ಹೆಜ್ಜೇನು ದಾಳಿ ವ್ಯಕ್ತಿ ಸಾವು: ಮಗುವಿನ ಸ್ಥಿತಿ ಗಂಭೀರ!
– ಕುಂದಾಪುರದಲ್ಲಿ ಜೇನಿನ ಗೂಡಿಗೆ ಡಿಕ್ಕಿ ಹೊಡೆದ ಹದ್ದು: ಕೆರಳಿದ ಜೇನು
– ಬೆಳ್ತಂಗಡಿ: ಮರ ಕಡಿಯುವ ಯಂತ್ರಕ್ಕೆ ಕುತ್ತಿಗೆ ಸಿಕ್ಕಿ ಓರ್ವನ ಸಾವು!
– ಬೆಳ್ತಂಗಡಿ: ಕರಿಮಣಿ ಸರ ಕಳ್ಳತನ ಮಾಡಿದ ಕಳ್ಳಿಯರು!
NAMMUR EXPRESS NEWS
ಕುಂದಾಪುರ: ಹೆಜ್ಜೇನು ಗೂಡಿಗೆ ಹದ್ದು ದಾಳಿ ನಡೆಸಿದ ಪರಿಣಾಮ ಚೆಲ್ಲಾಪಿಲ್ಲಿಯಾದ ಹುಳುಗಳು ಸುತ್ತಮುತ್ತಲಿದ್ದ ಜನರ ಮೇಲೆ ದಾಳಿ ಮಾಡಿ, ಒಬ್ಬ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ಬನ್ನೂರು ಎಂಬಲ್ಲಿ ಬುಧವಾರ ನಡೆದಿದೆ. ಹುಳುವಿನ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಯನ್ನು ಸ್ಥಳೀಯ ಬನ್ನೂರು ನಿವಾಸಿ, ಐಡಿಯಲ್ ಇಲೆಕ್ಟಿಕಲ್ಸ್ ನ ಜೀವನ ನಾಯಕ್ (72) ಎಂದು ಗುರುತಿಸಲಾಗಿದೆ. ಜೀವನ್ ನಾಯಕ್ ಗೆ ಸುಮಾರು ಹಲವು ಕಣಜದ ಹುಳುಗಳು ಕಚ್ಚಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬನ್ನೂರಿನ ಬಿಎಸ್ಎನ್ಎಲ್ ಕಚೇರಿಯ ಹಿಂಬದಿಯಲ್ಲಿ ಇದ್ದ ಮರದಲ್ಲಿ ಬೃಹತ್ ಗಾತ್ರದ ಕಣಜದ ಗೂಡಿತ್ತು. ಈ ಗೂಡಿಗೆ ಹದ್ದೊಂದು ದಾಳಿ ನಡೆಸಿದ ಪರಿಣಾಮ ಬನ್ನೂರು ಪೇಟೆಯಲ್ಲಿದ್ದ ಸಾರ್ವಜನಿಕರ ಮತ್ತು ಸ್ಥಳೀಯವಾಗಿ ನಿಲ್ಲಿಸಿದ್ದ ರಿಕ್ಷಾ ಚಾಲಕರ ಮೇಲೆ, ಅಲ್ಲಿಯೇ ಸಮೀಪದಲ್ಲಿದ್ದ ಕ್ಲಿನಿಕ್ಕಿಗೆ ಬಂದಿದ್ದ ರೋಗಿಗಳ ಮೇಲೆ ದಾಳಿ ನಡೆಸಿವೆ. ಇದೇ ಸಂದರ್ಭ ಪುಟ್ಟ ಮಗುವಿಗೂ ಹುಳಗಳು ಕಚ್ಚಿದ್ದು ಮಗು ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮರ ಕಡಿಯುವ ಯಂತ್ರಕ್ಕೆ ಕುತ್ತಿಗೆ ಸಿಕ್ಕಿ ಓರ್ವನ ಸಾವು!
ಬೆಳ್ತಂಗಡಿ: ಮರ ಕಡಿಯುವಾಗ ಆಯತಪ್ಪಿ ಕೆಳಗೆ ಬಿದ್ದು ಚಾಲನಾ ಸ್ಥಿತಿಯಲ್ಲಿದ್ದ ಮರ ಕೊಯ್ಯುವ ಯಂತ್ರ ಕುತ್ತಿಗೆಗೆ ತಾಗಿ ವ್ಯಕ್ತಿಯೊಬ್ಬರು ಇಲ್ಲಿನ ಸಾವ್ಯ ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ಎಂಬುವವರು ಮರ ಕಡಿಯುವ ಕಟ್ಟಿಂಗ್ ಮಷಿನ್ ಮೂಲಕ ಮರ ಕಡಿಯುತ್ತಿದ್ದರು. ಮರದ ಮೇಲಿದ್ದ ಪ್ರಶಾಂತ್ ಪೂಜಾರಿ ಕಟ್ಟಿಂಗ್ ಮಷಿನ್ ಜೊತೆಗೇ ಕೆಳಗೆ ಬಿದ್ದಾಗ, ಯಂತ್ರದ ಗರಗಸ ಕುತ್ತಿಗೆಗೆ ತಾಗಿ ತೀವ್ರ ರಕ್ತಸ್ರಾವ ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗಿನ ಜಾವ ಮೃತಪಟ್ಟಿದ್ದಾರೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಮೋದ್ ದೂರು ನೀಡಿದ್ದಾರೆ.
ಬೆಳ್ತಂಗಡಿ: ಕರಿಮಣಿ ಸರ ಕಳ್ಳತನ ಮಾಡಿದ ಕಳ್ಳಿಯರು!
ಬೆಳ್ತಂಗಡಿ: ಉದ್ಯೋಗಿ ಒಬ್ಬರು ಸರಕಾರಿ ಬಸ್ಗೆ ಹತ್ತುವಾಗ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ತಮಿಳುನಾಡು ರಾಜ್ಯದ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಕಾರಿ ಉದ್ಯೋಗಿಯಾಗಿರುವ ವಾರಿಜಾ ಅವರು ಡಿ.12ರಂದು ಸರಕಾರಿ ಬಸ್ ಹತ್ತುವ ವೇಳೆ 24 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ ಪ್ರಕರಣದ ತನಿಖೆ ನಡೆಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಉಪ ನಿರೀಕ್ಷಕ ಚಂದ್ರಶೇಖರ್ ಮತ್ತು ತಂಡದ ಪೊಲೀಸರು ತಮಿಳುನಾಡು ರಾಜ್ಯದ ತಿರುಪುರ್ ಜಿಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30)ರನ್ನು ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಡಿ.20ರಂದು ಮಧ್ಯಾಹ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ ಕರಿಮಣಿ ಸರವನ್ನು ಪೊಲೀಸರಿಗೆ ನೀಡಿದ್ದಾರೆ.
ಆರೋಪಿಗಳ ಮೇಲೆ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ಹಲವು ಕಡೆ ಕಳ್ಳತನ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಮೂಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳನ್ನು ಸಂಜೆ ನ್ಯಾಯಾಧೀಶರ ಬಳಿ ಹಾಜರುಪಡಿಸಿದ್ದು ಇಬ್ಬರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.