ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ಬೆಂಕಿ: ತಪ್ಪಿತು ದುರಂತ!
– ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ
NAMMUR EXPRESS NEWS
ಕಾರ್ಕಳ: ( Karkala ) ಕಾರ್ಕಳ ನಗರದ ಬಸ್ ನಿಲ್ದಾಣ ಸಮೀಪದಲ್ಲಿನ ಕೆನರಾ ಬ್ಯಾಂಕ್ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಆ. 3ರ ಬೆಳಿಗ್ಗೆ ಸಂಭವಿಸಿದೆ. ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ. ಘಟನೆ ನಡೆದ ತಕ್ಷಣವೇ ಬ್ಯಾಂಕ್ ಸಿಬ್ಬಂದಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿ ರವೀಂದ್ರ, ರೂಪೇಶ್, ಹರಿಪ್ರಸಾದ್, ಕೇಶವ್, ಹಸನ್ ಹಾಗೂ ರವಿಚಂದ್ರ ಪಾಲ್ಗೊಂಡಿದ್ದರು.
ಕಾರ್ಕಳದಲ್ಲಿ ವೈದ್ಯರು, ಪ್ರೊಫೆಸರ್ ಅಡ್ಡಗಟ್ಟಿ ಬೆದರಿಕೆ
ಮಂಗಳೂರಿನ ಹೆಸರಾಂತ ಕಾಲೇಜ್ವೊಂದರ ನಾಲ್ವರು ವೈದ್ಯರು ಹಾಗೂ ಅದೇ ಕಾಲೇಜಿನ ಇಬ್ಬರು ಮಹಿಳಾ ಪ್ರೊಫೆಸರ್ ಅವರೊಂದಿಗೆ ಒಂದೇ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಹಿಂದೂ ಸಂಘಟನೆ ಹೆಸರಲ್ಲಿ ಅನೇಕರು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ. ಮಾಳ ಎಸ್ ಕೆ ಬಾರ್ಡರ್ ಬಳಿಯಿಂದ ಇವರ ಕಾರನ್ನು ಹಿಂಬಾಲಿಸಿ ಮತ್ತೊಂದು ಕಾರಿನಲ್ಲಿ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಒಡ್ಡಿದ್ದರು. ಕಾರಿನಲ್ಲಿದ್ದ ಮಹಿಳೆಯರು ತಕ್ಷಣ 112ಗೆ ಕರೆ ಮಾಡಿ ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಒಂದೇ ಕಾರಿನಲ್ಲಿ ಮಂಗಳೂರಿನಿಂದ ಶೃಂಗೇರಿ ತೆರಳಿ ಕಾರ್ಕಳದ ಕುಂಟಲ್ಪಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿರುವರು ವಿಭಿನ್ನ ಕೋಮಿನವರು ಎಂದು ತಿಳಿದು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರು ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಾದ ಸಂತೋಷ್ ನಂದಳಿಕೆ, ಕಾರ್ತಿಕ್ ಪೂಜಾರಿ, ಸುನೀಲ್ ಮೂಲ್ಯ ಮಿಯ್ಯಾರು, ಸಂದೀಪ್ ಪೂಜಾರಿ ಮಿಯ್ಯಾರು, ಸುಜಿತ್ ಸಫಲಿಗ ತೆಳ್ಳಾರು ಇವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ.
ವಿಟ್ಲದಲ್ಲಿ ವೃದ್ಧನ ಮೇಲೆ ಹಲ್ಲೆಗೆ ಯತ್ನ, ಮನೆಗೆ ಕಲ್ಲು ತೂರಾಟ
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧನ ಮೇಲೆ ತಂಡವೊಂದು ಹಲ್ಲೆಗೆ ಯತ್ನಿಸಿದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ಳಾಡು ಗ್ರಾಮದ ನಾರ್ಶ ಅಲದಡಿ ಎಂಬಲ್ಲಿ ನಡೆದಿದೆ. ವೃದ್ಧ ಇಸ್ಮಾಯಿಲ್ ಮತ್ತು ಆತನ ಪುತ್ರನ ಮೇಲೆ ನಾರ್ಶ ನಿವಾಸಿ ಈಚು ಯಾನೆ ಇಸುಬು ಮತ್ತು ಆತನ ಕುಟುಂಬದವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನ ನಡೆಸಿದ್ದಲ್ಲದೇ, ಮನೆಗೆ ಕಲ್ಲು ತೂರಾಟ ನಡೆಸಿ ಜೀವಬೆದರಿಕೆಯೊಡ್ಡಿದ್ದಾರೆ. ಈ ಪ್ರಕರಣ ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
HOW TO APPLY : NEET-UG COUNSELLING 2023