ಸಾಂಸ್ಕೃತಿಕ ಹಬ್ಬ ಆಳ್ವಾಸ್ ವಿರಾಸತ್!
– ಡಿ.14ರಿಂದ 17ರವರೆಗೆ ಆಳ್ವಾಸ್ ವಿರಾಸತ್
– ಸಾಂಸ್ಕೃತಿಕ ರಥ, ರಥಾರತಿ, ಬೃಹತ್ ಪ್ರದರ್ಶನ ಮಳಿಗೆಗಳು
– ರಾಜ್ಯಪಾಲರಿಂದ ಉದ್ಘಾಟನೆ: ಏನೇನಿದೆ ವಿಶೇಷ?
– 3 ಸಾವಿರಕ್ಕೂ ಅಧಿಕ ಕಲಾವಿದರು ಭಾಗಿ
NAMMUR EXPRESS NEWS
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಈ ಸಾಲಿನ ಆಳ್ವಾಸ್ ವಿರಾಸತ್-2023 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಡಿ.14ರಿಂದ 17ರವರೆಗೆ ಮೂಡುಬಿದಿರೆಯಲ್ಲಿ ಸಪ್ತಮೇಳಗಳ ಮೆರುಗಿನೊಂದಿಗೆ ನಡೆಯಲಿದೆ. ಪುತ್ತಿಗೆ ಗ್ರಾಮದ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ನಡೆಯಲಿರುವ ವಿರಾಸತ್ ಅನ್ನು ಇತ್ತೀಚೆಗೆ ಹುತಾತ್ಮರಾದ ವೀರಯೋಧ ಕ್ಯಾ.ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಣೆ ಮಾಡಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾಹಿತಿ ನೀಡಿ, ಡಿ.14ರಂದು ಸಂಜೆ ರಾಜ್ಯಪಾಲ ಥಾವರ್ಚಂದ್ ಗೆಲ್ಲೋಟ್ ವಿರಾಸತ್ ಉದ್ಘಾಟಿಸುವರು. ಸಂಜೆ 6.35ಕ್ಕೆ ಮೆರವಣಿಗೆ ನಡೆಯಲಿದೆ. 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳ 3 ಸಾವಿರಕ್ಕೂ ಅಧಿಕ ಕಲಾವಿದರು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು. ಡಿ.15ರಂದು ಸಂಜೆ 6ರಿಂದ 8ರ ವರೆಗೆ ಚಲನಚಿತ್ರ ಹಿನ್ನೆಲೆ ಗಾಯಕ ಬೆನ್ನಿ ದಯಾಲ್ ಅವರಿಂದ ಗಾನ ವೈಭವ, ಡಿ.16ರಂದು ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರಿಂದ ಭಾವ ಲಹರಿ ನಡೆಯಲಿದೆ ಎಂದು ತಿಳಿಸಿದರು.
ಮೂವರಿಗೆ ವಿರಾಸತ್ ಪ್ರಶಸ್ತಿ
ಡಿ. 17ರಂದು ಸಂಜೆ ಆಳ್ವಾಸ್ ವಿರಾಸತ್-2023 ಪ್ರಶಸ್ತಿ ಪ್ರದಾನ ನಡೆಯಲಿದೆ. ವಯಲಿನ್ ವಾದಕ ಡಾ.ಮೈಸೂರು ಮಂಜುನಾಥ್, ಬಾನ್ಸುರಿ ಮಾಂತ್ರಿಕ ಡಾ. ಪ್ರವೀಣ್ ಗೋಲ್ಕಿ0ಡಿ, ಹಾಗೂ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಈ ಮೂವರಿಂದ ತಾಳ-ವಾದ್ಯ- ಸಂಗೀತ, ರಾತ್ರಿ ವಿಜಯಪ್ರಕಾಶ್ ಅವರಿಂದ ಸಂಗೀತ ರಸ ಸಂಜೆ ನಡೆಯಲಿದೆ. 9.30ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಇರಲಿದೆ.
750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ, ಮಾರಾಟ
ವಿರಾಸತ್ನಲ್ಲಿ ಬೆಳಗ್ಗೆ 9ರಿಂದ ರಾತ್ರಿ 1ರ ವರೆಗೆ ಅನ್ವೇಷಣಾತ್ಮಕ ಕೃಷಿಕ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಮುಂಡ್ರುದೆಗುತ್ತು ಕೆ.ಅಮರನಾಥ ಶೆಟ್ಟಿ (ಕೃಷಿಸಿರಿ) ಆವರಣದಲ್ಲಿ ನಡೆಯುವ 7 ಮೇಳಗಳ 750ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟ ಮೇಳ ವಿಶೇಷ ಆಕರ್ಷಣೆಯಾಗಿದೆ. ಮೊದಲ ಬಾರಿಗೆ ಸಾಂಸ್ಕೃತಿಕ ಮೆರವಣಿಗೆಯ ಬಳಿಕ ಸಾಂಸ್ಕೃತಿಕ ರಥ ಹಾಗೂ ಅದಕ್ಕೆ ವಾರಾಣಸಿಯ 10 ಮಂದಿಯ ತಂಡದಿಂದ ರಥಾರತಿ ಸಲ್ಲಿಕೆ ಈ ಸಲದ ವಿರಾಸತ್ ವಿಶೇಷತೆಯಾಗಿದೆ. ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಮೇಳ, ಚಿತ್ರಕಲಾ ಮೇಳ, ಕಲಾಕೃತಿಗಳ ಪ್ರದರ್ಶನ ಹಾಗೂ ಛಾಯಾಚಿತ್ರಗಳ ಪ್ರದರ್ಶನ ಎಂಬ ಸಪ್ತಮೇಳಗಳನ್ನು ಹಮ್ಮಿಕೊಳ್ಳಲಾಗುವುದು.