ಕರಾವಳಿ, ಚಿಕ್ಕಮಗಳೂರಲ್ಲಿ ಮತ ಹಾಕಿದ ಗಣ್ಯರು!
– ದಕ್ಷಿಣ ಕನ್ನಡ: ಯುಟಿ ಖಾದರ್, ನಳಿನ್ ಸೇರಿ ಗಣ್ಯರಿಂದ ಮತದಾನ
– ಉಡುಪಿ: ಕೋಟಾ ಶ್ರೀನಿವಾಸ್ ಪೂಜಾರಿ, ಜಯಪ್ರಕಾಶ್ ಹೆಗ್ಡೆ ಮತ
– ಕರಾವಳಿಯಲ್ಲಿ ವಿವಿಧ ಶ್ರೀಗಳಿಂದ ಮತದಾನ
NAMMUR EXPRESS NEWS
ಮಂಗಳೂರು/ಉಡುಪಿ/ ಚಿಕ್ಕಮಗಳೂರು: ದಕ್ಷಿಣ ಕನ್ನಡ. ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ರಾಜಕೀಯ ನಾಯಕರು ಬೆಳಗ್ಗೆಯೇ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ನಗರದ ಕಪಿತಾನಿಯೊ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಅದೇರೀತಿ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ತಮ್ಮ ತಂದೆ-ತಾಯಿ ಜತೆ ಬಂದು ರಥಬೀದಿಯ ಸರಕಾರಿ ಹೆಣ್ಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿದರು. ಇನ್ನು ಸ್ಪೀಕರ್ ಯುಟಿ ಖಾದರ್ ಅವರು ಪತ್ನಿ, ಮಗಳ ಜತೆ ಉಳ್ಳಾಲದ ಬೋಳಿಯಾರು ಸರ್ಕಾರಿ ಶಾಲೆಯಲ್ಲಿನ ಬೂತ್ನಲ್ಲಿ ಮತದಾನ ಮಾಡಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಗರದ ಲೇಡಿಹಿಲ್ ಸಂತ ಅಲೋಶಿಯಸ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಮತ ಚಲಾಯಿಸಿದರು. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದಡಿ.ವೇದವ್ಯಾಸ್ ಕಾಮತ್ ಅವರು ಗಾಂಧಿನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಬೂತ್ ನಂಬರ್ 86ರಲ್ಲಿ ಕುಟುಂಬ ಸಮೇತರಾಗಿ ಬಂದು ಮತ ಚಲಾಯಿಸಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಹಾಗೂ ಪತ್ನಿ ಪ್ರಸನ್ನ ಭಂಡಾರಿ ಜತೆಗೆ ಮಂಗಳೂರಿನ ಕದ್ರಿ ಬೂತ್ ನ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ನಗರದ ಕದ್ರಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮತ ಹಾಕಿದ್ದಾರೆ. ಅದೇರೀತಿ ದ.ಕ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಭಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಲೇಡಿಹಿಲ್ ಶಾಲೆಯಲ್ಲಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಕುಂಪಲದ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ್ದಾರೆ. ಸಿಪಿಐಎಂ ಮುಖಂಡ ಬಿಕೆ ಇಮ್ತಿಯಾಝ್ ಅವರು ಮತಗಟ್ಟೆ ಸಂಖ್ಯೆ 49 ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಮತ ಕೇಂದ್ರದಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿಸಿದರು.
ಉಡುಪಿ ಜಿಲ್ಲೆಯಲ್ಲೂ ಶಾಂತಿಯುತ ಮತದಾನ.!
ಉಡುಪಿ : ಭಾರಿ ಜಿದ್ದಾಜಿದ್ದಿನ ಕ್ಷೇತ್ರವಾದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲೂ ಶಾಂತಿಯುತ ಮತದಾನ ನಡೆದಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಮತ ಕ್ಷೇತ್ರವಾದ ಕೋಟತಟ್ಟು ಗ್ರಾಮ ಪಂಚಾಯತ್ ನ ಮತಗಟ್ಟೆ ಸಂಖ್ಯೆ 165 ರಲ್ಲಿ ಮತದಾನ ಮಾಡಿದರು. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಕೋಟ ಶ್ರೀನಿವಾಸ ಪೂಜಾರಿ, ಪತ್ನಿ ಶಾಂತ ಹಾಗೂ ಪುತ್ರಿ ಶೃತಿ ಅವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ. ಜಯಪ್ರಕಾಶ್ ಹೆಗ್ಡೆ ತಮ್ಮ ಸ್ವಗೃಹದ ಸಮೀಪದ ಕೊರ್ಗಿ ಶ್ರೀಮತಿ ಗಿರಿಜಾ ಚಂದ್ರಶೇಖರ ಹೆಗ್ಡೆ ಸರ್ಕಾರಿ ಹಿರಿಯ ಪ್ರ ಮತಗಟ್ಟೆ ಸಂಖ್ಯೆ 97ರಲ್ಲಿ ಮತದಾನ ಮಾಡಿದರು.
ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಕೆ. ಜಯಪ್ರಕಾಶ್ ಹೆಗ್ಡೆಯವರು ಸಹೋದರಿಯರಾದ ಸರೋಜಿನಿ ಹೆಗ್ಡೆ ಹಾಗೂ ಶಶಿಕಲಾ ಹೆಗ್ಡೆ ಜೊತೆಗೆ ಬಂದು ಮತದಾನ ಮಾಡಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉಡುಪಿ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ಉಡುಪಿ ಪಲಿಮಾರು ಹಿರಿಯ ಯತಿ ಶ್ರೀ ವಿದ್ಯಾಧೀಶ ತೀರ್ಥ, ಕಿರಿಯ ಶ್ರೀ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶ ಪ್ರೀಯ ತೀರ್ಥ ಸ್ವಾಮೀಜಿ ಪಿ ನಗರದ ನಾರ್ತ್ ಸರಕಾರಿ ಶಾಲೆಯಲ್ಲಿನ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ತಮ್ಮ ಬೂತ್ ಸಂಖ್ಯೆ 140 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಾಂಬಡಿ ಪದವು ನಲ್ಲಿ ಪತ್ನಿ ಜತೆ ಆಗಮಿಸಿ ಮತದಾನ ಮಾಡಿದರು.