– ಸಹಕಾರಿ ಸಂಘದ ಅಧ್ಯಕ್ಷರ ಪತ್ನಿ ನೀರಿನ ತೊಟ್ಟಿಗೆ ಬಿದ್ದು ಸಾವು!
– ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ!
– ಆಡುತ್ತಿದ್ದ ಮಗುವನ್ನು ಎಳೆದುಕೊಂಡು ಹೋದ ಬೀದಿ ನಾಯಿಗಳು!
– ಬಾಡಿಗೆ ಮನೆಯಿಂದ ನಗದು ಕಳವು!
NAMMUR EXPRESS NEWS
ಪುತ್ತೂರು : ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿಯ ಮೃತದೇಹ ಮನೆ ಸಮೀಪದ ನೀರಿನ ತೊಟ್ಟಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರ ಪತ್ನಿ ಶುಭಲಕ್ಷ್ಮೀ (50) ಎಂದು ಗುರುತಿಸಲಾಗಿದೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮನೆಯ ಗುಡ್ಡದ ಮೇಲೆ ಮಣ್ಣಿನ ಟ್ಯಾಂಕಿ ನಿರ್ಮಿಸಿ ಅದಕ್ಕೆ ಟಾರ್ಪಾಲು ಹಾಕಿ ನೀರು ನಿಲ್ಲಿಸಿದ್ದ ತೊಟ್ಟಿಯಲ್ಲಿ ಅವರ ಶವ ಪತ್ತೆಯಾಗಿತ್ತು.
ಗುಡ್ಡದ ಮೇಲೆ ಹೋದ ಶುಭಲಕ್ಷ್ಮೀ ಅವರು ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಈ ನೀರಿನ ತೊಟ್ಟಿಗೆ ಬಿದ್ದಿದ್ದು, ಆ ಭಾಗದಲ್ಲಿ ಯಾರೂ ಇಲ್ಲದ ಕಾರಣ ನೀರಿನ ತೊಟ್ಟಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತರು ಪತಿ, ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಗೋಪಾಲಕೃಷ್ಣ ಹೇರಳೆ, ಸಾಜ ರಾಧಾಕೃಷ್ಣ ಆಳ್ವ ಶಶಿಕುಮಾರ್ ರೈ ಬಾಳ್ಕೊಟ್ಟು, ಅಪ್ಪಯ್ಯ ಮಣಿಯಾಣಿ, ಡಾ.ಪ್ರಸಾದ್ ಭಂಡಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜೀವಂದರ್ ಜೈನ್ ಮತ್ತಿತರು ಭಾಗವಹಿಸಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಬೈಕ್ ಮತ್ತು ಸ್ಕೂಟರ್ ನಡುವೆ ಅಪಘಾತ!
ಮಂಗಳೂರು : ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಂಪತಿ ಸ್ಕೂಟರ್ನಲ್ಲಿ ಹಿಂದಿರುಗುತ್ತಿದ್ದಾಗ ಸ್ಕೂಟರ್ಗೆ ಕಾರು ಡಿಕ್ಕಿ ಹೊಡೆದ ಘಟನೆ ಮರೋಳಿಯ ಬಳಿ ನಡೆದಿದೆ. ಗಾಯಗೊಂಡವರು ಬಜ್ಜಿ ಅದ್ಯಪಾಡಿ ನಿವಾಸಿ ಹನೀಫ್ ಮತ್ತು ಅವರ ಪತ್ನಿ ರಮ್ಲತ್ ಎಂದು ತಿಳಿದು ಬಂದಿದೆ. ಸ್ಕೂಟರ್ ಸವಾರ ಮುಹಮ್ಮದ್ ಹನೀಫ್ (45) ಗಂಭೀರ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಇಬ್ಬರನ್ನೂ ನಗರದ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬಜೈ ಸಮೀಪದ ಅದ್ಯಪಾಡಿಯ ಮುಹಮ್ಮದ್ ಹನೀಫ್ ತುಂಬೆಯಿಂದ ನಂತೂರು ಕಡೆಗೆ ಪತ್ನಿ ರಮ್ಲತ್ ಜೊತೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಇದರಿಂದ ಸ್ಕೂಟರ್ ಮುಂದಿನಿಂದ ಚಲಿಸುತ್ತಿದ್ದ ಇನ್ನೊಂದು ಕಾರಿಗೂ ಬಡಿದಿದೆ ಎನ್ನುವ ಮಾಹಿತಿ ಇದೆ. ತುಂಬೆಯಲ್ಲಿ ನಡೆದ ತನ್ನ ಅಣ್ಣನ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ನಿಯ ಜೊತೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಆಡುತ್ತಿದ್ದ ಮಗುವನ್ನು ಎಳೆದುಕೊಂಡು ಹೋದ ಬೀದಿ ನಾಯಿಗಳು!
ಕಾಸರಗೋಡು: ಮನೆಯ ಅಂಗಳದಲ್ಲಿ ಆಟ ಆಡುತ್ತಿದ್ದ ಒಂದೂವರೆ ವರ್ಷದ ಮಗುವನ್ನು ಬೀದಿ ನಾಯಿಗಳ ಹಿಂಡು ಕಚ್ಚಿ ಎಳೆದುಕೊಂಡು ಹೋದ ಘಟನೆ ಪಡನ್ನದಲ್ಲಿ ನಡೆದಿದೆ. ಪಡನ್ನ ವಡಕ್ಕೇಪುರತ್ತೆ ಮಣ್ಣಾತಿಗೆ ಸಮೀಪದ ಫಾಬಿನಾ – ಸುಲೈಮಾನ್ ದಂಪತಿ ಪುತ್ರ ಬಶೀರ್ (1.5) ಮನೆ ಅಂಗಳದಲ್ಲಿ ಆಡುತ್ತಿದ್ದಾಗ ನಾಯಿಗಳು ಎಳೆದುಕೊಂಡು ಹೋಗಿವೆ. ಮಗುವಿನ ಅಳು ಆಲಿಸಿದ ಮನೆಯವರು ಓಡಿ ಬಂದಾಗ ನಾಯಿಗಳು ಪರಾರಿಯಾಗಿವೆ. ಮಗುವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ಪ್ರದೇಶದಲ್ಲಿ ಬೀದಿನಾಯಿಗಳು ಇಬ್ಬರು ಮಕ್ಕಳು ಮತ್ತು ಓರ್ವ ಮಹಿಳೆಯನ್ನು ಕಚ್ಚಿ ಗಾಯಗೊಳಿಸಿವೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಡಿಗೆ ಮನೆಯಿಂದ ನಗದು ಕಳವು!
ಮಂಗಳೂರು: ಜಾರ್ಜ್ ಮಾರ್ಟಿಸ್ ರೋಡ್ ಸಮೀಪದ ಬಾಡಿಗೆ ಮನೆಯಿಂದ ನಗದು ಹಣ ಮತ್ತು ಬೆಳ್ಳಿಯ ಸೊತ್ತುಗಳನ್ನು ಕಳೆದುಕೊಂಡ ಘಟನೆ ನಡೆದಿದೆ ಬಾಡಿಗೆ ಮನೆಯಲ್ಲಿದ್ದವರು ಡಿ. 14ರಂದು ಮೈಸೂರಿಗೆ ತೆರಳಿ ಜ. 16ರಂದು ಮನೆಗೆ ಬಂದಾಗ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕರ್ನಲ್ಲಿ 70,000 ರೂ. ನಗದು, ವಾರ್ಡ್ ರೋಬ್ ನ ಸೂಟ್ಕೇಸ್ ನಲ್ಲಿ 2 ಬೆಳ್ಳಿಯ ಬಟ್ಟಲು, 1 ಬೆಳ್ಳಿ ಕಲಶ, 1 ಬೆಳ್ಳಿ ಚಮಚ, 1 ಬೆಳ್ಳಿ ಕಪ್, 20 ಬೆಳ್ಳಿ ನಾಣ್ಯಗಳು, ಬೆಳ್ಳಿಸರ, ಬೆಳ್ಳಿಯ ದೀಪ ಸಹಿತ ಸುಮಾರು 56,000 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.