ಗೋ ಉಳಿಸಿ ಬರೀ ರಾಜಕೀಯಕ್ಕೆ ಸೀಮಿತ ಆಗ್ತಿದೆಯಾ?
– ಮಲೆನಾಡು ಗಿಡ್ಡ ತಳಿ ಸಂಶೋಧನಾ ಕೇಂದ್ರಕ್ಕೆ ಬೀಗ?
– ಇದೀಗ ಯಾರಿಗೂ ಬೇಡದ ಕೂಸು ಮಹತ್ವಕಾಂಕ್ಷೆಯ ಕೇಂದ್ರ!
– ತಾಲೂಕುಗಳಲ್ಲಿ ನಿರ್ಮಾಣವಾಗದ ಗೋ ಶಾಲೆ!?
NAMMUR EXPRESS NEWS
ಶಿವಮೊಗ್ಗ/ ಚಿಕ್ಕಮಗಳೂರು: ರಾಜ್ಯದ ಪಶು ವರ್ಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಮಲೆನಾಡು ಗಿಡ್ಡ ತಳಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಪಶು ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಸ್ಥಾಪಿಸಿದ್ದ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಬೀಗ ಜಡಿಯುವ ಸ್ಥಿತಿಗೆ ತಲುಪಿದೆ. ಯಾವ ಸರ್ಕಾರ, ರಾಜಕಾರಣಿಗಳಿಗೆ ನಿಜವಾದ ಗೋ ಪ್ರೇಮ ಮಾತ್ರ ಕಾಣುತ್ತಿಲ್ಲ.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯ ಮಂತ್ರಿ ಆಗಿದ್ದಾಗ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲಾಯಿತು.
ಆರಂಭದಲ್ಲಿ 1 ಕೋಟಿ ರೂ. ಅನುದಾನ ಸಹ ಮಂಜೂರು ಮಾಡಲಾಗಿತ್ತು. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕೇಂದ್ರದ ಜವಾಬ್ದಾರಿ ಹೊರಲು ಹಿಂದೇಟು ಹಾಕಿದ್ದರಿಂದ ಸರಕಾರ ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿರುವ ಮಲೆನಾಡು ಗಿಡ್ಡ ತಳಿ ಸಂಶೋಧನೆ ಹಾಗೂ ಮಾಹಿತಿ ಕೇಂದ್ರಕ್ಕೆ ಬೀಗ ಜಡಿಯಲಾಗಿದೆ.
ಮ್ಯಾನೇಜ್ ಮೆಂಟ್ ವಿಭಾಗವು ಇದರ ಜವಾಬ್ದಾರಿ ಹೊತ್ತುಕೊಂಡಿದ್ದು, ವಾರ್ಷಿಕ ವಿವಿಯಿಂದ ಸುಮಾರು 2 ಲಕ್ಷ ರೂ. ಮಂಜೂರು ಮಾಡಲಾಗುತ್ತಿತ್ತು. ಈಗ ಅದನ್ನೂ ಸಹ ನಿಲ್ಲಿಸಲಾಗಿದೆ. ಕೇಂದ್ರಕ್ಕೆ ಪ್ರತ್ಯೇಕವಾಗಿ ನೀಡಲಾಗಿದ್ದ ವಾಹನ ಹಿಂಪಡೆಯಲಾಗಿದೆ. ಜತೆಗೆ, ಇದಕ್ಕೆ ಸಿಬ್ಬಂದಿ ಇಲ್ಲದ್ದರಿಂದ ಯಾವುದೇ , ಸಂಶೋಧನೆ ಕಾರ್ಯಗಳು ನಡೆಯುತ್ತಿಲ್ಲ. ಒಟ್ಟಾರೆ, ಮಹತ್ವ ಕಾಂಕ್ಷೆಯೊಂದಿಗೆ ಆರಂಭಗೊಂಡಿದ್ದ ಕೇಂದ್ರ ಈಗ ಯಾರಿಗೂ ಬೇಡದ ಕೂಸಾಗಿದೆ.
ಗೋ ಪ್ರೇಮ ಬರೀ ರಾಜಕಾರಣ!
ಮಲೆನಾಡು ಸೇರಿ ರಾಜ್ಯದಲ್ಲಿ ಗೋ ಪ್ರೇಮ ಬರೀ ರಾಜಕೀಯಕ್ಕೆ ಸೀಮಿತವಾಗುತ್ತಿದೆ. ಹಾದಿ ಬೀದಿಯಲ್ಲಿ ಗೋವುಗಳನ್ನ ಬಿಡಲಾಗುತ್ತಿದೆ. ಆದರೆ ತಾಲೂಕಿನಲ್ಲಿ ಒಂದು ಗೋ ಶಾಲೆ ಬೇಕು ಎಂಬ ಪ್ರಸ್ತಾಪ ಅಡಿ ಬಿದ್ದಿದೆ.
ಗೋ ಶಾಲೆ ಯಾವಾಗ?
ಪ್ರತಿ ತಾಲೂಕಿನಲ್ಲಿ ಒಂದು ಗೋ ಶಾಲೆ ಮಾಡಿ ಅಲ್ಲಿಗೆ ದಾನಿಗಳು, ಎನ್ ಜಿ ಓ, ಸಂಘಟನೆಗಳ ಸಹಕಾರದಿಂದ ರೈತರ ಸಹಭಾಗಿತ್ವದಲ್ಲಿ ಗೋ ಸಾಕಿ ಅದರಿಂದ ಧೂಪ, ಗೊಬ್ಬರ ಪರ್ಯಾಯ ಉದ್ಯಮ ಮಾರ್ಗ ಕಂಡುಕೊಂಡಲ್ಲಿ ಲಾಭದಾಯಕವಾಗಿ ನಡೆಸಲು ಸಾಧ್ಯ. ಆದರೆ ಇದಕ್ಕೆ ಯಾರಿಗೂ ಮನಸ್ಸಿಲ್ಲ.