ಮನೆಗೆ ಬಂದು ಮಗು ಅಪಹರಣಕ್ಕೆ ಯತ್ನಿಸಿದ ಇಬ್ಬರು ಹೆಂಗಸರು!
– ಬ್ರಹ್ಮಾವರದಲ್ಲಿ ನಡೆದ ಘಟನೆ
– ಕಾರ್ಕಳ:ಬೈಕ್ ಸ್ಕಿಡ್ ಓರ್ವನ ಸಾವು
– ಕಡಬ: ಮಹಿಳೆ ಮೇಲೆ ಕಾಡು ಹಂದಿ ದಾಳಿ
– ಬೈಂದೂರು: ಮಾರಕಾಸ್ತ್ರರ ಹಿಡಿದು ದರೋಡೆಗೆ ಯತ್ನ
NAMMUR EXPRESS NEWS
ಬ್ರಹ್ಮಾವರ: ಮನೆಗೆ ಬಂದ ಇಬ್ಬರು ಅಪರಿಚಿತರು ಮಹಿಳೆಯರು ಮನೆಯಲ್ಲಿದ್ದ 1 ವರ್ಷ ಮಗುವನ್ನು ಅಪಹರಿಸಲು ಯತ್ನಿಸಿದ್ದಾರೆ ಈ ಘಟನೆ ಬ್ರಹ್ಮಾವರದ ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ. ಬೆಳಿಗ್ಗೆ ಉಪ್ಪಿನಕೋಟಿಯ ಮಹಿಮಾ ಎಂಬವರ ಮನೆಗೆ ಬಂದ ಇಬ್ಬರು ಅಪರಿಚಿತ ಹೆಂಗಸರು ತಾವು ಬಾಂಬೆಯಿಂದ ಬಂದವರು. ಜೊತೆಗೆ ಮನೆಯವರ ವಿರೋಧದ ನಡುವೆಯೂ ಸೀದಾ ಮನೆಯೊಳಗೆ ಬಂದು ಮಹಿಮಾ ಅವರ 1 ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಮೊಬೈಲಿನಲ್ಲಿರುವ ವಿಡಿಯೋಗಳನ್ನು ತೋರಿಸುತ್ತಾ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಮಹಿಮಾ ಅವರ ಅಣ್ಣ ಬಂದಿದ್ದನ್ನು ನೋಡಿದ ಆರೋಪಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಬೈಕ್ ಸ್ಕಿಡ್ ಓರ್ವನ ಸಾವು
ಕಾರ್ಕಳ : ದೂಪದಕಟ್ಟೆ ಸಮೀಪ ಪರ್ಪಲೆ ಕೆಇಬಿ ಬಳಿ ಬೈಕೊಂದು ಸ್ಕಿಡ್ ಆಗಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ. 22ರಂದು ಸಂಭವಿಸಿದೆ. ಬೈಕ್ ಸ್ಕಿಡ್ ಆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರು ನಿಟ್ಟೆ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಎನ್ನಲಾಗುತ್ತಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
ಮಹಿಳೆ ಮೇಲೆ ಕಾಡು ಹಂದಿ ದಾಳಿ
ಕಡಬ: ರಬ್ಬರ್ ತೋಟಕ್ಕೆ ಟ್ಯಾಪಿಂಗ್ ಮಾಡಲು ಹೋಗಿದ್ದ ಮಹಿಳೆಗೆ ಕಾಡುಹಂದಿಯೊಂದು ತಿವಿದು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಸಂಭವಿಸಿದೆ.ಈ ಒಂದು ಘಟನೆಯು ಸುಳ್ಯ ತಾಲೂಕು ದುಗಲಡ್ಕ ಕೂಟೇಲು ಎಂಬಲ್ಲಿ ನಡೆದಿದ್ದು ಅಲ್ಲಿಯ ನಿವಾಸಿ ಪದ್ಮಾವತಿ ಎಂಬವರು ಕೆ.ಎಫ್.ಡಿ.ಸಿ. ರಬ್ಬರ್ ತೋಟದ ಟ್ಯಾಪರ್ ಆಗಿದ್ದು ಅವರು ಫೆ. 22 ರಂದು ಮುಂಜಾನೆ ದುಗಲಡ್ಕ ಘಟಕದ ಕೂಟೇಲು ಪಿಲಿಕಜೆ ಎಂಬಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುತ್ತಿರುವಾಗ ಪೊದೆಯಲ್ಲಿದ್ದ ಕಾಡುಹಂದಿ ಏಕಾಏಕಿ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ಭಯಭೀತರಾಗಿ ಓಡಿದ ಮಹಿಳೆಯನ್ನು ಬೆನ್ನಟ್ಟಿದ ಕಾಡುಹಂದಿ ಅವರು ಬಿದ್ದಾಗ ಬೆನ್ನು ಮತ್ತಿತರೆಡೆಗೆ ಕಚ್ಚಿ ತೀವ್ರ ಗಾಯಗೊಳಿಸಿದೆ ಎಂದು ವರದಿಯಾಗಿದ್ದು ವಿಷಯ ತಿಳಿದ ಇತರ ಟ್ಯಾಪರ್ ಗಳು ಕೆ.ಎಫ್.ಡಿ.ಸಿ. ಅಧಿಕಾರಿಗಳಿಗೆ ತಿಳಿಸಿದ ಕೂಡಲೇ ಅವರು ವಾಹನ ತಂದು, ನಿಗಮದ ಸಿಬ್ಬಂದಿ, ಊರಿನವರು ಮತ್ತು ಬಂಧುಗಳು ಸೇರಿ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾರಕಾಸ್ತ್ರರ ಹಿಡಿದು ದರೋಡೆಗೆ ಯತ್ನ
ಬೈಂದೂರು: ಮಾರಕಾಸ್ತ್ರಗಳನ್ನು ಹಿಡಿದುಕೊಂಡು ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ನೋಡಿದಾಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಬರುತ್ತಿರುವ ಸಾರ್ವಜನಿಕ ವಾಹನಗಳನ್ನು ನಿಲ್ಲಿಸಲು ಯತ್ನಿಸುತ್ತಿದ್ದ 7 ಜನರ ಚಲನವಲನಗಳನ್ನು ಗಮನಿಸಿದಾಗ ಅನುಮಾನಗೊಂಡಿದ್ದು, ಅಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ನಡೆದಿದ್ದ ಪ್ರಕರಣಗಳಲ್ಲಿ ಭಾಗಿಯಾದ ಚಾಳಿ ಬಿದ್ದ ಆರೋಪಿಗಳಂತೆ ಕಂಡು ಬಂದಿರುತ್ತದೆ.
ಈ ವೇಳೆ ಆರೋಪಿಗಳನ್ನು ಸುತ್ತುವರೆದು ಹಿಡಿಯಲು ಹೋದಾಗ ಆರೋಪಿಗಳ ಪೈಕಿ ಚಾರು ಯಾನೆ ಕಾರುಖ್, ಚಪ್ಪು ಯಾನೆ ಶಫಾನ್, ವಾಜೀದ್ ಮತ್ತು ನಿಶಾದ್ ಇವರು ಅಲ್ಲಿಂದ ಓಡಿ ಹೋಗಿದ್ದು, ಉಳಿದ ಮಹಮ್ಮದ್ ದ್ಯಾನೀಶ್ ಮದನಿ, ಮೊಹಮ್ಮದ್ ಕೈಫ್, ಮೊಹಮ್ಮದ್ ಅದ್ವಾನ್ ಎಂಬ ಮೂವರನ್ನು ಸಿಬ್ಬಂದಿಯವರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಈ ಬಗ್ಗೆ ವಿಚಾರಿಸಿದಾಗ ಆರೋಪಿತರು ತಾವು ಭಟ್ಕಳ ಕಡೆಯಿಂದ ಬರುವ ಸಾರ್ವಜನಿಕ ವಾಹನಗಳನ್ನು ತಡೆದು ದರೋಡೆ ಮಾಡಿ ಹಣ ಹಾಗೂ ಚಿನ್ನಾಭರಣವನ್ನು ಲೂಟಿ ಮಾಡಲು ಸಿದ್ಧತೆ ಮಾಡಿಕೊಂಡು ಕಾಯುತ್ತಿರುವುದಾಗಿ ತಿಳಿಸಿದ್ದಾರೆ. ಈ ವೇಳೆ ಪೊಲೀಸರು ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.