ಕರಾವಳಿ ಬ್ರೇಕಿಂಗ್ ನ್ಯೂಸ್
– ಮಂಗಳೂರಿನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ ಡಿಸಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನ!
– ಗಂಭೀರ ಸ್ಥಿತಿಯಲ್ಲಿರುವ ಅಧಿಕಾರಿಗೆ ವೆನ್ಲಾಕ್ನಲ್ಲಿ ಚಿಕಿತ್ಸೆ
– ಬೆಳ್ತಂಗಡಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪಿಡಿಒ ಆತ್ಮಹತ್ಯೆ ಬೆನ್ನಲ್ಲೇ ದ.ಕ.ದಲ್ಲಿ ಮತ್ತೊಂದು ಪ್ರಕರಣ
NAMMUR EXPRESS NEWS
ಮಂಗಳೂರು: ಕಳೆದ ವಾರ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬಂಟ್ವಾಳದ ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಅವರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದ ಬೆನ್ನಲ್ಲೇ ಇದೀಗ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡಿರು ಉದ್ಯವಾರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಹಿಂದೆ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಧರ್ ಹೆಗಡೆ ಆತ್ಮಹತ್ಯೆಗೆ ಯತ್ನಿಸಿರುವ ಅಧಿಕಾರಿಯಾಗಿದ್ದಾರೆ. ಶ್ರೀಧರ್ ಅವರನ್ನು ನಗರದ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಏಕಗವಾಕ್ಷಿ ಪದ್ದತಿ ತಂಡದ ಸದಸ್ಯರನ್ನಾಗಿ ಶ್ರೀಧರ್ ಅವರನ್ನು ನಿಯೋಜಿಸಲಾಗಿತ್ತು. ಇಂದು ಬೆಳಗ್ಗೆ ಶ್ರೀಧರ್ ಅವರು ಕರ್ತವ್ಯದಲ್ಲಿ ಇರುವಾಗಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ವೈಯಕ್ತಿಕ ಕಾರಣಗಳಿಗೆ ಶ್ರೀಧರ್ ಆತ್ಮಹತ್ಯೆ ಯತ್ನ ಮಾಡಿರುವುದಾಗಿ ಪ್ರಾಥಮಿಕ ವರದಿಗಳು ತಿಳಿಸಿವೆ. 2019ರಿಂದ ಶ್ರೀಧರ್ ಅವರು ಕಡಿರು ಉದ್ಯಾವರ ಪಂಚಾಯತ್ ವ್ಯಾಪ್ತಿಯಲ್ಲಿ ಪಿಡಿಓ ಆಗಿ ಸೇವೆ ಸಲ್ಲಿಸಿ, ಕಳೆದ ಪೆಬ್ರವರಿ ತಿಂಗಳಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಬೇರೆ ಕಡೆ ಕತರ್ತವ್ಯಕ್ಕೆ ಜಾಗ ತೋರಿಸದಿದ್ದ ಕಾರಣ ಸ್ಥಳ ನಿಯೋಜನೆಯ ನಿರೀಕ್ಷೆಯಲ್ಲಿದ್ದರು. ಶ್ರೀಧರ್ ಅವರ ಪತ್ನಿಯು ಬೆಳ್ತಂಗಡಿಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಶ್ರೀಧರ್ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾದ ಕೂಡಲೇ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಒ ಡಾ. ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಜಿಲ್ಲಾ ಪಂಚಾಯತ್ನ ಲೆಕ್ಕಾಧೀಕ್ಷ ಬಾಲು ಡಿಎಂ ಸೇರಿದಂತೆ ಸಂಬಂಧಪಟ್ಟ ಎಲ್ಲ ಇಲಾಖಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳುವ ಜತೆಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ಕೊಲ್ಪೆದಬೈಲು ನಿವಾಸಿಯಾಗಿರುವ ಲಕ್ಷ್ಮೀ ನಾರಾಯಣ ಸುಮಾರು 6 ವರ್ಷಗಳಿಂದ ಬಂಟ್ವಾಳ ತಾಲೂಕು ಅಮ್ಟಾಡಿ ಗ್ರಾಮ ಪಂಚಾಯತ್ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದರು. ಮಾ. 27 ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ ಬರುವುದಾಗಿ ತನ್ನ ಪತ್ನಿಗೆ ತಿಳಿಸಿ ಹೋದವರು ಬಳಿಕ ನಾಪತ್ತೆಯಾಗಿದ್ದರು. ಮೂರು ದಿನದ ಬಳಿಕ ಧರ್ಮಸ್ಥಳ ಸಮೀಪದ ಪಟ್ರಮೆ ನದಿಯಲ್ಲಿ ಲಕ್ಷ್ಮಿನಾರಾಯಣ ಅವರ ಮೃತದೇಹ ಪತ್ತೆಯಾಗಿತ್ತು. ಅವರು ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತಗೊಂಡಿತ್ತು. ಲಕ್ಷ್ಮಿನಾರಾಯಣ ಅವರು ಕೂಡ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡು ಬಳಿಕ ನಾಪತ್ತೆಯಾಗಿದ್ದರು.