– ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ: ಮೂವರು ವಶಕ್ಕೆ
– ಸಿದ್ದಾಪುರ: ಕೋಳಿ ಅಂಕಕ್ಕೆ ದಾಳಿ
– ವ್ಯಾನ್ನಡಿ ಬಿದ್ದು ಸ್ಕೂಟರ್ ಸವಾರ ಸಾವು
– ಆನ್ಲೈನ್ ಆ್ಯಪ್ ನಲ್ಲಿ ಲಕ್ಷ ಲಕ್ಷ ಕಳೆದುಕೊಂಡ ಮಹಿಳೆ: ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ!
NAMMUR EXPRESS NEWS
ಉಡುಪಿ: ಬ್ರಹ್ಮಗಿರಿ ಜಂಕ್ಷನ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಎಸ್. ಗೌತಮ್ (24), ಕುಕ್ಕಿಕಟ್ಟೆ ಮೀನು ಮಾರುಕಟ್ಟೆಯ ಬಳಿ ಗೌರವ ಜೆ. (26), ಶಾಂತಿನಗರದ ಬಳಿ ಜಗದೀಶ್ (31)ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಫಾರೆನ್ಸಿಕ್ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಉಡುಪಿ ಸೆನ್ ಹಾಗೂ ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸಿದ್ದಾಪುರ: ಅಮಾಸೆಬೈಲು ಗ್ರಾಮದ ಕೆಲಾ ಹೆಗ್ಗೋಡ್ಲು ಎನ್ನುವಲ್ಲಿ ಕೋಳಿ ಅಂಕ ನಡೆಯುತ್ತಿರುವ ಪ್ರದೇಶಕ್ಕೆ ಡಿ. 23ರಂದು ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ, ಆರೋಪಿಗಳನ್ನು ಮತ್ತು ಕೋಳಿಗಳನ್ನು ವಶಕ್ಕೆ ಪಡೆದರು. ಆರೋಪಿಗಳಾದ ರವೀಂದ್ರ, ರತ್ನಾಕರ, ಆನಂದ, ರಾಘವೇಂದ್ರ ಅವರನ್ನು ವಶಕ್ಕೆ ಪಡೆದಿದ್ದಾರೆ. 4 ಹುಂಜ, ನಗದು 810 ರೂ. ಮತ್ತು ಕೋಳಿ ಅಂಕಕ್ಕೆ ಬಳಸಿದ ಪರಿಕರಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ಟು ಮೌಲ್ಯ 3,410 ರೂ. ಎಂದು ಅಂದಾಜಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಂಗಳೂರು: ಟೂರಿಸ್ಟ್ ವ್ಯಾನ್ನಡಿ ಬಿದ್ದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ಅರ್ಕುಳ ದ್ವಾರದ ಬಳಿ ಸಂಭವಿಸಿದೆ. ಬಿ.ಸಿ. ರೋಡ್ ನಿವಾಸಿ ಹಂಝ (47) ಮೃತಪಟ್ಟವರು. ರವಿವಾರ ಬೆಳಗ್ಗೆ ಹಂಝ ಮತ್ತು ಅವರ ಪತ್ನಿ ಫಾತಿಮಾ ಸ್ಕೂಟರ್ನಲ್ಲಿ ಬಿ.ಸಿ. ರೋಡ್ನಿಂದ ಅವರ ತಾಯಿ ಮನೆಯಾದ ಮಂಗಳೂರಿಗೆ ಬರುತ್ತಿದ್ದರು. ಈ ವೇಳೆ ಪಿಕಪ್ ವಾಹನವೊಂದು ಸ್ಕೂಟರ್ಗೆ ಢಿಕ್ಕಿಯಾಯಿತು. ಆಗ ಫಾತಿಮಾ ಎಡಭಾಗಕ್ಕೆ ಹಾಗೂ ಹಂಝ ವಾಹನದ ಬಲಭಾಗಕ್ಕೆ ಬಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಟೂರಿಸ್ಟ್ ವ್ಯಾನ್ ಹಂಝ ಅವರ ಮೇಲೆಯೇ ಹಾದು ಹೋಗಿದೆ.
ಪರಿಣಾಮವಾಗಿ ಹಂಝ ಮೃತಪಟ್ಟಿದ್ದಾರೆ. ಫಾತಿಮಾ ಗಾಯಗೊಂಡಿದ್ದಾರೆ
ಬಂಟ್ವಾಳ : ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಎಂಬುವವರ ಪತ್ನಿ ವೀಟಾ ಮರಿನಾ ಡಿಸೋಜ(32) ಮೃತ ಮಹಿಳೆ. ಮಕ್ಕಳು ಇಲ್ಲ ಎಂಬ ಕೊರಗಿನ ಜತೆಗೆ ಆರ್ಥಿಕ ಸಂಕಷ್ಟದಿಂದ ಅವರು ಕೈಗೊಂಡ ನಿರ್ಧಾರದಿಂದ ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಅವರು ಹಣ ದ್ವಿಗುಣಗೊಳಿಸುವ ಆ್ಯಪ್ ನಲ್ಲಿ 21 ಲಕ್ಷ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ವೀಟಾ ಶನಿವಾರ ರಾತ್ರಿ 9 ಗಂಟೆ ಹೊತ್ತಿಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿ, ಬಳಿಕ ನಾಪತ್ತೆಯಾಗಿದ್ದರು. ವಿಷಯ ತಿಳಿದು ಸ್ಥಳೀಯರು ಹುಡುಕಾಡಿದಾಗ ಫಲ್ಗುಣಿ ನದಿಯ ಸೇತುವೆಯಲ್ಲಿ ಅವರ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದ್ದು, ಭಾನುವಾರವೂ ಹುಡುಕಾಟ ಮುಂದುವರಿದಿತ್ತು. ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟಿನ ಬಳಿ ಮೃತದೇಹ ಪತ್ತೆಯಾಗಿದೆ. ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವೀಟಾ ಬಳಿಕ ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿದ್ದರು. ಬಂಟ್ವಾಳ ಗ್ರಾಮಾಂತರ ಠಾಣೆ ಮಹಿಳಾ ಎಸ್ಐ ಭಾರತಿ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.