ಕರಾವಳಿ ಟಾಪ್ ನ್ಯೂಸ್
– ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು!
– ಕಾರ್ಕಳ: ಶಾಲಾ ಬಸ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಮೃತ!
– ಕೇರಳ: ಹಾಸ್ಟೆಲ್ ಬಾತ್ ರೂಂನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಜೀವಾಂತ್ಯ
– ಹೆಬ್ರಿ: ನಕ್ಸಲ್ ನಾಯಕ ಎನ್ ಕೌಂಟರ್ ಪ್ರಕರಣದ ತನಿಖೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು!!
NAMMUR EXPRESS NEWS
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ನಂಜರಾಯಪಟ್ಟಣ, ಹೊಸಪಟ್ಟಣ, ವಾಲ್ನೂರು, ತ್ಯಾಗತ್ತೂರು ಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕಾಗಿ ರೈಲ್ವೆ ಕಂಬಿಗಳ ಬೇಲಿಯನ್ನು ಅಳವಡಿಸಲಾಗಿದೆ. ಆದರೆ ಇದನ್ನು ಲೆಕ್ಕಿಸದ ಕಾಡಾನೆಗಳ ಹಿಂಡು ಬೇಲಿಯನ್ನೇ ಮುರಿದು ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಸೋಲಾರ್ ಬೇಲಿ ಮತ್ತು ಕಂದಕಗಳು ಕಾಡಾನೆಗಳು ನಾಡಿಗೆ ನುಗ್ಗುವುದನ್ನು ತಡೆಯುವಲ್ಲಿ ವಿಫಲವಾದ ಬೆನ್ನಲ್ಲೇ ರೈಲ್ವೆ ಕಂಬಿಗಳ ಬೇಲಿಯನ್ನು ನಿರ್ಮಿಸಲಾಯಿತ್ತಾದರೂ ಈ ತಂತ್ರಗಾರಿಕೆ ಕೂಡ ಈಗ ನಿಷ್ಪ್ರಯೋಜಕವಾಗಿದೆ. ಲಕ್ಷಾಂತರ ರೂ. ಖರ್ಚು ಮಾಡಿದ ರೈಲ್ವೆ ಕಂಬಿಯ ಬೇಲಿಗಳನ್ನು ಮುರಿದು ಒಳನುಗ್ಗುತ್ತಿರುವ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಫಸಲು ನಾಶ ಮಾಡುತ್ತಿವೆ.
ಹೊಸ ಪಟ್ಟಣ ಗ್ರಾಮ ವ್ಯಾಪ್ತಿಯ ತೋಟ ಮತ್ತು ಗದ್ದೆಗಳು ಕಾಡಾನೆಗಳಿಂದ ನಾಶವಾಗಿದೆ. ಹಿಂಡು ಹಿಂಡಾಗಿ ಕಾಡಾನೆಗಳು ಗ್ರಾಮದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ನಾಶವಾದ ಬೆಳೆಗೆ ಯಾವುದೇ ಪರಿಹಾರ ಕೂಡ ಸಿಗುತ್ತಿಲ್ಲ. ರೈಲ್ವೆ ಕಂಬಿಗಳ ಬೇಲಿ ಮುರಿದು ಹೋಗಿರುವ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
* ಕಾರ್ಕಳ: ಶಾಲಾ ಬಸ್ ಹಾಗೂ ಬೈಕ್ ನಡುವೆ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಮೃತ!
ಕಾರ್ಕಳ: ಕಾರ್ಕಳ ಜೋಡು ಕಟ್ಟೆಯ ಕಾರೋಲ್ ಗುಡ್ಡೆ ಬಳಿ ನ.23ರಂದು ಶಾಲಾ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟ ಘಟನೆ ವರದಿ ಆಗಿದೆ.ಅಜಿತ್ ದೇವಸ್ಥಾನ ಹಾಗೂ ಟೈಲ್ಸ್ ಹಾಕುವ ಕೆಲಸ ಮಾಡಿ ಕೊಂಡಿದ್ದ. ಬೆಳಿಗ್ಗೆ ಸುಮಾರು 7.30 ರ ಹೊತ್ತಿಗೆ ಕಾರ್ಕಳ ಖಾಸಗಿ ಶಾಲಾ ಬಸ್ ಮಕ್ಕಳನ್ನು ಕರೆ ತರಲು ಕಾರೋಲ್ ಗುಡ್ಡೆಗೆ ಹೋಗುತ್ತಿತ್ತು. ಈ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಅಜಿತ್ ಬೈಕ್ ನಿಯಂತ್ರಣ ಕಳೆದುಕೊಂಡು ಶಾಲಾ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
* ಕೇರಳ: ಹಾಸ್ಟೆಲ್ ಬಾತ್ ರೂಂನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಜೀವಾಂತ್ಯ
ಕೇರಳ : ಫಿಸಿಯೋಥೆರಪಿ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಎರ್ನಾಕುಲಂ ತೊಪ್ಪುಂಪಾಡಿ ಮೂಲದ ಆನ್ ಮರಿಯಾ ಮೃತ ದುರ್ದೈವಿಯಾಗಿದ್ದು, ಈಕೆ ತಾಲಿಪರಂನ ಲೂರ್ಡ್ಸ್ ಆಸ್ಪತ್ರೆಯಲ್ಲಿ ಅಂತಿಮ ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿನಿ.
ಕಣ್ಣೂರು ತಾಳಿಪರಂನ ಲೂರ್ಡ್ಸ್ ನರ್ಸಿಂಗ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಫಿಸಿಯೋಥೆರಪಿ ವಿದ್ಯಾರ್ಥಿನಿಯಾಗಿದ್ದ ಆನ್ ಮರಿಯಾ ನ.22ರಂದು ತರಗತಿ ಇದ್ದರೂ ಹಾಜರಾಗಿರಲಿಲ್ಲ. ಸಂಜೆ ತರಗತಿ ಮುಗಿದ ನಂತರ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ತೆರಲಿದಾಗ ಬಾತ್ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಘಟನೆಯ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ವಿಚಾರಣೆಯನ್ನು ಪೂರ್ಣಗೊಳಿಸಿ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಇದು ಆತ್ಮಹತ್ಯೆ ಎನ್ನಲಾಗಿದ್ದು, ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ ಮತ್ತು ತನಿಖೆ ಮುಂದುವರೆದಿದೆ. ಎರಡು ದಿನಗಳ ಹಿಂದೆಯಷ್ಟೇ ಪತ್ತನಂತಿಟ್ಟದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ಅಮ್ಮು ಸಜೀವನ್ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ಕಣ್ಣೂರಿನ ಹಾಸ್ಟೆಲ್ನ ವಾಶ್ ರೂಂನಲ್ಲಿ ಫಿಸಿಯೋಥೆರಪಿ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
* ಹೆಬ್ರಿ: ನಕ್ಸಲ್ ನಾಯಕ ಎನ್ ಕೌಂಟರ್ ಪ್ರಕರಣದ ತನಿಖೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು!!
ಹೆಬ್ರಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ಪೀತುಬೈಲ್ ಎಂಬಲ್ಲಿ ನಡೆದ ನಕ್ಸಲ್ ನಾಯಕ ವಿಕ್ರಂ ಗೌಡನ ಎನ್ ಕೌಂಟರ್ ಪ್ರಕರಣದ ತನಿಖೆಯ ಕುರಿತಾಗಿ ಘಟನೆ ನಡೆದ ಸ್ಥಳದ ನಿವಾಸಿ ಜಯಂತ್ ಗೌಡ ಅವರನ್ನು ಹೆಬ್ರಿ ಪೊಲೀಸರು ವಿಚಾರಣೆಗೆ ವಶಪಡಿಸಿಕೊಂಡಿದ್ದು, ಈ ಕುರಿತು ಗ್ರಾಮಸ್ಥರು ವಿರೋಧಿಸಿ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ನ.22ರಂದು ನಡೆದಿದೆ. ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ನ. 22ರಂದು ಬೆಳಗ್ಗೆ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಆತನನ್ನು ವಶಪಡಿಸಿಕೊಂಡು ಹೆಬ್ರಿ ಠಾಣೆಗೆ ಕರೆ ತಂದಿದ್ದಾರೆ. ಈ ಬಗ್ಗೆ ಆತ ಅಮಾಯಕ ಆತನಿಗೆ ಏನು ತಿಳಿದಿಲ್ಲ ಅಂತವನನ್ನು ಯಾಕೆ ಠಾಣೆಗೆ ಕರೆದುಕೊಂಡು ಬಂದಿದ್ದೀರಿ ಅಲ್ಲಿಯ ವಿಚಾರಿಸಬಹುದಿತ್ತಲ್ಲ ಎಂದು ಮಲೆಕುಡಿಯ ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ಠಾಣಾಧಿಕಾರಿ ಅವರಲ್ಲಿ ಮನವಿ ಮಾಡಿ ಆತನನ್ನು ಕೂಡಲೇ ಬಿಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಠಾಣಾಧಿಕಾರಿ ಮಹೇಶ್ ಟಿ. ಮೇಲಾಧಿಕಾರಿಗಳಲ್ಲಿ ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.