ಕರಾವಳಿ ಟಾಪ್ ನ್ಯೂಸ್
– ಕಾರ್ಕಳದಲ್ಲಿ 15 ಲಕ್ಷದ ಅಕ್ರಮ ಮದ್ಯ ವಶ!
– ಬಂಟ್ವಾಳ: ಬ್ರೇಕ್ ಫೇಲ್ ಆಗಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ
– ಮಂಗಳೂರು: ಪಕ್ಷಿಕೆರೆ ಪ್ರಕರಣಕ್ಕೆ ಟ್ವಿಸ್ಟ್: ಅನೇಕರಿಗೆ ಮೋಸ!
– ಪುತ್ತೂರು: ಸರ್ಕಾರಿ ಬಸ್ ಕಂಡಕ್ಟರ್ ಗೆ ಪ್ರಯಾಣಿಕನಿಂದ ಕಪಾಳಮೋಕ್ಷ!
NAMMUR EXPRESS NEWS
ಕಾರ್ಕಳ: ಬೋಳ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯದ ಬಾಕ್ಸ್ಗಳನ್ನು ಅಬಕಾರಿ ಇಲಾಖೆ ದಾಳಿ ಮಾಡಿದೆ. ಹಾಗೂ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದೆ. ಈ ಘಟನೆ ಗುರುವಾರ ನಡೆದಿದೆ. ಗೋವಾದಿಂದ ಅಕ್ರಮವಾಗಿ ತರಿಸಲಾಗಿದ್ದ ಸುಮಾರು 15 ಲಕ್ಷ ಮೌಲ್ಯದ್ದು ಎನ್ನಲಾಗಿದೆ.
ಅಬಕಾರಿ ಉಪ ಆಯುಕ್ತ ಬಿಂದು ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದುಬಾರಿ ಮೌಲ್ಯದ ಮದ್ಯದ ಬಾಟಲಿಗಳು ಬಾಕ್ಸ್ ಸಮೇತ ದಾಸ್ತಾನು ಮಾಡಲಾಗಿತ್ತು. 200 ಕ್ಕೂ ಹೆಚ್ಚು ಬಾಕ್ಸ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಟ್ವಾಳ: ಬ್ರೇಕ್ ಫೇಲ್ ಆಗಿ ಬಿದ್ದ ಕಾರು, 8 ವಿದ್ಯಾರ್ಥಿಗಳಿಗೆ ಗಾಯ
ಬಂಟ್ವಾಳ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ 8 ಮಕ್ಕಳು ಹಾಗೂ ಚಾಲಕ ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಮುಚ್ಚಿಲಪದವು ಎಂಬಲ್ಲಿ ಈ ಘಟನೆ ನಡೆದಿದ್ದು, ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ವೇಳೆ ಕಾರಿನಲ್ಲಿದ್ದ ಇಬ್ಬರು ಮಕ್ಕಳು ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಎಂಟು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಮಂಗಳೂರು ಮತ್ತು ಬಂಟ್ವಾಳದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಿನ ಚಾಲಕ ಮುಳಿಯ ರಾಮಣ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಪಘಾತಕ್ಕೆ ಕಾರಿನ ಬ್ರೇಕ್ ಫೇಲ್ ಆಗಿದ್ದೇ ಕಾರಣ ಎನ್ನಲಾಗಿದ್ದು, ವಾಹನವು ಪೆರುವಾಯಿಯಿಂದ ವಿಟ್ಲದಲ್ಲಿರುವ ಶಾಲಾ ಬಸ್ ನಿಲ್ದಾಣದಲ್ಲಿ ಮಕ್ಕಳನ್ನು ಬಿಡಲು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
– ಪಕ್ಷಿಕೆರೆ: ಪತ್ನಿ, ಮಗುವನ್ನು ಕೊಂದು ವ್ಯಕ್ತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್
ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಪಕ್ಷಿಕೆರೆ ಜೋಡಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣವು ಒಂದು ಹೊಸ ತಿರುವು ಪಡೆದಿದೆ. ಪತ್ನಿ ಹಾಗೂ ಮಗುವನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರ್ತಿಕ್ ಭಟ್ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದೆ. ವಿಪರೀತ ಸಾಲದ ಸುಳಿಯಿಂದ ಬಳಲಿದ್ದ ಕಾರ್ತಿಕ್ ಭಟ್, ತನ್ನ ಸಂಸಾರದೊಂದಿಗೆ ಅನೇಕರನ್ನೂ ಸಮಸ್ಯೆಗೆ ಸಿಲುಕಿಸಿದ್ದ ಎಂಬ ವಿಚಾರ ತಿಳಿದುಬಂದಿದೆ.ನ.9 ರ ಶನಿವಾರದಂದು ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ಮುಲ್ಕಿ ಸಮೀಪದ ಪಕ್ಷಿಕೆರೆಯಲ್ಲಿ ಸುಂದರ ಸಂಸಾರವೊಂದು ಭೀಕರ ಅಂತ್ಯ ಕಂಡಿತ್ತು. ಕಾರ್ತಿಕ್ ಭಟ್ ಎಂಬಾತ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವನ್ನ ಕಿಟಕಿ ಗಾಜಿನಿಂದ ತಿವಿದು ಕೊಂದು ಬಳಿಕ ತಾನು ರೈಲಿಗೆ ತಲೆ ಕೊಟ್ಟು ಭೀಕರವಾಗಿ ಸಾವನ್ನಪ್ಪಿದ್ದ. ಈ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಇದೆ. ಅನೇಕ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ಮಧ್ಯೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಭಟ್ ಹಾಗೂ ಅಕ್ಕ ಕಣ್ಮಣಿ ಕಂಬಿ ಎಣಿಸುತ್ತಿದ್ದಾರೆ. ಈ ನಡುವೆ ಕಾರ್ತಿಕ್ ವಿರುದ್ಧ ಸಾಲು ಸಾಲು ಅವ್ಯವಹಾರಗಳ ಆರೋಪ ಕೇಳಿ ಬಂದಿದೆ. ಪಕ್ಷಿಕೆರೆ ನಿವಾಸಿ ಮಹಮ್ಮದ್ ಎಂಬುವವರ 80 ಗ್ರಾಂ ಚಿನ್ನವನ್ನ ಕಾರ್ತಿಕ್ ಎಗರಿಸಿದ್ದ ಎಂಬ ಆರೋಪ ಕೇಳಿಬಂದಿದೆ. ಚಿನ್ನ ಅಡವಿಟ್ಟು ಸಾಲ ಕೊಡಿಸುತ್ತೇನೆ ಎಂದು ನಂಬಿಸಿ ಕಾರ್ತಿಕ್ ನನಗೆ ಮೋಸ ಮಾಡಿದ್ದಾನೆ ಎಂದು ಮಹಮ್ಮದ್ ಆರೋಪಿಸಿದ್ದಾರೆ. ಎರಡು ವರ್ಷದ ಹಿಂದೆ ಪಕ್ಷಿಕೆರೆ ಬ್ಯಾಂಕ್ವೊಂದರಲ್ಲಿ ತನ್ನ 80 ಗ್ರಾಂ ಚಿನ್ನವನ್ನು ಅಡವಿಟ್ಟು ಮಹಮ್ಮದ್ 1,60,000 ಸಾಲ ಪಡೆದಿದ್ದ. ಅವರಿಗೆ ಇನ್ನೂ ಹೆಚ್ಚಿನ ಸಾಲ ಬೇಕೆಂಬುದನ್ನು ಮನಗಂಡು ಕಾರ್ತಿಕ್ ತಾನು ಮ್ಯಾನೇಜರ್ ಆಗಿರುವ ಸುಬ್ರಹ್ಮಣ್ಯ ಸಹಕಾರಿ ಸಂಘದಲ್ಲಿ ಅಡವಿಟ್ಟರೆ ಹೆಚ್ಚಿನ ಸಾಲ ನೀಡುವುದಾಗಿ ಭರವಸೆ ನೀಡಿದ್ದ. ಹೆಚ್ಚಿನ ಸಾಲದ ಅಗತ್ಯತೆಯಿಂದ ಮಹಮ್ಮದ್, ಕಾರ್ತಿಕ್ ಮಾತನ್ನ ನಂಬಿ ಪಕ್ಷಿಕೆರೆ ಬ್ಯಾಂಕ್ನಲ್ಲಿ ಚಿನ್ನ ಅಡವಿಡುತ್ತಾರೆ. ಆ ಬಳಿಕ 3,04,000 ರೂ. ಸಾಲವನ್ನೂ ಪಡೆಯುತ್ತಾರೆ. ಆ ಬಳಿಕ ವೈಯುಕ್ತಿಕ ಸಮಸ್ಯೆಯಿಂದ ಮಹಮ್ಮದ್ ಆ ಊರಲ್ಲಿ ಇರದ ಕಾರಣ ಬ್ಯಾಂಕ್ಗೆ ಸರಿಯಾಗಿ ಭೇಟಿ ನೀಡೋದಿಲ್ಲ. ಆದರೆ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಸಂಶಯಗೊಂಡ ಮಹಮ್ಮದ್, ಬ್ಯಾಂಕ್ನಲ್ಲಿ ತಾವು ಅಡವಿಟ್ಟ ಚಿನ್ನದ ಬಗ್ಗೆ ವಿಚಾರಿಸುತ್ತಾರೆ. ಆದರೆ ಆವಾಗ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬರುತ್ತೆ. ಚಿನ್ನ ಅಡವಿಟ್ಟ 4 ತಿಂಗಳಲ್ಲೇ ಅಡವಿಟ್ಟ ಬಂಗಾರ ಬಿಡಿಸಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾರ್ತಿಕ್ ಭಟ್ ಈ ಬಂಗಾರದ ಒಡವೆಗಳನ್ನು ಅಲ್ಲಿಂದ ಎಗರಿಸಿ ಅದರ ಮೂಲ ಬೆಲೆಗೆ ಮಾರಿದ್ದಾನೆ ಎಂದು ಬಂಗಾರದ ಒಡವೆ ಕಳೆದುಕೊಂಡ ಮಹಮ್ಮದ್ ಆರೋಪಿಸಿದ್ದಾರೆ. ಕಾರ್ತಿಕ್ ಭಟ್ ವಿರುದ್ಧ ಕೇಳಿ ಬಂದಿರುವ ಈ ವಂಚನೆ ಆರೋಪದ ಸತ್ಯಾಸತ್ಯತೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಅನೇಕ ಜನರು ಕಾರ್ತಿಕ್ ಭಟ್ನಿಂದ ವಂಚನೆಗೆ ಒಳಗಾಗಿದ್ದೇವೆ ಎಂದು ಆರೋಪಿಸುತ್ತಿದ್ದಾರೆ.
ಸರ್ಕಾರಿ ಬಸ್ ಕಂಡಕ್ಟರ್ ಗೆ ಪ್ರಯಾಣಿಕನಿಂದ ಕಪಾಳಮೋಕ್ಷ!
ಮಂಗಳೂರು: ಪುತ್ತೂರು-ವಿಟ್ಲ-ಕುಳಾಲು ಮಧ್ಯೆ ಸಂಚರಿಸುವ ಪುತ್ತೂರು ಡಿಪೋಗೆ ಸೇರಿದ KA19F2951 ಸಂಖ್ಯೆಯ ಸರ್ಕಾರಿ ಬಸ್ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಚಿಲ್ಲರೆ ಹಣದ ವಿಚಾರದಲ್ಲಿ ಮಾತಿನ ಚಕಮಕಿ ನಡೆದು ನಿರ್ವಾಹಕನ ಮೇಲೆ ಪ್ರಯಾಣಿಕ ಏಕಾಏಕಿ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಚಾಲಕ ಮತ್ತು ನಿರ್ವಾಹಕ ಬಸ್ಸನ್ನು ವಿಟ್ಲ ಠಾಣೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರಯಾಣಿಕ ಯಾರು, ಎಲ್ಲಿಯವನೆಂಬ ಬಗ್ಗೆ ಪೊಲೀಸ್ ವಿಚಾರಣೆಯಿಂದ ತಿಳಿದು ಬರಬೇಕಾಗಿದೆ.