ಬರಗಾಲದ ಛಾಯೆ: ಆತಂಕದಲ್ಲಿ ಜನ!
– ಇದು ಮಳೆಗಾಲವೋ… ಬೇಸಿಗೆ ಕಾಲವೋ..?
– ಭತ್ತದ ಗದ್ದೆಗೆ ನೀರಿಲ್ಲ, ಮೆಣಸು, ಕಾಫಿ ಕಥೆ ಕಷ್ಟ
NAMMUR EXPRESS NEWS
ಮಲೆನಾಡು/ಕರಾವಳಿ: ರಾಜ್ಯದಲ್ಲಿ ಕಳೆದ ಒಂದು ತಿಂಗಳಿಂದ ಮಳೆ ಮಾಯವಾಗಿದೆ. ಅತೀ ಹೆಚ್ಚು ಮಳೆ ಬೀಳುವ ಮಲೆನಾಡು ಮತ್ತು ಕರಾವಳಿಯಲ್ಲೇ ಮಳೆ ಇಲ್ಲದಾಗಿದೆ. ಇದರಿಂದ ರೈತರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಒಂದು ಕಡೆ ಭತ್ತದ ಗದ್ದೆಗಳಲ್ಲಿ ನಾಟಿ ಮಾಡಲಾಗಿದೆ. ಆದ್ರೆ ನೀರು ಇಲ್ಲದೆ ಒಣಗಿ ಹೋಗುತ್ತಿದೆ. ಜುಲೈನಲ್ಲಿ ಹದಿನೈದು ದಿನಗಳ ಕಾಲ ಸುರಿದ ಮಳೆಯಿಂದ ನದಿಗಳಲ್ಲಿ ನೀರಿನ ಮಟ್ಟ ಸ್ವಲ್ಪ ಏರಿಕೆಯಾಗಿತ್ತು. ಆದರೆ, ನಂತರ ಒಂದು ತಿಂಗಳಿನಿಂದ ಬೇಸಿಗೆಯಂಥ ಸುಡು ಬಿಸಿಲಿನ ವಾತಾರಣ ಇರುವುದರಿಂದ ನದಿಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಹಳ್ಳ ತೊರೆಗಳುಬತ್ತಿ ಹೋಗಿವೆ. ಕೆರೆಗಳಲ್ಲೂ ನೀರು ಖಾಲಿಯಾಗುತ್ತಿದೆ.
ಇದು ಮಳೆಗಾಲವೋ… ಬೇಸಿಗೆ ಕಾಲವೋ..?
ಇದು ಮಳೆಗಾಲವೋ ಬೇಸಿಗೆ ಕಾಲವೋ ಗೊತ್ತಾಗದ ಸ್ಥಿತಿಯಲ್ಲಿ ಜನರಿದ್ದಾರೆ. ಆಗಸ್ಟ್ನಲ್ಲೇ ಈ ಸ್ಥಿತಿಯಾದರೆ ಮುಂದೇನು ಎಂಬ ಚಿಂತೆ ಕೃಷಿಕರಲ್ಲಿ ಆತಂಕ ಸೃಷ್ಟಿಸಿದೆ. ಮಲೆನಾಡು, ಕರಾವಳಿ ಸೇರಿ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನಿಂದ ಜಲ ಮೂಲಗಳು ಬತ್ತಿ ಹೋಗಿರುವುದರಿಂದ ಕುಡಿಯುವ ನೀರಿಗೂ ಸಂಚಾಕಾರ ಎದುರಾಗಿದೆ.
ಭತ್ತದ ಗದ್ದೆಗೆ ನೀರಿಲ್ಲ, ಮೆಣಸು, ಕಾಫಿ ಕಥೆ ಕಷ್ಟ
ಮಳೆಯನ್ನೇ ನಂಬಿ ನಾಟಿ ಮಾಡಿದ್ದ ಭತ್ತದ ಗದ್ದೆಗಳು ಸಂಪೂರ್ಣವಾಗಿ ಒಣಗಿ ಹೋಗಿದೆ. ಭತ್ತ ಮಾತ್ರ ಅಲ್ಲದೆ ಕಾಫಿ, ಕಾಳು ಮೆಣಸು ಸೇರಿ ಎಲ್ಲಾ ಕೃಷಿಗೂ ಮಳೆ ಬರದಿದ್ದರೆ ಬರ ಖಂಡಿತ ಎನ್ನುವ ಸ್ಥಿತಿ ಇದೆ. ಅನೇಕ ಪ್ರದೇಶಗಳಲ್ಲಿ ನಾಟಿ ಮಾಡಿದ್ದ ಭತ್ತದ ಗದ್ದೆಗಳನ್ನು ಹಾಳು ಬಿಡಲಾಗಿದೆ. ಕೆಲವೆಡೆ ಅಗಡಿಗಳಲ್ಲಿಯೇ ಸಸಿಮಡಿಗಳು ಉಳಿದಿದ್ದು, ನಾಟಿ ಕಾರ್ಯವನ್ನೇ ಕೈ ಬಿಡಲಾಗಿದೆ. ಕಾಳು ಮೆಣಸಿನಲ್ಲಿ ತೆನೆಗಳು ಕಾಣಿಸಿಕೊಳ್ಳುತ್ತಿದ್ದು, ತೆನೆ ಕಟ್ಟುವ ವೇಳೆ ಮಳೆಯಿಲ್ಲದೇ ತೆನೆಗಳು ಕಪ್ಪಾಗ ಉದುರತೊಡಗಿವೆ. ಕಾಫಿ ಬಲಿಯುವ ವೇಳೆ ಗೊಬ್ಬರದ ಅಗತ್ಯವಿದ್ದು, ಬಲಿಯುತ್ತಿರುವ ಕಾಫಿಗೆ ಗೊಬ್ಬರ ಹಾಕಲು ಮಳೆಯಿಲ್ಲದೇ ಪರದಾಡುವಂತಾಗಿದೆ.
ಅಡಿಕೆ ಬೆಳೆಗಾರರು ಖುಷಿ ಪಡುವಂತಿಲ್ಲ!
ಮಳೆ ಅಡಿಕೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ. ಈಗ ಮಳೆ ಬಾರದಿದ್ದರೆ ಅಡಿಕೆ ಕೊಯ್ಲು ಸಮಯದಲ್ಲಿ ಮಳೆ ಬಂದರೆ ಅಡಿಕೆ ಹಾನಿ ಆಗುತ್ತದೆ. ಜತೆಗೆ ಏರುತ್ತಿರುವ ಕಾರ್ಮಿಕರ ಕೊರತೆ, ಅಕ್ಕಿ ಸೇರಿ ಅಗತ್ಯ ವಸ್ತುಗಳ ಬೆಲೆ ಅಡಿಕೆ ಬೆಳೆಗಾರರಿಗೂ ಸಂಕಟ ತರಲಿದೆ.