ಕರಾವಳಿ ಟಾಪ್ ನ್ಯೂಸ್
– ಬೆಳ್ತಂಗಡಿ: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
– ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ
– ತೊಕ್ಕೊಟ್ಟು: ಜೀಪು ಢಿಕ್ಕಿ; ಸ್ಕೂಟರ್ ಸವಾರ ಸಾವು
NAMMUR EXPRESS NEWS
ಬೆಳ್ತಂಗಡಿ: ಧರ್ಮಸ್ಥಳ – ಸುಬ್ರಹ್ಮಣ್ಯ ರಸ್ತೆಯ ಕೊಕ್ಕಡ ಸಮೀಪದ ಕಾಪಿನಬಾಗಿಲು ಎನ್ನುವಲ್ಲಿ ಬಸ್ಸಿನಡಿಗೆ ಬೈಕ್ ಬಿದ್ದ ಪರಿಣಾಮ ಸವಾರ ಮೃತಪಟ್ಟ ಘಟನೆ ಡಿ. 15ರ ಸಂಜೆ ಸಂಭವಿಸಿದೆ. ಮೂಡುಬೈಲು ನಿವಾಸಿ ಮಾಧವ ಆಚಾರ್ಯ (46) ಮೃತ ಬೈಕ್ ಸವಾರ. ಖಾಸಗಿ ಬಸ್ಸಿನಲ್ಲಿ ಆಂಧ್ರಪ್ರದೇಶ ಮೂಲದ ಅಯ್ಯಪ್ಪ ಮಾಲಾಧಾರಿಗಳು ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದರು. ಆ ಬಸ್, ಕೊಕ್ಕಡದಿಂದ ಮೂಡುಬೈಲಿನ ತನ್ನ ಮನೆಗೆ ಹೋಗುತ್ತಿದ್ದ ಮಾಧವ ಆಚಾರ್ಯ ಅವರ ಬೈಕಿಗೆ ಕಾಪಿನಬಾಗಿಲು ಸಪ್ತಗಿರಿ ಕಾಂಪ್ಲೆಕ್ಸ್ ಸಮೀಪ ಮುಖಾಮುಖಿ ಢಿಕ್ಕಿ ಆಗಿದೆ.
* ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ; 20ಕ್ಕೂ ಅಧಿಕ ಮಂದಿಗೆ ಗಾಯ
ಬಂಟ್ವಾಳ: ತಾಲೂಕಿನ ಶಂಭೂರಿನ ಶ್ರೀ ಸಾಯಿ ಮಂದಿರದಿಂದ ಹೊರಟ ಪ್ರವಾಸಿಗರ ಬಸ್ ಸಾಗರ ತಾಲೂಕಿನ ಕಾರ್ಗಲ್ ಬಳಿಯ ತಿರುವಿನಲ್ಲಿ ತಾಂತ್ರಿಕ ದೋಷದ ಕಾರಣಕ್ಕೆ ಪಲ್ಟಿಯಾಗಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಡಿ.15ರಂದು ನಡೆದಿದೆ. ಸುಮಾರು 50 ಮಂದಿಯಿದ್ದ ಪ್ರವಾಸಿಗರ ತಂಡ ಖಾಸಗಿ ಬಸ್ಸಿನ ಮೂಲಕ ರವಿವಾರ ಮುಂಜಾನೆ 5ರ ಸುಮಾರಿಗೆ ಶಂಭೂರಿನಿಂದ ಹೊರಟು ಜೋಗ ಜಲಪಾತಕ್ಕೆ ತೆರಳುವ ವೇಳೆ ಘಟನೆ ನಡೆದಿದ್ದು, ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಶಂಭೂರಿನ ಯಶೋಧಾ ಹಾಗೂ ದೀಕ್ಷಿತಾ ಅವರಿಗೆ ಗಂಭೀರ ಗಾಯವಾಗಿದ್ದು, ಉಳಿದಂತೆ ಗಾಯಾಳುಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬಸ್ಸಿನಲ್ಲಿದ್ದ ಒಂದಷ್ಟು ಮಂದಿಯ ಕೈ-ಕಾಲಿಗೆ ಗಂಭೀರ ಗಾಯವಾಗಿದ್ದು, ಒಂದಿಬ್ಬರು ಮಕ್ಕಳ ತಲೆಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಕರೆ ತರಲಾಗುತ್ತಿದೆ ಎಂದು ಬಸ್ಸಿನಲ್ಲಿದ್ದವರು ತಿಳಿಸಿದ್ದಾರೆ. ಘಟನೆಯ ಕುರಿತು ಬಸ್ಸಿನಲ್ಲಿದ್ದ ಚೈತ್ರೇಶ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮಾಹಿತಿ ತಿಳಿಸಿದ್ದು, ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಪರಿಷತ್ ಸದಸ್ಯ ಡಾ| ಧನಂಜಯ ಸರ್ಜಿ ಅವರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ ಕಾರ್ಗಲ್ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಹರೀಶ್ ಗೌಡ ಅವರು ಸದಸ್ಯರಾದ ಬಾಲಸುಬ್ರಹ್ಮಣ್ಯ, ಗುರುಸಿದ್ದಪ್ಪ ಅವರ ಜತೆ ಸ್ಥಳಕ್ಕೆ ತೆರಳಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಪ್ರವಾಸಿರ ತಂಡ ಮುಂಜಾನೆ 5ರ ಸುಮಾರಿಗೆ ಶಂಭೂರಿನಿಂದ ಹೊರಟು ಪಾಣೆಮಂಗಳೂರು, ಬಿ.ಸಿ.ರೋಡು, ಮಂಗಳೂರಿನಲ್ಲಿ ಪ್ರವಾಸಿಗರನ್ನು ಹತ್ತಿಸಿಕೊಂಡು ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಬಳಿಕ ಜೋಗ ಜಲಪಾತಕ್ಕೆ ತೆರಳುತ್ತಿದ್ದರು.
* ತೊಕ್ಕೊಟ್ಟು: ಜೀಪು ಢಿಕ್ಕಿ; ಸ್ಕೂಟರ್ ಸವಾರ ಸಾವು
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯ ಸರ್ವೀಸ್ ರಸ್ತೆಯಲ್ಲಿ ಅತೀ ವೇಗದಲ್ಲಿ ಆಗಮಿಸಿದ ಜೀಪ್, ಸ್ಕೂಟರ್ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾರೆ. ಸಹ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅರುಣ್ ಅವರು ತೊಕ್ಕೊಟ್ಟು ಕಾಪಿಕಾಡಿನ ವೈನ್ ಆ್ಯಂಡ್ ಡೈನ್ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ವೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ರಾತ್ರಿ ಕೆಲಸ ಮುಗಿಸಿ ತನ್ನ ಸ್ಕೂಟರ್ನಲ್ಲಿ ಬಾರ್ನ ಸ್ವಚ್ಛತಾ ಸಿಬಂದಿ ರಾಣಿಪುರ ನಿವಾಸಿ ಹೇಮಾವತಿಯವರನ್ನು ಕುಳ್ಳಿರಿಸಿಕೊಂಡು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮನೆಗೆ ಹಿಂದಿರುಗುವಾಗ ಜೀಪ್ ಮುಖಾಮುಖೀ ಢಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಅರುಣ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಜೀಪ್ ಚಾಲಕ ಉಳ್ಳಾಲಬೈಲ್ ನಿವಾಸಿ ಶಶಾಂಕ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅರುಣ್ ತಂದೆ, ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮನೆಗೆ ಇವರೊಬ್ಬರೇ ಆಧಾರಸ್ಥಂಭವಾಗಿದ್ದು, ತಂದೆ, ತಾಯಿ ಅನಾರೋಗ್ಯದಲ್ಲಿದ್ದು, ಇವರೇ ಆರೈಕೆ ಮಾಡುತ್ತಿದ್ದರು.