- ಮೀನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಯುವಕರು
- ಬ್ರಹ್ಮಾವರದಲ್ಲಿ ಘಟನೆ: ಶೃಂಗೇರಿ ಮೂಲದವರ ಸಾವು
NAMMUR EXPRESS NEWS
ಬ್ರಹ್ಮಾವರ : ದೋಣಿ ಮಗುಚಿ ನಾಲ್ವರು ಯುವಕರು ಮೃತಪಟ್ಟ ಹೃದಯವಿದ್ರಾವಕ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ.
ಒಟ್ಟು 7 ಮಂದಿ ಯುವಕರು ದೋಣಿಯಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ.ಮೃತ ಯುವಕರನ್ನು ಹೂಡೆ ನಿವಾಸಿ ಟೈಲರ್ ಫಾರೂಕ್ ಪುತ್ರ ಫೈಝಾನ್ ಹಾಗೂ ಅವರ ಸಹೋದರಿಯ ಪುತ್ರ ಇಬಾದ್ ಹಾಗೂ ಇವರ ಸಂಬಂಧಿ ಶೃಂಗೇರಿ ಮೂಲದ ಸುಫಾನ್, ಫರ್ಹಾನ್ ಎಂದು ಗುರುತಿಸಲಾಗಿದೆ.
ಇನ್ನೂ ಮೂವರು ಯುವಕರು ಈಜಿ ಕುದ್ರು (ನದಿಯಲ್ಲಿರುವ ಸಣ್ಣ ದ್ವೀಪ) ಸೇರುವಲ್ಲಿ ಯಶಸ್ವಿಯಾಗಿ ಪ್ರಾಣ ಉಳಿಸಿಕೊಂಡರು.
ರಮ್ಯಾನ್ ರಜೆ ಹಿನ್ನೆಲೆಯಲ್ಲಿ ಒಟ್ಟು ಏಳು ಯುವಕರು ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆಯ ಗುಡ್ಡರಿ ಕಂಬಳದಿಂದ ಕುಕ್ಕುಡೆಕುದ್ರುವಿಗೆ ಬೋಟ್ ನಲ್ಲಿ ತೆರಳಿದ್ದರು. ಇವರಲ್ಲಿ ಶೃಂಗೇರಿಯ ಯುವಕರು ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು. ಬೋಟ್ ನಲ್ಲಿ ಏಳು ಮಂದಿ ಇದ್ದ ಕಾರಣ, ನಿಯಂತ್ರಣ ತಪ್ಪಿ ಬೋಟ್ ಮಗುಚಿದೆ. ಈ ಸಂದರ್ಭ ಏಳು ಮಂದಿಯೂ ನೀರಿಗೆ ಬಿದ್ದಿದ್ದಾರೆ.ಈ ವೇಳೆ ಮೂವರು ಈಜಿ ಕುದ್ರು ಸೇರಿಕೊಂಡಿದ್ದಾರೆ. ಉಳಿದ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಸಾಕಷ್ಟು ಹುಡುಕಾಟದ ಬಳಿಕ ಮೂವರ ಮೃತದೇಹ ಪತ್ತೆಯಾಗಿದೆ. ಈ ಮೂವರು ಯುವಕರು ಒಂದೇ ಕುಟುಂಬದ ಸೋದರ, ಸೋದರಿಯರ ಮಕ್ಕಳು. ಸೋದರನ ಒಬ್ಬ ಮಗ ಮತ್ತು ಸೋದರಿಯ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ.