ಎಸಿ ದಂಪತಿಗಳ ಜೀವ ತೆಗೆಯಿತೇ?
– ಉಡುಪಿಯಲ್ಲಿ caboose_ballals ಖ್ಯಾತಿಯ ಅಶ್ವಿನಿ ಶೆಟ್ಟಿ ಚಿಕಿತ್ಸೆ ಫಲಿಸದೆ ಸಾವು: ಎಲ್ಲೆಡೆ ಸಂತಾಪ
– ಮನೆಯಲ್ಲಿ ಅಳವಡಿಸಿದ್ದ ಸೆಂಟ್ರಲ್ ಎಸಿಯಿಂದಾಗಿ ಬೆಂಕಿ ಅವಘಡ?
ಗುಡ್ಡೆದ ಭೂತ ಧಾರಾವಾಹಿ ಕತೃ ವಿಧಿವಶ!
– ಹಿರಿಯ ರಂಗಕರ್ಮಿ, ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ
NAMMUR EXPRESS NEWS
ಉಡುಪಿ: ಉಡುಪಿಯ ಅಂಬಲಪಾಡಿಯಲ್ಲಿ ಸೋಮವಾರ ಮನೆಗೆ ಬಿದ್ದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅಶ್ವಿನಿ ಶೆಟ್ಟಿ(50) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಇದೀಗ ಅವರ ವಿಡಿಯೋ ಹಾಗೂ ಅವರ ಮಾತುಗಳು ಎಲ್ಲೆಡೆ ಮೊಬೈಲ್ ವಾಲ್ ಮೇಲೆ ಕಾಣುತ್ತಿದೆ.ಅಶ್ವಿನಿ ಶೆಟ್ಟಿ ಅವರ ಪತಿ ರಮಾನಂದ ಶೆಟ್ಟಿ ಅವರು ಸೋಮವಾರ ಬೆಂಕಿ ಬಿದ್ದ ಕೆಲವೇ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ರಮಾನಂದ ಶೆಟ್ಟಿಹಾಗೂ ಅಶ್ವಿನಿ ಶೆಟ್ಟಿ ಅವರ ಭವ್ಯ ಬಂಗಲೆಯಲ್ಲಿ ಸೋಮವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು ಮನೆಯಲ್ಲಿದ್ದ ವಸ್ತುಗಳ ಬಹುತೇಕ ಸುಟ್ಟು ಕರಕಲಾಗಿದೆ. ಅಲ್ಲದೆ ರಮಾನಂದ ಹಾಗೂ ಅಶ್ವಿನಿ ಅವರು ಗಂಭೀರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಮಾನಂದ ಅವರು ಪ್ರಾಣ ಕಳೆದುಕೊಂಡಿದ್ದು, ಅಶ್ವಿನಿ ಮಂಗಳವಾರ ಪ್ರಾಣಬಿಟ್ಟಿದ್ದಾರೆ. ಮಕ್ಕಳು ಬಾತ್ ರೂಂನಲ್ಲಿ ಓಡಿ ಕುಳಿತಿದ್ದರಿಂದ ಇಬ್ಬರು ಮಕ್ಕಳು ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.ಮನೆಯಲ್ಲಿ ಅಳವಡಿಸಿದ್ದ ಸೆಂಟ್ರಲ್ ಎಸಿಯಿಂದಾಗಿ ಬೆಂಕಿ ಅವಘಡ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ವರದಿಯಾಗಿದೆ. ಆದರೆ ನಿಖರ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ.
90 ಸಾವಿರ ಜನರ ಸಂತಾಪ!
ಅಶ್ವಿನಿ ಅವರು ಇನ್ಸ್ಟಾದಲ್ಲಿ caboose_ballals ಎನ್ನುವ ಪೇಜ್ನಿಂದ ಜನಪ್ರಿಯರಾಗಿದ್ದು, ಸುಮಾರು 90 ಸಾವಿರಕ್ಕೂ ಹೆಚ್ಚು ಫಾಲೋವರ್ಗಳನ್ನು ಹೊಂದಿದ್ದರು. ಆಚಾರ-ವಿಚಾರಗಳಿಗೆ ಸಂಬಂಧಿಸಿದ ರೀಲ್ಸ್ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಿದ್ದರು. ಜತೆಗೆ ಇವರ ಮನೆಯು ಕೂಡ ಅಷ್ಟೇ ದೊಡ್ದ ಭವ್ಯ ಬಂಗಲೆಯಂತೆ ಇತ್ತು. ಆದರೆ, ಕ್ಷಣಮಾತ್ರದಲ್ಲಿ ಹಣ, ಅಂತಸ್ತು ನೆಮ್ಮದಿಯ ಬದುಕಿನೊಂದಿಗೆ ಸುಖವಾಗಿದ್ದ ಇಡೀ ಕುಟುಂಬದ ಯಜಮಾನರು ದುರಂತ್ಯ ಅಂತ್ಯವನ್ನು ಕಂಡಿದ್ದು, ಮಕ್ಕಳಿಬ್ಬರು ಅನಾಥರಾಗಿದ್ದಾರೆ. ಇವರ ಈ ರೀತಿಯ ಸಾವಿಗೆ ಅನೇಕರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
ಹಿರಿಯ ರಂಗಕರ್ಮಿ, ಸಿನಿಮಾ ನಿರ್ಮಾಪಕ ಸದಾನಂದ ಸುವರ್ಣ ಇನ್ನಿಲ್ಲ
ಹಿರಿಯ ಚಿತ್ರ ನಿರ್ಮಾಪಕ, ಲೇಖಕ, ರಂಗಕರ್ಮಿ ಸದಾನಂದ ಸುವರ್ಣ ಅವರು ಮಂಗಳವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಮುಲ್ಕಿ ಮೂಲದವರಾದ ಸದಾನಂದ ಅವರು ಹಲವು ವರ್ಷಗಳ ಕಾಲ ಮುಂಬೈ ಮಹಾನಗರದಲ್ಲಿ ನೆಲೆಸಿದ್ದರು. ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುವರ್ಣರು ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆ ಮಾಡಿದ ಹೆಗ್ಗಳಿಕೆ ಇವರದ್ದು. ಅವರ ಗುಡ್ಡೆದ ಭೂತ ಧಾರಾವಾಹಿ ದೂರದರ್ಶನದಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು. ಸುವರ್ಣರ ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಬಂದಿತ್ತು. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ್ದವರು ಸದಾನಂದ ಸುವರ್ಣರು. ಹವ್ಯಾಸಿ ರಂಗಭೂಮಿ ಕಲಾವಿದರಿಗೆ ಸದಾ ಮಾರ್ಗದರ್ಶಕರಾಗಿದ್ದ ಅವರು ನೂರಾರು ಹಿರಿಯ-ಕಿರಿಯ ಕಲಾವಿದರನ್ನು ಬೆಳೆಸಿದ ಮೇರು ವ್ಯಕ್ತಿತ್ವ ಸದಾನಂದ ಸುವರ್ಣರಲ್ಲಿ ಇತ್ತು.