ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಮತ್ತೆ ಮಂಗಳೂರಿನಲ್ಲಿ ಬಾಂಗ್ಲರ ಸದ್ದು!
– ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ
– ಮಂಗಳೂರು: ವಾಮಂಜೂರಿನಲ್ಲಿ ಗನ್ ಫೈರ್, ರೌಡಿಶೀಟರ್ ಅರೆಸ್ಟ್!
– ಉಚ್ಚಿಲ: ಕಾರು ಡಿಕ್ಕಿಯಾಗಿ ಪಾದಚಾರಿ ಗಂಭೀರ ಸಾವು
NAMMUR EXPRESS NEWS
ಮಂಗಳೂರು: ನಗರದ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಂಗ್ಲಾದೇಶದ ರಾಜಶಾಹಿ ಜಿಲ್ಲೆಯ ನಿವಾಸಿ ಅನರುಲ್ ಶೇಖ್ (25) ಬಂಧಿತ ವ್ಯಕ್ತಿಯಾಗಿದ್ದಾನೆ. ಅನರುಲ್ ಶೇಖ್ ಮೂರು ವರ್ಷಗಳ ಹಿಂದೆ ಅಂತಾರಾಷ್ಟ್ರಿಯ ಗಡಿರೇಖೆ ಲಾಲ್ಗೋಲ್ ಮೂಲಕ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದಾನೆ. ಬಳಿಕ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಿಂದ ಉಡುಪಿಗೆ ಬಂದಿದ್ದನು. ಇಲ್ಲಿಂದ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಮುಕ್ಕ ಗ್ರಾಮದ ರೋಹನ್ ಎಸ್ಟೇಟ್ನಲ್ಲಿ ಅನರುಲ್ ಶೇಖ್ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಅನರುಲ್ ಶೇಖ್ ಬಗ್ಗೆ ಖಚಿತ ಮಾಹಿತಿ ಪಡೆದ ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅನರುಲ್ ಶೇಖ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
* ಮಂಗಳೂರು: ವಾಮಂಜೂರಿನಲ್ಲಿ ಗನ್ ಫೈರ್, ರೌಡಿಶೀಟರ್ ಅರೆಸ್ಟ್!
ಮಂಗಳೂರು: ನಗರದ ವಾಮಂಜೂರಿನ ಸೆಕೆಂಡ್ ಬಜಾರ್ ಅಂಗಡಿಯಲ್ಲಿ ಗುಂಡು ಹಾರಿ ಎದುರುಪದವು ಮಸೀದಿ ಧರ್ಮಗುರು ಸಫ್ವಾನ್ ಎಂಬವರು ಗಾಯಗೊಂಡ ಪ್ರಕರಣದಲ್ಲಿ, ಆರೋಪಿ ರೌಡಿಶೀಟರ್ ಬದ್ರುದ್ದೀನ್ ಯಾನೆ ಅದ್ದು (35) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಬದ್ರುದ್ದೀನ್ ಕೈಯಿಂದಲೇ ಗುಂಡು ಹಾರಿರುವುದು ತನಿಖೆಯಿಂದ ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಗನ್ ಬಜಪೆಯ ಭಾಸ್ಕರ್ ಅವರದ್ದು ಎಂದು ಹೇಳುವ ಮೂಲಕ ಮತ್ತೊಮ್ಮೆ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಫ್ವಾನ್ ಹೇಳಿಕೆ ಗೊಂದಲದಲ್ಲಿದ್ದ ಕಾರಣ ಬದ್ರುದ್ದೀನ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬಹಿರಂಗವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಹೇಳಿದ್ದಾರೆ. ಘಟನೆ ನಡೆದ ಒಂದು ದಿನದ ಹಿಂದೆ ಪರವಾನಗಿ ಇಲ್ಲದ ಅಕ್ರಮ ಗನ್ ಅನ್ನು ಇಮ್ರಾನ್ ಎಂಬಾತ ಬದ್ರುದ್ದೀನ್ಗೆ ನೀಡಿದ್ದ. ಕೇರಳದ ವ್ಯಕ್ತಿಯೊಬ್ಬನಿಂದ ಇಮ್ರಾನ್ ಗನ್ ಖರೀದಿಸಿದ್ದ ಎಂದು ತಿಳಿದುಬಂದಿದೆ. ಘಟನೆ ವೇಳೆ ಅಲ್ಲಿದ್ದ ಪ್ರತ್ಯಕ್ಷದರ್ಶಿಗಳಿಂದಲೂ ಮಾಹಿತಿ ಪಡೆಯಲಾಗಿದೆ. ಅಲ್ಲದೆ, ಸಫ್ವಾನ್ ಯಾಕೆ ಸುಳ್ಳು ಮಾಹಿತಿ ನೀಡಿದ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಅನುಪಮ್ ಅಗರ್ವಾಲ್ ಮಾಹಿತಿ ನೀಡಿದರು.
* ಉಚ್ಚಿಲ: ಕಾರು ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
ಕಾಪು: ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಚ್ಚಿಲ ರಿಕ್ಷಾ ನಿಲ್ದಾಣದ ಬಳಿ ಜ.10ರ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತರನ್ನು ಕುಂಜೂರು ನಿವಾಸಿ ಶ್ರೀನಿವಾಸ ತೋಣಿತ್ತಾಯ (72) ಎಂದು ಗುರುತಿಸಲಾಗಿದೆ. ಶ್ರೀನಿವಾಸ ತೋಣಿತ್ತಾಯ ಅವರು ಬೆಳಗ್ಗೆ ಮನೆಯಿಂದ ಉಚ್ಚಿಲಕ್ಕೆ ಬಂದು ರಸ್ತೆ ದಾಟುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಡುಬಿದ್ರಿ ಠಾಣಾ ಪೊಲೀಸು ಘಟನಾ ಸ್ಥಳಕ್ಕೆ ಆಗಮಿಸಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.