ಬ್ರಹ್ಮಾವರ: ಬಿಜೆಪಿ ಮುಖಂಡನ ಮನೆಯಲ್ಲಿ ಅಕ್ರಮ ಮದ್ಯ ವಶ!
– ಆರೋಪಿ ರಮೇಶ್ ಪ್ರಭು ಬಂಧನ: ಏನಿದು ಪ್ರಕರಣ?
– ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ
NAMMUR EXPRESS NEWS
ಬ್ರಹ್ಮಾವರ/ಕುಂದಾಪುರ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ರಾಜ್ಯದ ಹಲವೆಡೆ ಮದ್ಯ, ಹಣ ಸೇರಿದಂತೆ ಅಕ್ರಮ ಚಟುವಟಿಕೆಗಳು ಒಂದೊಂದಾಗಿ ಬಯಲಾಗುತ್ತಿವೆ. ಇದೀಗ ಬ್ರಹ್ಮಾವರದಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡನ ಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮದ್ಯ ಪತ್ತೆಯಾಗಿದೆ. ಆರೋಪಿ ರಮೇಶ್ ಪ್ರಭು ಮನೆ ಮೇಲೆ ಸೋಮವಾರ ರಾತ್ರಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಲಕ್ಷಾಂತರ ಮೌಲ್ಯದ ಡಿಫೆನ್ಸ್ (ಮಿಲಿಟರಿ) ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಬಕಾರಿ ಜಂಟಿ ಆಯುಕ್ತರು, ಮಂಗಳೂರು ವಿಭಾಗ ಹಾಗೂ ಅಬಕಾರಿ ಉಪ ಆಯುಕ್ತರು ಉಡುಪಿ ಜಿಲ್ಲೆ ಇವರುಗಳು ಮಾರ್ಗದರ್ಶನದಡಿ ಖಚಿತ ಮಾಹಿತಿ ಮೇರೆಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಬ್ರಹ್ಮಾವರ ಇಂದಿರಾ ನಗರದಲ್ಲಿರುವ ರಮೇಶ್ ಪ್ರಭು ಮನೆ ಮೇಲೆ ದಾಳಿ ನಡೆಸಲಾಗಿತ್ತು. ರಮೇಶ್ ಪ್ರಭು ಅವರ ಪುತ್ರ ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾದ ಮುಖಂಡ ಎಂದು ತಿಳಿದು ಬಂದಿದೆ.
ಆರೋಪಿಗಳ ಬಳಿಯಿಂದ ಒಟ್ಟು 33.500 ಲೀಟರ್ ಮಿಲಿಟರಿಯವರಿಗೆ ಸಂಬಂದಿಸಿದ ಮದ್ಯ ಪತ್ತೆಯಾಗಿದ್ದು, ಇದರ ಒಟ್ಟು ಮೌಲ್ಯ 1,55,000ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ರಮೇಶ್ ಪ್ರಭುವನ್ನು ಬಂಧಿಸಲಾಗಿದೆ. ಈ ಬಗ್ಗೆ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕಿ ಮಧುರಾ. ಎನ್. ದಾಸ್ ಮೊಕದ್ದಮೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಂದಾಪುರದ ಬಳಿ ಭೀಕರ ಅಪಘಾತ: ಮೂವರು ಗಂಭೀರ!
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದ ಕೆಎಸ್ಆರ್ಟಿಸಿ ಬಸ್ ಡಿಪೋ ಬಳಿ ಮಂಗಳವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ನಡೆದಿದ್ದು, ಕಾರಿನಲ್ಲಿ ಸಂಚರಿಸುತ್ತಿದ್ದ ಮೂವರ ಸ್ಥಿತಿ ಗಂಭೀರವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ಕೇರಳ ರಾಜ್ಯದ ಮಾಹೆ ಎಂಬಲ್ಲಿಗೆ ಟೊಯೊಟೊ ಫಾರ್ಚ್ಯೂನರ್ ಕಾರಿನಲ್ಲಿ ತೆರಳುತ್ತಿರಬೇಕಾದರೆ, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿದೆ. ಕಾರು ಗುದ್ದಿದ ರಭಸಕ್ಕೆ ಅದು ಮೇಲುರಸ್ತೆಯಿಂದ ಏಕಾಏಕಿ ಕೆಳಕ್ಕೆ ಪಲ್ಟಿಯಾಗಿದೆ. ಕಾರಿನಲ್ಲಿ ಮೂವರು ವ್ಯಕ್ತಿಗಳು ಸಂಚರಿಸುತ್ತಿದ್ದು, ಮೂವರ ಸ್ಥಿತಿಯೂ ಗಂಭೀರವಾಗಿದ್ದು, ಕುಂದಾಪುರದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ತಲೆಕೆಳಗಾಗಿ ಕೆಳಕ್ಕೆ ಬಿದ್ದಿದ್ದು, ಅದು ಕೂಡ ಸರ್ವೀಸ್ ರಸ್ತೆಯಾಗಿದ್ದು, ಆ ಸಮಯದಲ್ಲಿ ಯಾವುದೇ ವಾಹನಗಳು ಹಾದು ಹೋಗದಿದ್ದ ಕಾರಣ ಅಷ್ಟೊಂದು ದುರಂತವಾಗಿಲ್ಲ. ಇಲ್ಲದಿದ್ದರೆ ಬಿದ್ದ ವಾಹನದ ಮೇಲೆ ಬೇರೆ ದೊಡ್ಡ ವಾಹನಗಳು ಹಾದು ಹೋಗುವ ಅಪಾಯವಿತ್ತು. ಘಟನಾ ಸ್ಥಳಕ್ಕೆ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರ್ವಿಸ್ ರಸ್ತೆಯಲ್ಲಿ ಕಾರು ಬಿದ್ದ ಪರಿಣಾಮ ಕೆಲಕಾಲ ಸಂಚಾರ ವ್ಯತ್ಯಯ ಕೂಡ ಉಂಟಾಗಿತ್ತು.