ಕರಾವಳಿ ಟಾಪ್ ನ್ಯೂಸ್
– ಮಂಗಳೂರು ವಿಮಾನ ನಿಲ್ದಾಣದ ಬಳಿಯೇ ಚಿರತೆ ಪ್ರತ್ಯಕ್ಷ!
– ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ!
– ಸುಳ್ಯ: ವಾಹನ ನಡುವೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು
NAMMUR EXPRESS NEWS
ಮಂಗಳೂರು: ಬಜ್ಪೆಯ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪತ್ತೆಯಾದ ಘಟನೆ ನಡೆದಿದೆ.ಈ ಚಿರತೆಯನ್ನು ಖುದ್ದು ವಿಮಾನ ನಿಲ್ದಾಣದ ಅಧಿಕಾರಿಯೇ ನೋಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಬೆಳ್ಳಂಬೆಳಗ್ಗೆ ವೇಳೆ ಕಾರಿನಲ್ಲಿ ಕರ್ತವ್ಯಕ್ಕೆ ಬರುತ್ತಿದ್ದರು. ಈ ವೇಳೆ ಕಾರಿನ ಮುಂಭಾಗವಾಗಿ ಚಿರತೆಯೊಂದು ರಸ್ತೆ ದಾಟಿದೆ. ತಕ್ಷಣ ಅಧಿಕಾರಿ ತಮ್ಮ ಮೊಬೈಲ್ನಿಂದ ಚಿರತೆಯ ಫೋಟೊ ಕ್ಲಿಕ್ಕಿಸಿ, ಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
* ಪುತ್ತೂರು: ಜಾಗದ ವಿಚಾರ, ನೆರಮನೆಯವನನ್ನು ಕಡಿದು ಕೊಲೆ!
ಪುತ್ತೂರು: ಜಾಗದ ವಿಚಾರಕ್ಕೆ ವ್ಯಕ್ತಿಯೊಬ್ಬ ನೆರಮನೆಯವನನ್ನು ಕಡಿದು ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಉಪ್ಪಿನಂಗಡಿ ಬಳಿಯ ಗೋಳಿತೊಟ್ಟಿನಲ್ಲಿ ನ.8ರಂದು ರಾತ್ರಿ ನಡೆದಿದೆ. ಕೊಲೆಯಾದವರನ್ನು ಗೋಳಿತ್ತೊಟ್ಟು ಗ್ರಾಮದ ಆಲಂತಾಯ ನಿವಾಸಿ ರಮೇಶ್ ಗೌಡ (51) ಎಂದು ಗುರುತಿಸಲಾಗಿದೆ. ಸಂಬಂಧಿಕನೂ ಆಗಿರುವ ನೆರೆಮನೆ ನಿವಾಸಿ ಹರೀಶ್ ಎಂಬಾತ ತಡೆದು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೇಟೆಗೆ ಬಂದು ತನ್ನ ಬೈಕಿನಲ್ಲಿ ಮನೆಯತ್ತ ಹಿಂತಿರುಗುತ್ತಿದ್ದ ವೇಳೆ ತಡೆದು ಕೊಲೆ ಮಾಡಲಾಗಿದೆ. ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು, ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ರಮೇಶ್ ಗೌಡ ಕೊಲೆಯಾಗಿ ಬಿದ್ದಿದ್ದಾರೆ. ಉಪ್ಪಿನಂಗಡಿ ಪೊಲೀಸರು ಸ್ಥಳದಲ್ಲಿದ್ದು, ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
* ಸುಳ್ಯ: ವಾಹನ ನಡುವೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು!
ಸುಳ್ಯ: ಸುಳ್ಯದ ಪರಿವಾರಕಾನ -ಉಬರಡ್ಕ ರಸ್ತೆಯ ಸೂಂತೋಡು ಎಂಬಲ್ಲಿ ಕೆ. ಎಸ್ ಆರ್. ಟಿ. ಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ನಡೆದ ಭೀಕರ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರೆ ಕಾಲೇಜು ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ. ಸಹೋದರಿ ಗಂಭೀರ ಗಾಯಗೊಂಡ ಘಟನೆ ನ. 8ರಂದು ಸಂಜೆ ನಡೆದಿದೆ. ಪುತ್ತೂರಿನ ಖಾಸಗಿ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿನಿ, ಉಬರಡ್ಕ ಮಿತ್ತೂರು ಗ್ರಾಮದ ನಾರಾಯಣ ಕಾಡುತೋಟ ಎಂಬವರ ಪುತ್ರಿ ರಚನಾ (20) ಮೃತರು.
ಆಕೆಯ ಸಹೋದರಿ ಸಹ ಸವಾರೆಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿನಿ ಅನನ್ಯ (16) ಎಂಬವರು ಗಂಭೀರ ಗಾಯಗೊಂಡಿದ್ದಾರೆ. ರಚನಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಹೋದರಿ ಅನನ್ಯ ಅವರನ್ನು ಕುಳ್ಳಿರಿಸಿಕೊಂಡು ಸುಳ್ಯದಿಂದ ತಮ್ಮ ಮನೆಗೆ ತೆರಳುತ್ತಿದ್ದ ವೇಳೆ ಸುಳ್ಯ ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಸೂಂತೋಡು ಎಂಬಲ್ಲಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ರಚನಾ ಅವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಸಹ ಸವಾರೆ ಅನನ್ಯ ಅವರ ಕಾಲಿಗೆ ಗಂಭೀರ ಗಾಯವಾಗಿದ್ದು ಅವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಪೊಲೀಸರು ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.