ಹೆಬ್ರಿಯಲ್ಲಿ ಮಳೆ ಅಬ್ಬರ, ಅವಾಂತರ!
– ಹೆಬ್ರಿ ತಾಲೂಕಿನಾದ್ಯಂತ ಶಾಲಾ- ಕಾಲೇಜಿಗೆ ರಜೆ ಘೋಷಣೆ
– ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ಮರ : ತಪ್ಪಿದ ಅನಾಹುತ
– ಅಪಾಯದತ್ತ ನದಿಗಳು: ಜನರಿಗೆ ಆಡಳಿತದ ಎಚ್ಚರಿಕೆ
NAMMUR EXPRESS NEWS
ಹೆಬ್ರಿ: ಉಡುಪಿ ಜಿಲ್ಲೆ ಹೆಬ್ರಿಯಲ್ಲಿ ಭಾರೀ ಮಳೆ ಆಗುತ್ತಿದ್ದು, ಭಾರೀ ಗಾಳಿ ಮಳೆಗೆ ಹಲವೆಡೆ ಅನಾಹುತ ಸಂಭವಿಸಿದೆ.
ನದಿ, ಹಳ್ಳಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಮರಗಳು ಧರೆಗೆ ಉರುಳುತ್ತಿವೆ. ಗುಡ್ಡ ಕುಸಿತ ಸಂಭವಿಸುತ್ತಿದೆ.
ಹೆಬ್ರಿ ತಾಲೂಕಿನಾದ್ಯಂತ ಶಾಲಾ- ಕಾಲೇಜಿಗೆ ರಜೆ ಘೋಷಣೆ
ಭಾರೀ ಗಾಳಿಮಳೆ ಹಿನ್ನಲೆ ಹೆಬ್ರಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ (ಇಂದು)ಜು.26ರ ಶುಕ್ರವಾರ ರಜೆ ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಐ.ಟಿ.ಐ. ವಿದ್ಯಾರ್ಥಿಗಳಿಗೆ ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಹೆಬ್ರಿ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗಾಳಿ ಮಳೆಯಿಂದ ತರಗತಿ ನಡೆಸಲು ಅನಾನುಕೂಲವಾಗುತ್ತಿದ್ದಲ್ಲಿ, ಅಥವಾ ಮಳೆ ಜೋರಾಗಿದ್ದಲ್ಲಿ ಮುಖ್ಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಮತ್ತು ಶಾಲಾ ಪರಿಸ್ಥಿತಿ ನೋಡಿಕೊಂಡು ರಜೆ ನೀಡಲು ಬಿಇಒಗಳಿಗೆ ಕುಂದಾಪುರ ಹಾಗೂ ಬೈಂದೂರಿನ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಚಲಿಸುತ್ತಿದ್ದ ಬಸ್ಸಿನ ಮೇಲೆ ಬಿದ್ದ ಮರ : ತಪ್ಪಿದ ಅನಾಹುತ
ಹೆಬ್ರಿ ತಾಲೂಕಿನ ಕುಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆ ಎಂಬಲ್ಲಿ ಭಾರೀ ಗಾಳಿ ಮಳೆಗೆ ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು ಬಸ್ಸಿನ ಮುಂದುಗಡೆಯ ಗಾಜು ಸಂಪೂರ್ಣ ಹೊಡೆದು ಹೋಗಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ವರದಿಯಾಗಿದೆ.
ಬಸ್ ನಿಧಾನವಾಗಿ ಹೆಬ್ರಿ ಕಡೆಗೆ ಸಾಗುತ್ತಿರುವಾಗ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಮರ ಬಸ್ ಮೇಲೆ ಬಿದ್ದಿದೆ. ಬಸ್ಸಿನ ಮುಂದುಗಡೆಯ ಗಾಜು, ಸೈಡ್ ಮಿರರ್ ಸೇರಿದಂತೆ ಕೆಲವೆಡೆ ಹಾನಿಯಾಗಿದೆ.
ಒಂದು ವೇಳೆ ಮರ ನೇರವಾಗಿ ಬಸ್ಸಿನ ಮೇಲೆ ಬಿದ್ದಿದ್ದರೆ ಪ್ರಾಣ ಹಾನಿಯಾಗುವ ಸಂಭವಿತ್ತು. ಮರ ವಿದ್ಯುತ್ ತಂತಿಯ ಮೇಲೆ ಬಿದ್ದು ಬಸ್ಸಿಗೆ ಹೊಡೆದು ನೇತಾಡುತ್ತಿತ್ತು. ಬಸ್ಸಿನಲ್ಲಿ ಕೆಲವು ಜನ ಪ್ರಯಾಣಿಕರು ಮಾತ್ರ ಇದ್ದಿದ್ದರಿಂದ ನಡೆಯಬಹುದಾದ ದೊಡ್ಡ ಅನಾಹುತ ಒಂದು ತಪ್ಪಿದೆ.
ಚಾಲಕನ ಪಕ್ಕದ ಎಡಗಡೆಯ ಸೀಟಿನಲ್ಲಿ ಕುಳಿತಿದ್ದರೂ ದೊಡ್ಡಮಟ್ಟದ ಅಪಾಯ ಇದ್ದಿತ್ತು. ಯಾರು ಇಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಒಂದು ವೇಳೆ ಇನ್ನೊಂದು ಬದಿ ಮರ ಬಿದ್ದಿದ್ದರೆ ಮನೆಯೊಂದು ಸಂಪೂರ್ಣ ಹಾನಿಯಾಗುತ್ತಿತ್ತು ಎಂದು ತಿಳಿದುಬಂದಿದೆ.