ಕರಾವಳಿಯಲ್ಲಿ ಹೆಚ್ಚಾದ ಸೈಬರ್ ಮೋಸ.. ಎಚ್ಚರ!
– ಅಪರಿಚಿತ ಫೋನ್ ಕರೆ, ಬ್ಯಾಂಕ್ ಖಾತೆಯಿಂದ ಹಣ ಗುಳುಂ!
– ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು!
– ಕಾರ್ಕಳ: ಹೋಂ ನರ್ಸ್ನಿಂದ 9 ಲಕ್ಷ ರೂ. ವಂಚನೆ ಪ್ರಕರಣ
– ಇಬ್ಬರು ಆರೋಪಿಗಳ ಬಂಧನ
NAMMUR EXPRESS NEWS
ಉಪ್ಪಿನಂಗಡಿ: ಅಪರಿಚಿತ ವ್ಯಕ್ತಿಯ ಪೋನ್ ಕರೆ ಸ್ವೀಕರಿಸಿದ ತಕ್ಷಣ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಪ್ರಕರಣ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಪೋನ್ ಕರೆಯೊಂದು ಬಂದಿದ್ದು, ಕರೆ ಸ್ವೀಕರಿಸಿದಾಗ ಕರೆ ಮಾಡಿದ ವ್ಯಕ್ತಿ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಕರೆ ಕಡಿತಗೊಂಡಿದೆ. ಸಂಶಯಕ್ಕೀಡಾಗಿ ಟ್ರೂ ಕಾಲರ್ ಮೂಲಕ ಕರೆಯ ಮೂಲವನ್ನು ಶೋಧಿಸಿದ ಅವರಿಗೆ ಅದರಲ್ಲಿ ವಂಚನಾ ಕರೆ ಎಂಬ ಸಂದೇಶ ಲಭಿಸಿತು. ಅಷ್ಟರಲ್ಲಿ ಅವರ ಮೊಬೈಲ್ ನಂಬರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ ₹161 ವರ್ಗಾವಣೆಗೊಂಡಿದ್ದು ಹಾಗೂ ₹14,839 ಆಟೊ ಪೇ ಆಗಿದೆ ಎಂಬ ಸಂದೇಶ ಬಂದಿತ್ತು. ಈ ಬಗ್ಗೆ ಐಪಿಪಿಸಿ ಬಗ್ಗೆ ಇಲಾಖೆ ಅಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಆಟೊ ಪೇಯಲ್ಲಿ ₹161 ವರ್ಗಾವಣೆಗೊಂಡಿದ್ದು, ಖಾತೆಯಲ್ಲಿ ₹14,839 ಇಲ್ಲದೆ ಇದ್ದುದರಿಂದ ತಡೆ ಹಿಡಿಯಲಾಗಿತ್ತು. ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಬಂದಿದ್ದು, ಆಗ ಅವರು ಕರೆ ಸ್ವೀಕರಿಸಲಿಲ್ಲ. ಅಪರಿಚಿತ ವ್ಯಕ್ತಿ 68778220051 ಸಂಖ್ಯೆಯಿಂದ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಕೂಡಲೇ ಖಾತೆಯಲ್ಲಿದ್ದ ಹಣ ಆಟೊ ಪೇ ಮೂಲಕ ವರ್ಗಾವಣೆಗೊಂಡಿರುವುದು ಅಚ್ಚರಿ ಮೂಡಿಸಿದೆ. ಪ್ರಕರಣದ ಬಗ್ಗೆ ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ.
* ಕಾರ್ಕಳ: ಹೋಂ ನರ್ಸ್ನಿಂದ 9 ಲಕ್ಷ ರೂ. ವಂಚನೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ
ಕಾರ್ಕಳ: ಹೋಂ ನರ್ಸ್ ಆಗಿ ಮನೆ ಸೇರಿಕೊಂಡು ಮನೆ ಯಜಮಾನರ ಗೂಗಲ್ ಪೇ ಪಿನ್ ಕದ್ದು ನೋಡಿ 9 ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಡಿ.14ರಂದು ಮುಂಬಯಿ ದಹಿಸರ್ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಕುಕ್ಕುಂದೂರಿನ ಕುಪ್ಪಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (28) ಮತ್ತು ತೆಳ್ಳಾರು ನಿವಾಸಿ ರತ್ನಾಕರ್ (50) ಎಂದು ತಿಳಿದು ಬಂದಿದೆ. ಆರೋಪಿಗಳು ಶಶಿಧರ್ (75) ಎಂಬುವವರಿಗೆ 9 ಲಕ್ಷ ರೂ ವಂಚನೆ ಮಾಡಿದ್ದಾರೆ. ಶಶಿಧರ್ ಅವರ ಕೋರಿಕೆಯ ಮೇರೆಗೆ ಅಲೈಟ್ಕೇರ್ ಎಂಬ ಸಂಸ್ಥೆಯ ಆರೋಪಿ ರತ್ನಾಕರ್ ನಿಂದ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಮನೆಗೆ ಕೆಲಸಕ್ಕೆ ನಿಯೋಜನೆಗೊಂಡಿದ್ದರು.
ಈ ವೇಳೆ ಶಶಿಧರ್ ಅವರು ಬೇರೆಯವರಿಗೆ ಹಣ ವರ್ಗಾವಣೆ ಮಾಡುವ ವೇಳೆ ಆರೋಪಿಯು ಗೂಗಲ್ ಪೇ ಪಿನ್ ನಂಬರ್ ಗಮನಿಸಿದ್ದಾರೆ. ಬಳಿಕ ಹಂತಹಂತವಾಗಿ ಲಕ್ಷಾಂತರ ರೂ. ಹಣವನ್ನು ಭಾರತ್ ಬ್ಯಾಂಕ್ ಕೋ-ಅಪರೇಟಿವ್ ಸೊಸೈಟಿ ಖಾತೆಗೆ ಗೂಗಲ್ ಪೇ ಮುಖಾಂತರ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತನಿಖೆ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆ ಪೊಲೀಸರು ಆರೋಪಿಗಳ ಪತ್ತೆ ಬಲೆ ಬೀಸಿದ್ದರು. ಆರೋಪಿಗಳು ಮುಂಬಯಿಯಲ್ಲಿ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಅಲ್ಲಿಗೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.