ಕರಾವಳಿಯಲ್ಲಿ ಕಳೆಗಟ್ಟಿದ ದಸರಾ ರಂಗು!
– ಉಡುಪಿ-ಉಚ್ಚಿಲ ದಸರಾ ಮಹೋತ್ಸವಕ್ಕೆ ಚಾಲನೆ
– ಆಕರ್ಷಕವಾಗಿ ಅಲಂಕಾರಗೊಂಡ ನವದುರ್ಗೆಯರು!
– ಉಡುಪಿ, ಕುದ್ರೋಳಿ, ಉಚ್ಚಿಲ ಸೇರಿ ಹಲವೆಡೆ ದಸರಾ
NAMMUR EXPRESS NEWS
ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ 3ನೇ ವರ್ಷದ ಉಡುಪಿ-ಉಚ್ಚಿಲ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಸ್ಥಾನದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಸಭಾಂಗಣದಲ್ಲಿ ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಯಿತು.
ಪುರೋಹಿತರಾದ ಕೆವಿ ರಾಘವೇಂದ್ರ ಉಪಾಧ್ಯಾಯರು ಪ್ರತಿಷ್ಠಾಪನಾ ಪೂಜೆ ನೆರವೇರಿಸಿ ಪ್ರಸಾದ ವಿತರಿಸಿದರು. ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿ ಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನು ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆ ನೆರವೇರಿತು
ಶಾರದೆ ಪ್ರತಿಷ್ಠಾಪನೆ; ಮಾಜಿ ಸಚಿವ ಜನಾರ್ದನ ಪೂಜಾರಿ ಅವರಿಂದ ಕುದ್ರೋಳಿ ದಸರಾ ಉದ್ಘಾಟನೆ
ದಸರಾ ಕುದ್ರೋಳಿ ಎಂಬ ಶ್ರೀ ಜನಪ್ರೀತಿಗಳಿಸಿದ ಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಇಂದು(ಅ.3) ರಿಂದ ಆರಂಭವಾಗಿದೆ.
ಕೇಂದ್ರದ ಮಾಜಿ ಸಚಿವ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ದಸರಾ ಮಹೋತ್ಸವ ಉದ್ಘಾಟಿಸಿದರು.ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ ಶ್ರೀ ಶಾರದಾ ಮಾತೆಯ ವಿಗ್ರಹವನ್ನು ದೇವಳದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಮಾಡಿಸಿ ದರ್ಬಾರ್ ಹಾಲ್ ನಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇದೇ ವೇಳೆ ಶ್ರೀ ಮಹಾ ಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಅ.13 ರವರೆಗೆ ವಿಶೇಷ ಪೂಜೆ ಹಾಗೂ ಅಲಂಕಾರ ಸಹಿತ ಪೂಜಿಸಲಾಗುತ್ತದೆ. ಕುದ್ರೋಳಿ ಕ್ಷೇತ್ರವು ವಿಶೇಷ ಅಲಂಕಾರದೊಂದಿಗೆ ಕಂಗೊಳಿಸುತ್ತಿದ್ದು, ಮಂಗಳೂರು ನಗರವು ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಕಂಗೊಳಿಸುತ್ತಿದೆ. ಇನ್ನು ಇಂದು ದಸರಾ ಉದ್ಘಾಟನೆಗೆ ದರ್ಬಾರ್ ಹಾಲ್ನಲ್ಲಿ ನಡೆದುಕೊಂಡೇ ಬಂದ ಪೂಜಾರಿಯವರು ಗಮನ ಸೆಳೆದಿದ್ದರು. ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಗಣ್ಯ ಅತಿಥಿಗಳು ದಸರಾ ಉದ್ಘಾಟನೆಯ ಸಂದರ್ಭದ ಭಾಗವಹಿಸಿ, ಶಾರದೆ ಹಾಗೂ ನವದುರ್ಗೆಯರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಕುಡ್ಲದ ಪಿಲಿಪರ್ಬ-2024ರ ಚಪ್ಪರ ಮುಹೂರ್ತ ಕಾರ್ಯಕ್ರಮ
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ, ನಳಿನ್ ಕುಮಾರ್ ಕಟೀಲ್ ಅವರ ಮಾರ್ಗದರ್ಶನ ಹಾಗೂ ಡಿ.ವೇದವ್ಯಾಸ್ ಕಾಮತ್ ರವರ ನೇತೃತ್ವದಲ್ಲಿ ನಡೆಯಲಿರುವ ತೃತೀಯ ವರ್ಷದ “ಕುಡ್ಲದ ಪಿಲಿ ಪರ್ಬ-2024″ರ ಚಪ್ಪರ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಗುರುವಾರ ಮುಂಜಾನೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, “ಕರಾವಳಿ ಭಾಗದಲ್ಲಿ ದಸರಾ ಎಂದರೆ ಅಲ್ಲಿ ಹುಲಿವೇಷ ಇದ್ದೇ ಇರುತ್ತದೆ. ಈ ಕಲೆ ಕರಾವಳಿ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿಯೂ ಜನಪ್ರಿಯತೆ ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಇದೇ ಅಕ್ಟೋಬರ್ 11ರ ಶುಕ್ರವಾರದಂದು ನಡೆಯಲಿರುವ ತೃತೀಯ ವರ್ಷದ ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಮ.ನ.ಪಾ. ಸದಸ್ಯರುಗಳ ಸಹಿತ ಅನೇಕರು ಉಪಸ್ಥಿತರಿದ್ದರು.