ ಹಾಕಲಾಗಿದ್ದು ಕಳೆದ ಮಳೆಗಾಲದ ನಂತರ ರಸ್ತೆ ಮತ್ತೆ ಬಿರುಕು ಬಿಟ್ಟಿದೆ. ಹೊಂಡಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ವಾಹನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಮುಂದಿನ ತಿಂಗಳೊಳಗೆ ರಸ್ತೆಯನ್ನು ಸಂಪೂರ್ಣ ಮರುನಿರ್ಮಾಣ ಮಾಡಿ ಮಳೆಗಾಲದ ಒಳಗೆ ಒಣಗಿ ಸುಸಜ್ಜಿತವಾಗಬೇಕಾಗಿದೆ. ಕಾರ್ಕಳ – ಉಡುಪಿ ಮುಖ್ಯ ರಸ್ತೆಯ ವಾಹನ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ಅನೇಕ ವಾಹನಗಳು ಪಳ್ಳಿ, ನಾಲ್ಕುಬೀದಿ ಮೂಲಕ ಮಣಿಪಾಲ ಉಡುಪಿ ಕಡೆಗೆ ಸಂಚರಿಸುತ್ತಿವೆ. ಆದ್ದರಿಂದ ಈ ಬಗ್ಗೆ ಅತಿ ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು” ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ.
– ಸುಳ್ಯ : ತಾಯಿಯೇ ಮಗುವಿಗೆ ಸುಟ್ಟು ಗಾಯ ಮಾಡಿದ ಪ್ರಕರಣ : ಶಿಕ್ಷೆ ಪ್ರಕಟ
ಸುಳ್ಯ : ತಾಯಿಯೊಬ್ಬಳು ತನ್ನ 5 ವರ್ಷ ಪ್ರಾಯದ ಮಗುವಿಗೆ ಬಿಸಿ ಪಾತ್ರೆಯಿಂದ ಸುಟ್ಟು ಗಾಯಗೊಳಿಸಿದ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾಗಿದ್ದು ನ್ಯಾಯಾಲಯ ಆರೋಪಿಗೆ ಶಿಕ್ಷೆ ಘೋಷಿಸಿದೆ. ಕಾವ್ಯಶ್ರೀ ಎಂಬವರು 2022ರ ಆ.16ರಂದು ಸುಳ್ಯ ಗಾಂಧಿನಗರ ನಾವೂರು ಎಂಬಲ್ಲಿರುವ ತನ್ನ ತಾಯಿಯ ಮನೆಯಲ್ಲಿ ಬಿಸಿ ಹಾಲಿನ ಪಾತ್ರೆಯಿಂದ ತನ್ನ 5 ವರ್ಷ ಪ್ರಾಯದ ಪುತ್ರಿಯ ದೇಹದ ವಿವಿಧ ಕಡೆ ಸುಟ್ಟು ನೋವುಂಟು ಮಾಡಿದ್ದರು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ರಶ್ಮಿ ಅವರಿಗೆ ವಿಷಯ ಗೊತ್ತಾಗಿ ಸುಳ್ಯ ಠಾಣೆಯಲ್ಲಿ ತಾಯಿ ವಿರುದ್ಧ ದೂರು ದಾಖಲಿಸಿದ್ದರು. ಸುಳ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಹಿರಿಯ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಬಿ.ಮೋಹನ್ ಬಾಬು ಅವರು ಆಪಾದಿತೆಯನ್ನು ದೋಷಿಯೆಂದು ಘೋಷಿಸಿದ್ದಾರೆ. ಅಪಾದಿತೆಗೆ ಒಟ್ಟು 10 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಕಾರಗೃಹ ವಾಸದ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.